ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು: ಕಿತ್ತೂರು ನಾಡಿನ ಯುವಜನರ ಆಶಾಕಿರಣ

ಪದವಿ ಶಿಕ್ಷಣದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಕಾಲೇಜು
Last Updated 25 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಸುಸಜ್ಜಿತ ಬೋಧನಾ ಕೊಠಡಿಗಳು. 25ಸಾವಿರಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಒಳಗೊಂಡ ಅಚ್ಚುಕಟ್ಟಾದ ಗ್ರಂಥಾಲಯ. ಕಂಪ್ಯೂಟರ್ ಲ್ಯಾಬ್. ಜಿಮ್. ತಂತ್ರಜ್ಞಾನದ ಕೌಶಲ ಕಲಿಕೆಗೂ ಹೆಚ್ಚು ಒತ್ತು.

– ಗ್ರಾಮೀಣ ವಿದ್ಯಾರ್ಥಿಗಳ ಪದವಿ ಶಿಕ್ಷಣದ ಆಶಾಕಿರಣವಾಗಿರುವ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿಶೇಷತೆಗಳಿವು.

ದೈಹಿಕ ಮತ್ತು ಮಾನಸಿಕವಾಗಿ ವಿದ್ಯಾರ್ಥಿಗಳು ಸದೃಢವಾಗಿರಬೇಕು. ನಗರದವರ ಜೊತೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯ ಪೈಪೋಟಿ ಕೊಡಬೇಕು ಎಂಬ ಸಂಕಲ್ಪ ಇಲ್ಲಿನ ಅನುಭವಿ ಬೋಧಕ ವೃಂದದ್ದು. ಅದಕ್ಕೆಂದೇ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಮಹತ್ವವನ್ನು ಸಂಸ್ಥೆ ನೀಡುತ್ತಿದೆ.

ದಶಕಗಳ ಇತಿಹಾಸ: ಹಳ್ಳಿಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಬೇಕು, ಅವರೂ ಪದವೀಧರರು ಆಗಬೇಕು ಎಂಬ ಹಿರಿಯರ ಕನಸಿನ ಪರಿಣಾಮ, 47 ವರ್ಷಗಳ ಹಿಂದೆ ಇಲ್ಲಿ ಕಲಾ ವಿಭಾಗದ ಪದವಿ ಕಾಲೇಜು ಪ್ರಾರಂಭಿಸಲಾಯಿತು. 1978ರಲ್ಲಿ ವಾಣಿಜ್ಯ ವಿಭಾಗವೂ ಬಂತು. ರೈತರು ಮತ್ತು ಕೂಲಿ ಕಾರ್ಮಿಕ ಪೋಷಕರ ಮಕ್ಕಳು ಈ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ತೋರಿದ್ದಾರೆ. ನ್ಯಾಕ್ ಕೂಡ ಈ ಕಾಲೇಜಿನ ಕಾರ್ಯವೈಖರಿ ಮೆಚ್ಚಿ, 2004 ಮತ್ತು 2015ರಲ್ಲಿ ‘ಬಿ’ ಗ್ರೇಡ್ ಮಾನ್ಯತೆ ನೀಡಿದೆ. ಯುಜಿಸಿ ಧನಸಹಾಯದಲ್ಲಿ ನಿರ್ಮಿಸಿದ ವಿಶಾಲವಾದ ಆಟದ ಮೈದಾನ ಹಾಗೂ ಜಿಮ್ ಸೌಲಭ್ಯ ಕಾಲೇಜಿನ ಕೀರ್ತಿ ಬೆಳಗಲು ಕಾರಣವಾಗಿದೆ ಎಂದು ಆಡಳಿತ ಮಂಡಳಿ ಸದಸ್ಯರು ಸ್ಮರಿಸುತ್ತಾರೆ.

ನಾಯಕತ್ವ ಗುಣ ಬೆಳೆಸಲು: ‘ಎನ್‌ಎಸ್‌ಎಸ್‌, ಎನ್‌ಸಿಸಿ, ಯೂತ್ ರೆಡ್ ಕ್ರಾಸ್, ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು, ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತಿವೆ’ ಎನ್ನುತ್ತಾರೆ ಪ್ರಾಚಾರ್ಯ ಡಾ.ಜಿ.ಕೆ. ಭೂಮನಗೌಡರ.

‘ವಿಶ್ವವಿದ್ಯಾಲಯ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳು, ಶಿಬಿರ ಹಾಗೂ ದೆಹಲಿಯ ಗಣರಾಜೋತ್ಸವದ ಕವಾಯತಿನಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪ್ರತಿ ವರ್ಷವೂ ವಿಶ್ವವಿದ್ಯಾಲಯದ ಕ್ರೀಡಾ ತಂಡ ಪ್ರತಿನಿಧಿಸುತ್ತಿದ್ದಾರೆ. ಕುಸ್ತಿ, ಕೊಕ್ಕೊ, ವಾಲಿಬಾಲ್ ಕ್ರೀಡೆಗಳಲ್ಲಿ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಐದು ವರ್ಷಗಳಿಂದ ಇಲ್ಲಿಯ ವಿದ್ಯಾರ್ಥಿನಿಯರು ಸತತವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಲಿಬಾಲ್ ತಂಡ ಪ್ರತಿನಿಧಿಸಿದ್ದಾರೆ. ಲಕ್ಷ್ಮಿ ತುಳಜಿ, ಪ್ರಿಯಾಂಕಾ ಬಾವಾನವರ, ಸುಮಿತ್ರಾ ಲಿಂಗದಳ್ಳಿ, ಮಹಾದೇವಿ ಬೆಳಗಾವಿ, ಮಹ್ಮದ ಹನೀಫ ದೊಡವಾಡ, ನಿರ್ಮಲಾ ಪಾಟೀಲ, ಸುಮಿತ್ರಾ ಹಂಚಿನಮನಿ, ಶಾರದಾ ಮಾತಾರಿ, ಈರಣ್ಣ ಬೋಗುರ, ಬಾಗವಾನ ಇಲ್ಲಿನ ಹೆಮ್ಮೆಯ ಕ್ರೀಡಾಪಟುಗಳಾಗಿದ್ದಾರೆ’ ಎಂದು ತಿಳಿಸಿದರು.

ಫಲಿತಾಂಶದಲ್ಲೂ ಕಮ್ಮಿ ಇಲ್ಲ: ಕಾಲೇಜು ಫಲಿತಾಂಶದಲ್ಲೂ ಕಡಿಮೆ ಇಲ್ಲ. ಪ್ರಶಸ್ತಿ ಸಹಿತ ಪ್ರಥಮ ದರ್ಜೆಯಲ್ಲಿ ಫಲಿತಾಂಶ ಪಡೆಯುತ್ತಿದೆ. ಶಿಕ್ಷಣ ವಿಷಯದಲ್ಲಿ 2013ರಲ್ಲಿ ಬಸಮ್ಮ ಪಾಟೀಲ, 2014ರಲ್ಲಿ ಸುನೀತಾ ಕ್ಯಾತನವರ, ಇತಿಹಾಸ ವಿಷಯದಲ್ಲಿ 2015ರಲ್ಲಿ ವಿನಾಯಕ ಗಣಾಚಾರಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಗಳಿಸಿದ್ದಾರೆ.

ರಾಣಿ ಚನ್ನಮ್ಮ ವಿ.ವಿ.ಗೆ, 2014ರಲ್ಲಿ ಸುನೀತಾ ಕ್ಯಾತನವರ -7ನೇ ರ‍್ಯಾಂಕ್, 2015ರಲ್ಲಿ ವಿನಾಯಕ ಗಣಾಚಾರಿ 2ನೇ ರ‍್ಯಾಂಕ್‌ ಹಾಗೂ 2018ರಲ್ಲಿ ಅಪ್ಸರಾಬಿ ಬಿಚ್ಚುನವರ 9ನೇ ‍ರ‍್ಯಾಂಕ್‌ ಗಳಿಸಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT