ಮುಗಳಖೋಡ (ಬೆಳಗಾವಿ ಜಿಲ್ಲೆ): ಪಟ್ಟಣದ ವಾರ್ಡ್ ಸಂಖ್ಯೆ 15 ಮತ್ತು 16ರಲ್ಲಿ (ದಾಸರ ತೋಟ) ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಆಗ್ರಹಿಸಿ ನಿವಾಸಿಗಳು ವಿವಿಧ ‘ಘೋಷಣೆಗಳ ಸ್ಟಿಕ್ಕರ್’ಗಳನ್ನು ಅಂಟಿಸಿದ್ದ ಖಾಲಿ ಕೊಡಗಳನ್ನು ಹೊತ್ತು 6 ಕಿ.ಮೀ.ವರೆಗೆ ಬುಧವಾರ ಪಾದಯಾತ್ರೆ ನಡೆಸಿದರು.
ಪ್ರಮುಖ ಬೀದಿಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಬಂದು ಪುರಸಭೆ ಆವರಣದಲ್ಲಿ ಎರಡು ತಾಸು ಧರಣಿ ನಡೆಸಿದರು.
ಚರಂಡಿ ದುರವಸ್ಥೆ ಬಗ್ಗೆ ಪುರಸಭೆಯವರು ಭರವಸೆ ನೀಡುತ್ತಿದ್ದ ವೇಳೆ ಕಾವೇರಿ ಐಹೊಳೆ ನೇತೃತ್ವದಲ್ಲಿ ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳಪೆ ಕಾಮಗಾರಿಗಳನ್ನು ಕೈಗೊಂಡಿರುವುದನ್ನು ಖಂಡಿಸಿದರು. ಅಧಿಕಾರಿಗಳು ಕ್ರಮ ವಹಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
‘ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಈಶ್ವರ ಉಳ್ಳಾಗಡಿ ಅವರು ಖುದ್ದು ಪರಿಶೀಲನೆ ನಡೆಸುತ್ತಾರೆ’ ಎಂದು ಪುರಸಭೆ ಅಧಿಕಾರಿಗಳು ಭರವಸೆ ನೀಡಿದರು.
‘ತಿಂಗಳಲ್ಲಿ ಎಲ್ಲ ಕಾಮಗಾರಿಗಳನ್ನೂ ಪೂರ್ಣಗೊಳಿಸಬೇಕು. ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಮುಖಂಡ ಮಹಾವೀರ ಕುರಾಣಿ ಎಚ್ಚರಿಕೆ ನೀಡಿದರು.
ರಾಜಶೇಖರ ಜಾಗನೂರ, ಮಹಾದೇವ ಕುರಾಣಿ, ಗಿರಮಲ್ಲ ಮುಧೋಳ, ಭರತೇಶ, ಅಪ್ಪಸಾಬ ಸಾವಂತನ್ನವರ, ಸುರೇಶ ಹೊಸಪೇಟಿ ಅಶೋಕ ಗೊಳಸಂಗಿ, ಶಶಿಧರ ಗೊಳಸಂಗಿ, ಹಣಮಂತ ಕಲ್ಲೋಳ್ಳಿ, ಕಾವೇರಿ ಐಹೊಳೆ, ಕಾವೇರಿ ಜಾಗನೂರ, ಜಯಶ್ರೀ ಜಾಗನೂರ, ಶೋಭವ್ವ ಪೂಜೇರಿ ಮತ್ತು ಜಯಶ್ರೀ ಗೊಳಸಂಗಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.