ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಸಿದ್ದಲಿಂಗೇಶ್ವರ ಮಹಾರಥೋತ್ಸವ

ಮುಗಳಖೋಡ ಮಠದಲ್ಲಿ ಸೇರಿದ ಅಪಾರ ಭಕ್ತರು, ಮುರುಘರಾಜೇಂದ್ರ ಶ್ರೀಗಳಿಂದ ಅಗ್ಗಿ ಪ್ರವೇಶ
Last Updated 31 ಮಾರ್ಚ್ 2023, 6:41 IST
ಅಕ್ಷರ ಗಾತ್ರ

ಮುಗಳಖೋಡ: ಇಲ್ಲಿನ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ನಡೆದ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ವೈಭವದ ರಥೋತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ನಡೆಯಿತು.

ಸಂಜೆ 6 ಗಂಟೆಗೆ ಸಿದ್ಧಲಿಂಗೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಹೂವುಗಳಿಂದ ಅಲಂಕರಿಸಿದ ಮಹಾರಥವನ್ನು ಎಳೆಯಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತ ಸಮೂಹ ರಥೋತ್ಸವಕ್ಕೆ ಉತ್ತತ್ತಿ, ಬಿಸ್ಕತ್‌, ಬೆಂಡು– ಬತ್ತಾಸ, ಬಾಳೆಹಣ್ಣು ಎಸೆದು ಜೈಕಾರ ಹಾಕಿದರು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು.

ಉತ್ಸವದ ನೇತೃತ್ವ ವಹಿಸಿದ್ದ ಮುರುಘರಾಜೇಂದ್ರ ಸ್ವಾಮಿಗಳು ಬೆಳಿಗ್ಗೆ 6 ಗಂಟೆಗೆ ಸಿದ್ಧಲಿಂಗೇಶ್ವರ, ಯಲ್ಲಾಲಿಂಗೇಶ್ವರ ಕೃರ್ತ ಗದ್ದುಗೆಗೆ ಮಹಾರುದ್ರಾಭಿಷೇಕ, ಮಂಗಳಾರತಿ ನೆರವೇರಿಸಿದರು.

ಅಗ್ಗಿ ಜಾತ್ರೆ: ಮಠದ ಪರಂಪರೆಯಂತೆ ಪ್ರತಿವರ್ಷ ಗುರುಗಳು ಅಗ್ಗಿ ಹಾಯುವ ಕಾರ್ಯಕ್ರಮ ನೆರವೇರಿತು. ಬುಧವಾರ ರಾತ್ರಿಯಿಂದ ಭಕ್ತರು ಸ್ನಾನ‌ಮಾಡಿ ಮಡಿಯಿಂದ ಕಟ್ಟಿಗೆ ತಂದು ಬೆಂಕಿ ಮಾಡಿ ಅಗ್ಗಿಕೊಂಡ ತಯಾರಿಸಿದರು. ಗುರುವಾರ ಬೆಳಿಗ್ಗೆ 10.30ಕ್ಕೆ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮಿಗಳು ಲೋಕ ಕಲ್ಯಾಣಕ್ಕಾಗಿ ಅಗ್ನಿ ಹಾಯ್ದರು. ಎಲ್ಲ ಭಕ್ತಾದಿಗಳು ಅಗ್ಗಿ ಕುಂಡದಲ್ಲಿ ನಾಣ್ಯಗಳನ್ನು ಹಾಕಿ ಸಿದ್ದಲಿಂಗ, ಯಲ್ಲಾಲಿಂಗ, ಸಿದ್ದರಾಮ ಹಾಗೂ ಮುರುಘರಾಜೇಂದ್ರರಿಗೆ ಜೈಕಾರ ಹಾಕಿದರು.

ಕಷ್ಟಗಳು ದೂರಾಗಲಿ: ಇದಕ್ಕೂ ಮುನ್ನ ಭಕ್ತರಿಗೆ ಆಶೀರ್ವಚನ ನೀಡಿದ ಮುರುಘರಾಜೇಂದ್ರ ಶ್ರೀಗಳು, ‘ಮುಗಳಖೋಡದ ಸದ್ಗುರು ಯಲ್ಲಾಲಿಂಗೇಶ್ವರ ಪ್ರಭುಗಳ ಗುರುಗಳಾದ ಲಚ್ಚಾಣದ ಕಮರಿ‌ ಮಠದ ಸಿದ್ದಲಿಂಗ ಮಹಾರಾಜರ ಪವಾಡಗಳು ಸಾಕಷ್ಟಿವೆ. ಇಲ್ಲಿ ಭಕ್ತಿಯಿಂದ ಹಾಗೂ ಶ್ರದ್ಧೆಯಿಂದ ನಡೆದುಕೊಂಡು ಬಂದ ಭಕ್ತರಿಗೆ ಅಂಟಿಕೊಂಡ ಕಷ್ಟಗಳನ್ನು ದೂರಮಾಡುವ ಶಕ್ತಿ ಇದೆ’ ಎಂದರು.

‘ಮಠದ ಪರಂಪರೆ ಜಾತ್ಯತೀತವಾಗಿದೆ. ನಾನು ನಿಮ್ಮ ಗುರುವಾದರೆ ಮಠದ ಭಕ್ತರು ನನ್ನ ಬಂಧುಗಳು. ನಂಬಿ ಬಂದ ಭಕ್ತರು ಯಾವುದೇ ಸಂಕಷ್ಟಕ್ಕೆ ಈಡಾಗಿದ್ದರೆ ಅವರ ಕಷ್ಟಗಳನ್ನು ದೂರಮಾಡುವುದು ಮಠದ ಗುರಿ. ಭಕ್ತರ ಮತ್ತು ಗುರುಗಳ ಸಂಬಂಧವನ್ನು ಗಟ್ಟಿಯಾಗಿ ಕೂಡಿಸುವಲ್ಲಿ ಪರಂಪರೆ ದೊಡ್ಡದು’ ಎಂದರು.

ದಂಡೊತ್ತ: ಬುಧವಾರ ಸಂಜೆಯಿಂದ ಗುರುವಾರ ಬೆಳಗಿನವರೆಗೂ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸ್ನಾನ ಮಾಡಿ ಮಡಿಯಿಂದ 8 ಕಿ.ಮೀ ದೂರದಿಂದ ದಂಡೊತ್ತ (ದೀರ್ಘ ದಂಡ ನಮಸ್ಕಾರ) ಹಾಕಿ ಭಕ್ತಿಯನ್ನು ಸಮರ್ಪಿಸಿದರು.

ನಂತರದಲ್ಲಿ ರಾತ್ರಿ 7 ಗಂಟೆಗೆ ಸೊಲ್ಲಾಪುರ ಭಕ್ತಿರಿಂದ ಮದ್ದು ಸುಡುವ ಕಾರ್ಯಕ್ರಮ ಜರುಗಿತು. ಆಸ್ಥಾನದ ಗವಾಯಿಗಳಿಂದ ಎರಡು ದಿನ ಸಂಗೀತ ಸೇವೆ ನಡೆಯಿತು. ಶುಕ್ರವಾರ ಸಂಜೆ 4 ಗಂಟೆಗೆ ಪೈಲ್ವಾನರಿಂದ ಕುಸ್ತಿಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT