ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ | ಸಭೆ, ಸಮಾರಂಭ: ಅನುಮತಿ ಕಡ್ಡಾಯ

ಜಿಲ್ಲಾ ಚುನಾವಣಾಧಿಕಾರಿ ಬೊಮ್ಮನಹಳ್ಳಿ ಸೂಚನೆ
Last Updated 22 ಸೆಪ್ಟೆಂಬರ್ 2019, 11:58 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಗೋಕಾಕ, ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸಭೆ, ಸಮಾರಂಭ ಅಥವಾ ಮೆರವಣಿಗೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಇಲ್ಲಿ ಭಾನುವಾರ ನಡೆದ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವಂತಿಲ್ಲ. ಖಾಸಗಿ ಜಾಗದಲ್ಲಿ ಪ್ರಚಾರ ಸಾಮಗ್ರಿ ಅಳವಡಿಸಲು ಮಾಲೀಕರು ಹಾಗೂ ಸ್ಥಳೀಯ ಸಂಸ್ಥೆಯ ಅನುಮತಿ ಪಡೆದಿರಬೇಕು. ಚುನಾವಣಾ ಪ್ರಚಾರ ನಡೆಸಬೇಕಾದರೆ ನಿಯಮಾವಳಿ ಪ್ರಕಾರ ಪೂರ್ವಾನುಮತಿ ತೆಗೆದುಕೊಳ್ಳಬೇಕು. ಪಕ್ಷದ ಪದಾಧಿಕಾರಿಗಳ ವಾಹನ, ಧ್ವನಿವರ್ಧಕಗಳು, ಖಾಸಗಿ ಸ್ಥಳದ ಬಳಕೆಗೆ ಅವುಗಳ ಮಾಲೀಕರ ಮತ್ತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅನುಮತಿ ಅಗತ್ಯ’ ಎಂದು ಮಾಹಿತಿ ನೀಡಿದರು.

ಚುನಾವಣಾ ವೆಚ್ವ ವೀಕ್ಷಕರು:

‘ಖರ್ಚು-ವೆಚ್ಚದ ಮೇಲೆ ನಿಗಾ ವಹಿಸಲು ಚುನಾವಣಾ ವೀಕ್ಷಕರು ಶೀಘ್ರ ಜಿಲ್ಲೆಗೆ ಆಗಮಿಸಲಿದ್ದಾರೆ. ಚುನಾವಣಾ ಸಂದರ್ಭಗಳಲ್ಲಿ ದುರ್ಬಳಕೆ ತಡೆಗೆ ನಿಯಮಾನುಸಾರ ನಿಗಮ,‌ ಮಂಡಳಿಗಳ ವಾಹನಗಳನ್ನು ಹಿಂದಕ್ಕೆ ಪಡೆಯಲಾಗುವುದು. ಮತದಾರರ ಪಟ್ಟಿ ಈಗಾಗಲೇ ಸಿದ್ಧಪಡಿಸಲಾಗಿದೆ. ಹೊಸದಾಗಿ ಅರ್ಜಿ ಪರಿಶೀಲಿಸಿ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಹೆಸರು ಸೇರ್ಪಡೆಗೆ ಸೆ. 30ರವರೆಗೆ ಅವಕಾಶವಿದೆ. ತಿದ್ದುಪಡಿ ಅಥವಾ ಹೆಸರು ತೆಗೆದು ಹಾಕಲು ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪಟ್ಟಿಯಲ್ಲಿ ಸಂಶಯಾಸ್ಪದ ಹೆಸರುಗಳು ಕಂಡುಬಂದರೆ ಪರಿಶೀಲಿಸಲಾಗುವುದು. ಹೊಸದಾಗಿ ‘ಎಂ3 ಇವಿಎಂ’ಗಳನ್ನು ಈ ಬಾರಿ ಬಳಸಲಾಗುತ್ತಿದೆ. ಮತಯಂತ್ರಗಳ ಬಳಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುವುದು’ ಎಂದು ತಿಳಿಸಿದರು.

ಹೆಸರು ಖಚಿತಪಡಿಸಿಕೊಳ್ಳಲು ಸಲಹೆ:

‘ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಮುಂಚಿತವಾಗಿಯೇ ಪರಿಶೀಲಿಸಿ, ಖಚಿತಪಡಿಸಿಕೊಂಡರೆ ಮತದಾನದ ದಿನದಂದು ಉಂಟಾಗುವ ಗೊಂದಲ ಅಥವಾ ಮುಜುಗರದ ಸನ್ನಿವೇಶ ತಪಪ್ಪಿಬಹುದು. ಪಟ್ಟಿ ಮುದ್ರಿಸಿದ ತಕ್ಷಣ ರಾಜಕೀಯ ಪಕ್ಷಗಳಿಗೆ ನೀಡಲಾಗುವುದು. ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಿದ ಬಗ್ಗೆ ಚುನಾವಣಾಧಿಕಾರಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಒದಗಿಸಬೇಕು’ ಎಂದು ಹೇಳಿದರು.

‘ಕಳೆದ ಚುನಾವಣೆಯಲ್ಲಿದ್ದ ಬಹುತೇಕ ಮತಕೇಂದ್ರಗಳು ಈ ಬಾರಿಯೂ ಇರಲಿವೆ. ಆದರೆ, ಪ್ರವಾಹದಿಂದ ಕುಸಿದಿದ್ದರೆ ಅಥವಾ ಶಿಥಿಲಗೊಂಡಿದ್ದರೆ ಪರಿಶೀಲನೆ ಬಳಿಕ ಪರ್ಯಾಯ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮತದಾರರು ದಾಖಲೆಗಳನ್ನು ಕಳೆದುಕೊಂಡಿದ್ದರೆ ಸಾಕಷ್ಟು ಸಮಯಾವಕಾಶ ಇರುವುದರಿಂದ ನಕಲು ಪ್ರತಿ ಪಡೆದುಕೊಳ್ಳಬೇಕು’ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಬಿಎಸ್ಪಿ ಮುಖಂಡ ರಮೇಶ ಕಡ್ಲಾಸ್ಕರ, ಕೆ.ಜಿ. ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ ಕೆ.ಎಚ್. ಜಗದೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT