ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ₹35 ಕೋಟಿ ಅವ್ಯವಹಾರ?

ವಕೀಲ ಡಿ.ಎನ್‌.ರಾಮಕೃಷ್ಣ ಅವರು ಬುಧವಾರ ಲೋಕಾಯುಕ್ತಕ್ಕೆ ದೂರು
Last Updated 21 ಸೆಪ್ಟೆಂಬರ್ 2022, 14:35 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿವಿಧ ಕಾಮಗಾರಿಗಳ ₹ 35 ಕೋಟಿ ಬಿಲ್‌ ಅನ್ನು ನಿಯಮ ಬಾಹಿರವಾಗಿ ಪಾವತಿ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕೋರಿ ಹೈಕೋರ್ಟ್‌ ವಕೀಲ ಡಿ.ಎನ್‌.ರಾಮಕೃಷ್ಣ ಅವರು ಬುಧವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಆದರೆ, ಈ ಬಗ್ಗೆ ಪ್ರಕಟಣೆ ನೀಡಿರುವ ವಿಟಿಯು ಕುಲಪತಿ ಪ್ರೊ.ಕರಿಸಿದ್ಧಪ್ಪ ಅವರು, ‘ಇಲ್ಲಿ ಯಾವುದೂ ಕಾನೂನು ಬಾಹಿರವಾಗಿಲ್ಲ. ಇದು ಸತ್ಯಕ್ಕೆ ದೂರವಾದ ಮಾಹಿತಿ’ ಎಂದು ತಿಳಿಸಿದ್ದಾರೆ.

‘ವಿಶ್ವವಿದ್ಯಾಲಯದ ಕುಲಪತಿಯ ಅಧಿಕಾರ ಅವಧಿ ಎರಡು ತಿಂಗಳಿಗಿಂತ ಕಡಿಮೆ ಇದ್ದರೆ, ಅವರು ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಬಾರದು ಮತ್ತು ಹಣಕಾಸು ವ್ಯವಹಾರ ನಡೆಸಬಾರದು ಎಂಬುದು ಸರ್ಕಾರದ ನಿಯಮ. ಈ ಬಗ್ಗೆ ರಾಜ್ಯಪಾಲರ ಸುತ್ತೋಲೆ ಕೂಡ ಇದೆ. ಆದರೆ, ವಿಟಿಯು ಹಾಲಿ ಕುಲಪತಿ ಪ್ರೊ.ಕರಿಸಿದ್ಧಪ್ಪ ಅವರ ಅವಧಿ ಸೆ. 30ಕ್ಕೆ ಕೊನೆಗೊಳ್ಳಲಿದೆ. ಆದರೂ ಅವರು ವಿವಿಧ ಕಾಮಗಾರಿಗಳಿಗೆಂದು ₹ 35 ಕೋಟಿ ಬಿಲ್‌ ಪಾವತಿ ಮಾಡಿದ್ದಾರೆ. ಕುಲಸಚಿವ ಆನಂದ ದೇಶಪಾಂಡೆ ಅವರು ಎಲ್ಲ ಚೆಕ್‌ಗಳಿಗೂ ಸಹಿ ಹಾಕಿದ್ದಾರೆ. ಇದರಲ್ಲಿ ಅಕ್ರಮ ನಡೆದಿದ್ದು, ತನಿಖೆ ಮಾಡಬೇಕಾಗಿ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ’ ಎಂದು ವಕೀಲ ರಾಮಕೃಷ್ಣ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೊ.ಕರಿಸಿದ್ದಪ್ಪ, ‘ಈ ಎಲ್ಲ ಪಾವತಿಗಳು ಹಿಂದಿನ ನಿರ್ಣಯದ ಪ್ರಕಾರ ಮಾಡಿದವು. ಎಲ್ಲವೂ ಕಾರ್ಯಕಾರಿ ಪರಿಷತ್‌ನಿಂದ ಅನುಮೋದನೆಗೊಂಡಿವೆ. ನಾನು ಕಳೆದ ಎರಡು ತಿಂಗಳಲ್ಲಿ ಯಾವುದೇ ಹೊಸ ನೀತಿ– ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ವಿಶ್ವವಿದ್ಯಾಲಯದ ಎಲ್ಲ ಕ್ರಮಗಳು ರಾಜ್ಯಪಾಲರ ಆದೇಶದಂತೆಯೇ ಕ್ರಮಬದ್ಧವಾಗಿವೆ. ವಿಟಿಯು ಮೇಲೆ ಮಾಡಿದ ಆರೋಪಗಳು ಸುಳ್ಳು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT