ಶುಕ್ರವಾರ, ಅಕ್ಟೋಬರ್ 30, 2020
27 °C
ಗೋಕಾಕಕ್ಕೆ ಹೋಗಬೇಕಾದ ಸ್ಥಿತಿ ಇನ್ನೂ ತಪ್ಪಿಲ್ಲ

ತಾಲ್ಲೂಕಾದರೂ ಬಂದಿಲ್ಲ ಕಚೇರಿಗಳು

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ಮೂಡಲಗಿ ತಾಲ್ಲೂಕು ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ. ಆದರೆ, ತಾಲ್ಲೂಕು ಆಡಳಿತಕ್ಕೆ ಸಂಬಂಧಿಸಿದ ವಿವಿಧ ಕಚೇರಿಗಳು ಪ್ರಾರಂಭಗೊಳ್ಳದೆ ಇರುವುದರಿಂದಾಗಿ ಜನರು ಇನ್ನೂ ಗೋಕಾಕದ ಕಚೇರಿಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ.

2018ರ ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೂಡಲಗಿ ತಾಲ್ಲೂಕಿನ ಆಡಳಿತ ವ್ಯಾಪ್ತಿಗೆ 20 ಗ್ರಾಮ ಪಂಚಾಯಿತಿಗಳ 48 ಗ್ರಾಮಗಳು ಬರುತ್ತವೆ. ಈ ಗ್ರಾಮಗಳ ಜನರು ಸಣ್ಣ, ಪುಟ್ಟ ದಾಖಲೆಗಳಿಂದ ಹಿಡಿದು ಎಲ್ಲ ಕೆಲಸಗಳಿಗೂ ಹಳೆಯ ತಾಲ್ಲೂಕು ಗೋಕಾಕದ ಕಚೇರಿಗಳಿಗೆ ಅಲೆಯಬೇಕಾಗಿದೆ.

ಪೂರ್ಣ ಪ್ರಮಾಣದ ತಾಲ್ಲೂಕಿಗೆ ಪ್ರಮುಖವಾಗಿ 18 ಸರ್ಕಾರಿ ಇಲಾಖೆಗಳ ಕಚೇರಿಗಳು ಅವಶ್ಯವಿದ್ದು ಅವುಗಳ ಪೈಕಿ ತಹಶೀಲ್ದಾರ್‌ ಕಚೇರಿ ಜನವರಿ 2018ರಿಂದ ಕಾರ್ಯಾರಂಭಿಸಿದೆ. ಅದಕ್ಕೂ ಮುನ್ನ ಅಂದರೆ 2001ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಸಿಡಿಪಿಒ) ಬಂದಿವೆ. ಇದೇ ವರ್ಷ ತಾಲ್ಲೂಕು ಪಂಚಾಯಿತಿ ಕಚೇರಿ ಕಾರ್ಯನಿರ್ವಹಣೆ ಪ್ರಾರಂಭಿಸಿದೆ.

ಸಮಸ್ಯೆಯಾಗುತ್ತಿದೆ:

ಅಗತ್ಯವಾಗಿ ಬೇಕಾದ ಉಪ ನೋಂದಣಿ ಕಚೇರಿ ಇಲ್ಲದೆ ತಾಲ್ಲೂಕಿನ ಜನರು ಭೂಮಿ ಖರೀದಿ ಮತ್ತು ನೋಂದಣಿಗೆ ಸಂಬಂಧಿಸಿದಂತೆ ಗೋಕಾಕದ ಕಚೇರಿಗೆ ಹೋಗಬೇಕಾಗಿದೆ. ‘ಅಲ್ಲಿ ಎರಡೂ ತಾಲ್ಲೂಕಿನವರು ಸೇರುವುದರಿಂದ ಜನಜಂಗುಳಿಯಲ್ಲಿ ಕೆಲಸವಾಗಬೇಕಾದರೆ ಇಡೀ ದಿನ ಕಳೆಯಬೇಕಾಗುತ್ತದೆ. ಅದರಲ್ಲೂ ಮಹಿಳೆಯರು ಮತ್ತು ವೃದ್ಧರ ಕಷ್ಟ ಹೇಳತೀರದು’ ಎಂದು ಕಮಲದಿನ್ನಿಯ ಉದ್ಯಮಿ ಗಿರೀಶ ಜಿನಗನ್ನವರ ಸಮಸ್ಯೆಯ ಚಿತ್ರಣ ಕಟ್ಟಿಕೊಟ್ಟರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪಂಚಾಯತ್‌ರಾಜ್‌ ಎಂಜಿನಿಯರ್‌ ಉಪ ವಿಭಾಗ, ಕೃಷಿ, ತೋಟಗಾರಿಕೆ ಇಲಾಖೆ, ನೀರಾವರಿ ಇಲಾಖೆ, ಅಗ್ನಿಶಾಮಕ ದಳ, ರೇಷ್ಮೆ, ಮೀನುಗಾರಿಕೆ, ಪಶು ವೈದ್ಯಕೀಯ, ಕಾರ್ಮಿಕ, ಭೂದಾಖಲೆ ಇಲಾಖೆ ಕಚೇರಿಗಳು ತ್ವರಿತವಾಗಿ ಆಗಬೇಕು ಮತ್ತು ಅಲ್ಲಿ ಪ್ರತ್ಯೇಕ ಅಧಿಕಾರಿಗಳ ನೇಮಕವಾಗಬೇಕಾಗಿದೆ. ಸರ್ಕಾರವು ಕೂಡಲೇ ಸಂಬಂಧಿಸಿದ ಕಚೇರಿಗಳನ್ನು ಆರಂಭಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಆಗ್ರಹವಾಗಿದೆ.

‘ತಹಶೀಲ್ದಾರ್‌ ಕಚೇರಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುತ್ತಿದೆ. ಶೀಘ್ರದಲ್ಲೇ ‘ಭೂಮಿ’ ವಿಭಾಗ ಕಾರ್ಯನಿರ್ವಹಿಸಲಿದೆ’ ಎಂದು ತಹಶೀಲ್ದಾರ್‌ ಡಿ.ಜಿ. ಮಹಾತ್‌ ಪ್ರತಿಕ್ರಿಯಿಸಿದರು.

***

‘ಒಂದೇ ಸೂರಿನಲ್ಲಿ ಎಲ್ಲ ಕಚೇರಿಗಳು’

‘ಮೂಡಲಗಿಗೆ ಉಪ ನೋಂದಣಿ ಕಚೇರಿ ಸೇರಿದಂತೆ ತಾಲ್ಲೂಕಿಗೆ ಅವಶ್ಯವಿರುವ ಎಲ್ಲ ಕಚೇರಿಗಳ ಸ್ಥಾಪನೆ ಸಲುವಾಗಿ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರಿಗೆ ಪತ್ರ ಬರೆದು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಹಂತ ಹಂತವಾಗಿ ಅನುಷ್ಠಾನದ ಭರವಸೆ ಸಿಕ್ಕಿದೆ. ನಿವೇಶನ ಅಂತಿಮಗೊಳ್ಳುತ್ತಿದ್ದಂತೆಯೇ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಎಲ್ಲ ಕಚೇರಿಗಳನ್ನು ಒಂದೇ ಸೂರಿನಲ್ಲಿ ನಿರ್ಮಿಸಲಾಗುವುದು’ ಎಂದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ಖರೀದಿ, ನೋಂದಣಿ ಮೊದಲಾದ ಕೆಲಸಕ್ಕೆ 50 ಕಿ.ಮೀ. ದೂರದ ಗೋಕಾಕಕ್ಕೆ ಹೋಗಬೇಕು. ಅದು ಅಲ್ಲದ ಎರಡು ದಿನ ಎಡತಾಕಬೇಕ್ರೀ. ಮೂಡಲಗಿ ನಮ್ಮೂರಿಗೆ 15 ಕಿ.ಮೀ. ಐತ್ರೀ. ಕಚೇರಿಗಳೆಲ್ಲ ಮೂಡಲಗಿಗೆ ಬಂದ್ರ ಎಡತಾಕೂದ ತಪ್ಪತೈತ್ರೀ
ವಿನಾಯಕ ಬಾಗೇವಾಡಿ
ಪ್ರಗತಿಪರ ರೈತ, ಅವರಾದಿ

***

ರಾಜ್ಯದಲ್ಲಿ 2018ರಲ್ಲಿ ರಚನೆಯಾದ ಹೊಸ ತಾಲ್ಲೂಕುಗಳಲ್ಲಿ ತಹಶೀಲ್ದಾರ್‌ ಕಚೇರಿ ಹೊರತುಪಡಿಸಿ ಉಳಿದ ಕಚೇರಿಗಳು ಆರಂಭವಾಗಿಲ್ಲ. ಸರ್ಕಾರದ ಮೇಲೆ ಒತ್ತಾಯ ತರಲು ಎಲ್ಲ ತಾಲ್ಲೂಕಿನ ಪ್ರತಿನಿಧಿಗಳೊಂದಿಗೆ ನಿಯೋಗ ತೆರಳಲು ನಿರ್ಧರಿಸಲಾಗಿದೆ
ಬಸವರಾಜ ಪಾಟೀಲ
ತಾಲ್ಲೂಕು ಹೋರಾಟ ಸಮಿತಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.