ನೇರ್ಲಿಯಲ್ಲೊಂದು ಮಾದರಿ ಪ್ರೌಢಶಾಲೆ, ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ಈ ಶಾಲೆ!

7
ನಮ್ಮೂರ ಶಾಲೆ

ನೇರ್ಲಿಯಲ್ಲೊಂದು ಮಾದರಿ ಪ್ರೌಢಶಾಲೆ, ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ಈ ಶಾಲೆ!

Published:
Updated:
Deccan Herald

ಹುಕ್ಕೇರಿ: ಸರ್ಕಾರಿ ಪ್ರೌಢಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ತಾಲ್ಲೂಕಿನ ನೇರ್ಲಿಯ ಪ್ರೌಢಶಾಲೆ ಈ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಪೈಪೋಟಿ ನೀಡುತ್ತಾ ಗಮನಸೆಳೆಯುತ್ತಿದೆ. ಮಾದರಿಯೂ ಆಗಿದೆ.

ಈ ಶಾಲೆಗೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳೊಂದಿಗೆ, ಹುಕ್ಕೇರಿ, ಸಂಕೇಶ್ವರದಿಂದಲೂ ಪ್ರವೇಶ ಪಡೆಯುತ್ತಾರೆ. ತಾಲ್ಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ತಮ್ಮ ಸಮೀಪದಲ್ಲಿಯೇ ಶಾಲೆ ಇದ್ದರೂ ಇಲ್ಲಿಗೆ ಬರುವುದು ವಿಶೇಷ. ಹೀಗಾಗಿ, ಇಲ್ಲಿ ಪ್ರವೇಶಕ್ಕೆ ಬೇಡಿಕೆ ಕಂಡುಬಂದಿದೆ.

1992ರಲ್ಲಿ ನೀರಾವರಿ ಸಚಿವರಾಗಿದ್ದ ಮಲ್ಲಾರಿಗೌಡ ಪಾಟೀಲರು ಈ ಪ್ರೌಢಶಾಲೆ ಸ್ಥಾಪನೆಗೆ ಕಾರಣರು ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ  ರಾಜಶೇಖರ ಹಂದಿಗೂಡಮಠ ನೆನೆಯುತ್ತಾರೆ. ಉತ್ತಮವಾಗಿ ನಡೆಯುತ್ತಿರುವುದು ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದಾಗಿ ಈ ಶಾಲೆಯು ಗಮನಸೆಳೆದಿದೆ ಎನ್ನುತ್ತಾರೆ ಅವರು.

ಸ್ನಾತಕೋತ್ತರ ಪದವೀಧರರು

ಐವರು ಶಿಕ್ಷಕರು, 64 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಇಲ್ಲಿ 9 ಶಿಕ್ಷಕರು ಹಾಗೂ 263 ವಿದ್ಯಾರ್ಥಿಗಳ ಇದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಶಿಕ್ಷಕರು ಸ್ನಾತಕೋತ್ತರ ಪದವಿ ಹೊಂದಿದ್ದಾರೆ.

ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಲು ಅನುಕೂಲವಾಗುವಂತೆ ದೊಡ್ಡ ಮೈದಾನವಿದೆ. 8 ಕೊಠಡಿಗಳಿವೆ. ಇಲ್ಲಿರುವ ಮಕ್ಕಳ ಸಂಖ್ಯೆಗೆ ಕೋಣೆಗಳು ಸಾಕಾಗುತ್ತಿಲ್ಲ. ಇನ್ನೂ 6 ಕೊಠಡಿಗಳ ಅವಶ್ಯಕತೆ ಇದೆ ಎಂದು ಮುಖ್ಯಶಿಕ್ಷಕ ಎ.ಎಸ್. ಪದ್ಮನ್ನವರ ಹೇಳುತ್ತಾರೆ.

ಇಲ್ಲಿ ಕೊಳವೆಬಾವಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಒಂದು ಶೌಚಾಲಯ ಬಿದ್ದು ಹೋಗಿದ್ದು, ಅದನ್ನು ದುರಸ್ತಿ ಮಾಡಿಸಬೇಕಾಗಿದೆ. ಕಾಂಪೌಂಡ್‌ ನಿರ್ಮಿಸಲಾಗಿದೆ.

ಬಹುಮಾನ

ಶಾಲೆಯಲ್ಲಿ ನಿಯಮಿತವಾಗಿ ಹಾಜರಾಗುವವರಿಗೆ ಬಹುಮಾನ ನೀಡಲಾಗುತ್ತದೆ. ಹೀಗಾಗಿ, ಬಹುತೇಕ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಶೇ 95ಕ್ಕಿಂತ ಹೆಚ್ಚಿನ ಹಾಜರಾತಿ ಇದೆ. ಜತೆಗೆ ವಿದ್ಯಾರ್ಥಿಗಳಿಗೆ ಒಂದಿಲ್ಲೊಂದು ಕೌಶಲ (ಕರಕುಶಲ ಕಲೆ) ಕಲಿಸಲಾಗುತ್ತದೆ.

ಶಾಲೆ ಸ್ಥಾಪನೆಯಾದಾಗಿನಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 95ರಷ್ಟು ಫಲಿತಾಂಶವನ್ನು ಈ ಶಾಲೆ ಪಡೆಯುತ್ತಿದೆ. ಶೇ. 30ರಷ್ಟು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಒಂದು ವರ್ಷ ಶೇ.100ರಷ್ಟು ಫಲಿತಾಂಶ ಬಂದಿತ್ತು. ಉತ್ತಮ ಅಂಕ ಗಳಿಸಲಿ ಎಂಬ ಉದ್ದೇಶದಿಂದ ನಗದು ಬಹುಮಾನ ನೀಡಲಾಗುತ್ತದೆ; ಪ್ರೋತ್ಸಾಹಿಸಲಾಗುತ್ತದೆ.

ವಿದ್ಯಾರ್ಥಿ ಎಂ.ಎಸ್. ಚಿಂಚಣಿ ಈಚೆಗೆ ನಡೆದ ನಡಿಗೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದು ಕೀರ್ತಿ ತಂದಿದ್ದಾರೆ. ರಾಜ್ಯ ಮತ್ತು ವಿಭಾಗ ಮಟ್ಟದಲ್ಲಿಯೂ ವಿದ್ಯಾರ್ಥಿಗಳು ಪ್ರಶಸ್ತಿ ಗಳಿಸಿದ್ದಾರೆ. ಈ ಶಾಲೆಯಲ್ಲಿ ಡಾ.ಕೆ. ಕಸ್ತೂರಿ ರಂಗನ್ ವಿಜ್ಞಾನ ಕೇಂದ್ರ ಇದೆ. ಇದು ಉತ್ತಮ ಕೇಂದ್ರವೆಂದು ಎರಡು ಬಾರಿ ಪ್ರಶಸ್ತಿ ಪಡೆದಿದೆ.

ಪ್ರಶಸ್ತಿ

2017ರಲ್ಲಿ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ‘ಅನ್ವೇಷಣೆ’ ಪ್ರಶಸ್ತಿಯನ್ನು ಆಕಾಶ ಬಾನೆ ಮತ್ತು ಪ್ರಜ್ವಲ ಕಮ್ಮಾರ ಪಡೆದಿದ್ದಾರೆ. ರೋಬೋದಲ್ಲಿ ತೆಂಗಿನ ಮರ ಏರುವ ಯೋಜನೆಯನ್ನು ಈ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು.

ಶಾಲೆಯಲ್ಲಿ ನಿತ್ಯವೂ ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳಿಂದ ಪಂಚಾಂಗ ಅಮರವಾಣಿ, ವಿಜ್ಞಾನ ವಿಶೇಷ, ಪುಸ್ತಕ ಪರಿಚಯ, ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ‘ಸುಭಾಷಿತ’ ಹೇಳಿಸಲಾಗುತ್ತದೆ. ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಯ ಮುಖ್ಯಾಂಶಗಳನ್ನು ತಿಳಿಸಲಾಗುತ್ತದೆ. ತರಗತಿವಾರು ಹಾಜರಾತಿಯನ್ನು ವಿದ್ಯಾರ್ಥಿಗಳಿಂದ ಹೇಳಿಸುವುದು ವಿಶೇಷವಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !