ಮಂಗಳವಾರ, ಅಕ್ಟೋಬರ್ 22, 2019
25 °C

ಮಾದರಿಯಾದ ಮಾಸ್ತಮರ್ಡಿ ಪ್ರೌಢಶಾಲೆ | ಗುಣಮಟ್ಟದ ಶಿಕ್ಷಣಕ್ಕೆ ಪೋಷಕರ ಮೆಚ್ಚುಗೆ

Published:
Updated:
Prajavani

ಹಿರೇಬಾಗೇವಾಡಿ: ಸಮೀಪದ ಮಾಸ್ತಮರ್ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡು ಉತ್ತಮ ಸಾಧನೆ ಮಾಡುತ್ತಿದೆ.

2017ರ ಜುಲೈ 1ರಂದು ಇಬ್ಬರು ಶಿಕ್ಷಕರು ಹಾಗೂ 50 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಶಾಲೆ ಈಗ 182 ವಿದ್ಯಾರ್ಥಿಗಳು ಮತ್ತು 8 ಜನ ಶಿಕ್ಷಕರು, ಇಬ್ಬರು ಸಿಬ್ಬಂದಿಯನ್ನು ಹೊಂದಿದೆ. ಈ ಭಾಗದ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.

2 ಎಕರೆ ವಿಸ್ತೀರ್ಣದಲ್ಲಿ ವಿಶಾಲವಾದ ಆಟದ ಮೈದಾನ, ಉತ್ತಮ ಪರಿಸರ ಹೊಂದಿದೆ. ಶಾಲೆಗೆ ಬಣ್ಣ ಬಳಿಯಲಾಗಿದೆ. 9 ಕೊಠಡಿಗಳು, ಸುಸಜ್ಜಿತ ಕಂಪ್ಯೂಟರ್‌ ಪ್ರಯೋಗಾಲಯ ಇದೆ. ಮಕ್ಕಳಿಗೆ ಗಣಕಯಂತ್ರ ಮತ್ತು ಪ್ರೊಜೆಕ್ಟರ್ ಮೂಲಕ ಪಾಠ ಹೇಳಿಕೊಡಲಾಗುತ್ತಿದೆ. ವಿಜ್ಞಾನದ ಪ್ರಯೋಗಗಳಿಗೆ ಬೇಕಾದ ಎಲ್ಲ ಉಪಕರಣಗಳೂ ಇವೆ. ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಇದೆ. ಶಾಲೆ ಆವರಣದಲ್ಲಿರುವ ಹೂವಿನ ತೋಟ ಆಕರ್ಷಿಸುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತಿದೆ.

ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕರು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಮಕ್ಕಳಿಗೆ ಕಲ್ಪಿಸುತ್ತಿದ್ದಾರೆ. ಹೀಗಾಗಿ ಅವರು ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪಾಲಕರ ಶ್ಲಾಘನೆಗೆ ಪಾತ್ರವಾಗಿದ್ದಾರೆ.

ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಸಾಧನೆ ಮಾಡುತ್ತಿದ್ದಾರೆ. ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಅವರು ಭಾಗವಹಿಸುವಂತಹ ವಾತಾವರಣವನ್ನು ಶಿಕ್ಷಕರು ನಿರ್ಮಿಸಿಕೊಡುತ್ತಿದ್ದಾರೆ.

2016-17ನೇ ಸಾಲಿನಲ್ಲಿ ರಾಜ್ಯಮಟ್ಟದ ಪೋಲ್‌ ವಾಲ್ಟ್ ಕ್ರೀಡೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. 2017-18ರಲ್ಲಿ ಸ್ವಚ್ಛ ವಿದ್ಯಾಲಯ ಪುರಸ್ಕಾರ, 2018-19ರಲ್ಲಿ ವಿಪ್ರೋ ಅರ್ಥಿಯನ್ ಪ್ರಾದೇಶಿಕ ಪುರಸ್ಕಾರ, 2018-19ರಲ್ಲಿ ಉತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ಪಡೆದಿದೆ. ಇದೇ ಸಾಲಿನಲ್ಲಿ ‘ತಾಲ್ಲೂಕು ಉತ್ತಮ ಆದರ್ಶ ಶಾಲೆ’ ಪ್ರಶಸ್ತಿ ಗಳಿಸಿದೆ. ಶಾಲೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ.

‘ಇಲ್ಲಿನ ವಿದ್ಯಾರ್ಥಿಗಳು ದೃಶ್ಯಕಲೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ವಿದ್ಯಾರ್ಥಿನಿ ಶಾಂಭವಿ ಕುಶಪ್ಪ ಥೋರ್ಲಿ ‘ಸುಕನ್ಯಾ ವಿದ್ಯಾನಿಧಿ ಪುರಸ್ಕಾರ’ ಪಡೆದಿದ್ದಾರೆ. ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿ ಹೆಚ್ಚಿಸುವುದು, ವಿಜ್ಞಾನ ಪ್ರಯೋಗಗಳು, ಕಂಪ್ಯೂಟರ್‌ ಕಲಿಕೆಯ ಜೊತೆಗೆ ಸಾಮಾನ್ಯ ಜ್ಞಾನ, ಬುದ್ಧಿಮತ್ತೆ ಹೆಚ್ಚಿಸುವ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ’ ಎಂದು ಶಿಕ್ಷಕರು ತಿಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)