ಭಾನುವಾರ, ಫೆಬ್ರವರಿ 23, 2020
19 °C

ಬೆಳಗಾವಿ: ಮಾದರಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 27 ವಿದ್ಯಾರ್ಥಿಗಳ ಆಯ್ಕೆ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

prajavani

ಮೂಡಲಗಿ: ‘ಗ್ರಾಮೀಣ ಮಕ್ಕಳಿಗೆ ಶಿಕ್ಷಕರು ತರಬೇತಿ, ಮಾರ್ಗದರ್ಶನ ನೀಡಿದರೆ ಅವರ ಜ್ಞಾನದ ಪ್ರತಿಭೆ ಅರಳುತ್ತದೆ’ ಎನ್ನುವುದಕ್ಕೆ ಮೂಡಲಗಿ ಶೈಕ್ಷಣಿಕ ವಲಯದ ತಳಕಟನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಉತ್ತಮ ಉದಾಹರಣೆಯಾಗಿದೆ.

ಪರಿಶಿಷ್ಟ ಜಾತಿ, ಪಂಗಡ ಮತ್ತು ಕೂಲಿಕಾರರ ಮಕ್ಕಳೇ ಇರುವ ಶಾಲೆಯ 27 ಮಂದಿ ಕಳೆದ ಬಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತೀ ಹೆಚ್ಚು ಮಕ್ಕಳು ಉತ್ತೀರ್ಣರಾಗಿರುವ ಗ್ರಾಮೀಣ ಸರ್ಕಾರಿ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಶಿಕ್ಷಕರು ಶಾಲಾ ಅವಧಿಯ ಮುಂಚೆ ಹಾಗೂ ಬಳಿಕ ಮತ್ತು ರಜಾ ದಿನಗಳಲ್ಲೂ 5ನೇ ತರಗತಿ ಮಕ್ಕಳಿಗೆ ವಿಶೇಷ ತರಬೇತಿ ನೀಡಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ರವೀಂದ್ರ ಆರ್. ಕಣಕಿಕೋಡಿ.

1938ರಲ್ಲಿ ಧರ್ಮಶಾಲಾ ಆವರಣದಲ್ಲಿ 31 ಮಕ್ಕಳೊಂದಿಗೆ ಪ್ರಾರಂಭಗೊಂಡ ಶಾಲೆಗೆ, ಗ್ರಾಮದ ಕೃಷಿಕರಾದ ಸೊಗಲದ ಮತ್ತು ನಂದಿ ಕುಟುಂಬದವರು ನೀಡಿದ 25 ಗುಂಟೆ ಭೂಮಿಯಲ್ಲಿ 1975ರಲ್ಲಿ ಸರ್ಕಾರವು ಕಟ್ಟಡ ನಿರ್ಮಿಸಿಕೊಟ್ಟಿದೆ. ಸದ್ಯ 10 ಕೊಠಡಿಗಳನ್ನು ಹೊಂದಿದೆ. 1ರಿಂದ 7ನೇ ತರಗತಿವರೆಗೆ ಪ್ರತಿ ವರ್ಷ 475ರಿಂದ 500 ಮಕ್ಕಳು ದಾಖಲಾಗುತ್ತಿದ್ದಾರೆ. ನಲಿ-ಕಲಿಕೆಗಾಗಿಯೇ 3 ಕೊಠಡಿಗಳಿವೆ.

ಸ್ನಾತಕೋತ್ತರ ಪದವೀಧರ ಶಿಕ್ಷಕರು: ಎಂಟು ಶಿಕ್ಷಕರ ಪೈಕಿ ನಾಲ್ವರು ಸ್ನಾತಕೋತ್ತರ ಪದವೀಧರರು. ಎಂ.ಎಸ್ಸಿ, ಬಿ.ಇಡಿ. ಹೊಂದಿರುವ ಕ್ಯಾರೇಮಲ್ಲೇಶಿ, ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಿರುವ ರವಿಚಂದ್ರ ಸ್ವಾಮಿ, ಕನ್ನಡದಲ್ಲಿ ಎಂ.ಎ. ಪಡೆದಿರುವ ಪ್ರಭುಲಿಂಗ ಪೂಜಾರಿ ಮತ್ತು ಇತಿಹಾಸದಲ್ಲಿ ಎಂ.ಎ. ಮಾಡಿರುವ ಧನಂಜಯ ಎನ್. ತಮ್ಮ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. 6 ಜನ ಅತಿಥಿ ಶಿಕ್ಷಕರಿದ್ದಾರೆ.

‘ನಿತ್ಯವೂ ಪಾಠದೊಂದಿಗೆ ಮಕ್ಕಳನ್ನು ಗುಂಪಾಗಿ ಕೂರಿಸಿ ಸಹಪಾಠಿ ಕಲಿಕೆ ಮಾಡಿಸುತ್ತಿದ್ದೇವೆ. ಇದರಿಂದ ಕಲಿಕೆಯಲ್ಲಿ ಹಿಂದಿರುವ ಮಕ್ಕಳು ಮುಂದೆ ಬರಲು ಅನುಕೂಲವಾಗಿದೆ' ಎನ್ನುತ್ತಾರೆ ಶಿಕ್ಷಕ ರವಿಚಂದ್ರಸ್ವಾಮಿ.

‘ವಾರಕ್ಕೊಮ್ಮೆ ವಿಷಯಾಧಾರಿತ ಪರೀಕ್ಷೆ ನಡೆಸುತ್ತಿದ್ದೇವೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷೆಯ ಹಿಂದಿನ ಪ್ರಶ್ನೆಪತ್ರಿಕೆ ಬಿಡಿಸುವುದು, ಅಣಕು ಪರೀಕ್ಷೆ ಏರ್ಪಡಿಸುವ ಚಟುವಟಿಕೆ ಮಾಡುತ್ತಿದ್ದೇವೆ. ಟಿಪ್ಸ್ ನೀಡಿ ಆತ್ಮಸ್ಥೈರ್ಯ ಬೆಳೆಸುತ್ತಿದ್ದೇವೆ’ ಎಂದು ಶಿಕ್ಷಕರು ತಿಳಿಸಿದರು.

'ಈಚೆಗೆ ಪ್ರವಾಹದಲ್ಲಿ ಶಾಲೆ ಜಲಾವೃತವಾಗಿತ್ತು. ಶಾಲೆಯನ್ನು ಮೂಲಸ್ಥಿತಿಗೆ ತರುವಲ್ಲಿ ಶಿಕ್ಷಕರ ಶ್ರಮ ದೊಡ್ಡದಿದೆ’ ಎಂದು ಮೂಡಲಗಿ ಬಿಇಒ ಅಜಿತ್ ಮನ್ನಿಕೇರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿಣ್ಣರ ಬ್ಯಾಂಕ್: ‘ಆಟೋಟಗಳಲ್ಲೂ ಮಕ್ಕಳು ಮುಂದಿದ್ದಾರೆ. ವಿವಿಧ ವಿಷಯಗಳ ಪ್ರಾಜೆಕ್ಟ್‌ ಕೊಟ್ಟು ಸೃಜನಶೀಲತೆ ಬೆಳೆಸಲಾಗುತ್ತಿದೆ. ‘ಚಿಣ್ಣರ ಬ್ಯಾಂಕ್’ ಮಾಡಿ, ಉಳಿತಾಯದ ಅರಿವು ಮೂಡಿಸಲಾಗುತ್ತಿದೆ’ ಎಂದು ಪ್ರಭುಲಿಂಗ ಪೂಜಾರಿ ಹೇಳಿದರು.

‘ಪ್ರೇರಣಾ ಕ್ಲಬ್’ ರಚಿಸಿದ್ದು, ಮಕ್ಕಳಿಗೆ ಬೇರೆ ಬೇರೆ ಬಣ್ಣದ ಸ್ಟಾರ್‌ಗಳನ್ನು ನೀಡಲಾಗುತ್ತಿದೆ. ಓದು ಬರಹ, ಗಣಿತಕ್ಕೆ ಗುಲಾಬಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಿಳಿ ಹಾಗೂ ಹಾಜರಾತಿ, ಸ್ವಚ್ಛತೆಗೆ ಹಸಿರು ಸ್ಟಾರ್ ಕೊಟ್ಟು ಪ್ರೇರಣೆ ನೀಡಲಾಗುತ್ತಿದೆ.

‘ಪಂಚಾಯಿತಿಯಿಂದ ಕೊಳವೆಬಾವಿ ಕೊರೆಸಿಕೊಡಲಾಗಿದೆ. ದುರಸ್ತಿಗೂ ಸ್ಪಂದಿಸಲಾಗುತ್ತಿದೆ. ಸ್ಟೀಲ್ ಕಪಾಟು, ಮೇಜು, ಕುರ್ಚಿಯನ್ನು ಜನರು ದೇಣಿಗೆ ನೀಡಿದ್ದಾರೆ. ತುಕ್ಕಾನಟ್ಟಿಯ ಬರ್ಡ್ಸ್‌ ಸಂಸ್ಥೆ ಈಚೆಗೆ ಮಕ್ಕಳಿಗೆ ಬ್ಯಾಗ್, ಕಲಿಕಾ ಮತ್ತು ಕ್ರೀಡಾ ಸಾಮಗ್ರಿಗಳನ್ನು ನೀಡಿದೆ’ ಎಂದು ಕಣಕಿಕೋಡಿ ತಿಳಿಸಿದರು.

ಸಂಪರ್ಕಕ್ಕೆ: 9902677731.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು