ಸೋಮವಾರ, ನವೆಂಬರ್ 29, 2021
21 °C
ಮಳೆಯಿಂದ ರೈತರ ಗೋಳು; ಬಿತ್ತಿದ್ದೆಲ್ಲ ನೀರು ಪಾಲು

‘ಸದಕ, ಕಡಲೆ ಬೆಳೆಯಲ್ಲಾ ಹಾಳಾತ್ರೀ’

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ನಾಲ್ಕು ದಿನಗಳಿಂದ ಆಗಾಗ ಬೀಳುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಕಂಟಕ ಎದುರಾಗಿದ್ದು, ರೈತರು ಆತಂಕದಲ್ಲಿದ್ದಾರೆ.

ಮೂರು ವಾರಗಳ ಅಂತರದಲ್ಲಿ ಸದಕ, ಗೋಧಿ, ಕಡಲೆ ಬಿತ್ತನೆ ಮಾಡಿದವರ ಭೂಮಿಯಲ್ಲಿ ಮಳೆಯ ನೀರು ತುಂಬಿಕೊಂಡಿದೆ. ಹೀಗಾಗಿ ಬಿತ್ತನೆ ಮಾಡಿರುವುದೆಲ್ಲ ಹಾಳಾಗಿ ಹೋಗಿದ್ದಕ್ಕೆ ರೈತರು ಪರಿತಪಿಸುತ್ತಿದ್ದಾರೆ.

ಖಾನಟ್ಟಿ, ಹಳ್ಳೂರ, ಪಟಗುಂದಿ, ಗುರ್ಲಾಪುರ, ಕಮಲದಿನ್ನಿ, ಯಾದವಾಡ, ನಾಗನೂರ, ಕಲ್ಲೋಳಿ ಮೊದಲಾದ ಗ್ರಾಮಗಳ ರೈತರು ಸಾವಿರಾರು ಎಕರೆಯಷ್ಟು ಸದಕ, ಗೋಧಿ ಮತ್ತು ಕಡಲೆ ಬಿತ್ತನೆ ಮಾಡಿದ್ದು ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ ಎನ್ನುತ್ತಾರೆ,

‘ಇದು ಕೆಡಗಾಲ ಮಳೇರೀ ಬಿತ್ತಿದ ಸದಕ, ಕಡ್ಲಿ ನೀರಾಗ ನಿಂತಿದ್ದರಿಂದ ಅದು ನಾಟಾಂಗಿಲ್ಲರೀ. ಬಿಸಲ ಬಿದ್ದ ಮ್ಯಾಲ ಬಿತ್ತಿದ್ದನ್ನು ತೆಗೆದ ಮರು ಬಿತ್ತನೆ ಮಾಡಬೇಕರೀ’ ಎಂದು ಖಾನಟ್ಟಿಯ ಬಸಲಿಂಗಪ್ಪ ನಿಂಗನೂರ ಅಳಲು ತೋಡಿಕೊಂಡರು.

‘ಪಟಗುಂದಿ ಭಾಗದಾಗ ನೂರ ಎಕರೆಯಷ್ಟು ಸದಕ, ಗೋದಿ ಬಿತ್ತನೆ ಮಾಡಿದ್ದೆಲ್ಲ ಹಾಳಾಗೈತ್ರೀ‘ ಎಂದು ಚನ್ನಗೌಡ ಪಾಟೀಲ ನೋವಿನಿಂದ ತಿಳಿಸಿದರು.

ಮಳೆಯು ಮೆಕ್ಕೆಜೋಳ ರಾಶಿಗೆ ಅಡ್ಡಿಯಾಗಿದೆ. ಕಬ್ಬು ಕಟಾವಿಗೂ ತೊಂದರೆಯಾಗಿದೆ. ಟ್ರ್ಯಾಕ್ಟರ್‌ಗೆ ತುಂಬಿ ಸಕ್ಕರೆ ಕಾರ್ಖಾನೆಗೆ ಕಳುಹಿಸಲು ಕಷ್ಟವಾಗಿದೆ ಎಂದು ರೈತರು ತಿಳಿಸಿದರು. ತುಕ್ಕಾನಟ್ಟಿ ಭಾಗದಲ್ಲಿ ಟೊಮೆಟೊ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳು  ಮಳೆಯ ಹೊಡೆತಕ್ಕೆ ನಲುಗಿ ಹೋಗಿವೆ.

ತಾಲ್ಲೂಕಿನಲ್ಲಿ ಬಹಳಷ್ಟು ಜನರು ಅರಿಸಿನ ಬೆಳೆಯುತ್ತಿದ್ದಾರೆ. ಮಳೆ ನೀರು ಆ ಬೆಳೆಯನ್ನೂ ಆವರಿಸಿದೆ. ಇದರಿಂದ ರೋಗ ತಗಲುವ ಅಪಾಯವಿದೆ. ‘ನೀರ ಹೆಚ್ಚಾತಂದ್ರ ಅರಿಸಿನ ಗಡ್ಡಿ ಕೊಳತೈತ್ರೀ, ಇಳುವರಿ ಭಾಳ ಕಡಿಮಿ ಆಗತ್ರೈತ್ರೀ‘ ಎಂದು ನಾಗನೂರಿನ ರೈತ ಲಕ್ಷ್ಮಣ ಸಕ್ರೆಪ್ಪಗೋಳ ಮತ್ತು ತುಕ್ಕಾನಟ್ಟಿಯ ಬಾಳಪ್ಪ ಉಪ್ಪಾರ ತಿಳಿಸಿದರು.

ಮಳೆ ಮುಂದುವರಿದರೆ ಮತ್ತಷ್ಟು ಬೆಳೆಗಳಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಮಳೆ ನಿಂತು ಬಿಸಿಲು ಬಂದರೆ ಒಂದಿಷ್ಟು ನಷ್ಟ ಕಡಿಮೆಯಾಗುತ್ತದೆ ಎನ್ನುತ್ತಾರೆ ರೈತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು