ಶುಕ್ರವಾರ, ಏಪ್ರಿಲ್ 16, 2021
31 °C

ಉತ್ತರ ಕರ್ನಾಟಕದವರು ಬೆಳೆಯಬಾರದೆಂದು ಷಡ್ಯಂತ್ರ: ಮುಲಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಉತ್ತರ ಕರ್ನಾಟಕದವರು ರಾಜಕೀಯವಾಗಿ ಬೆಳೆಯಲೇಬಾರದೆಂಬ ಉದ್ದೇಶದಿಂದ ಷಡ್ಯಂತ್ರ ನಡೆಯುತ್ತಿದೆ. ಈ ನಿಟ್ಟಿನಲ್ಲಿ, ಇಲ್ಲಿನ ರಾಜಕಾರಣಿಗಳು ಎಚ್ಚರಿಕೆ ವಹಿಸಬೇಕು’ ಎಂದು ಸಾಮಾಹಿಕ ಕಾರ್ಯಕರ್ತ ಬಳ್ಳಾರಿಯ ರಾಜಶೇಖರ ಮುಲಾಲಿ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ‌ ವಿರುದ್ಧದ ಸಿ.ಡಿ. ಪ್ರಕರಣದ ಹಿಂದೆ ಷಡ್ಯಂತ್ರವಿದೆ. ಅವರು ಪ್ರಭಾವಿ ರಾಜಕಾರಣಿ ಆಗಿದ್ದಾರೆ. ಜೆಡಿಎಸ್‌–ಕಾಂಗ್ರೆಸ್ ಸಮ್ಮಶ್ರ ಸರ್ಕಾರ ಬೀಳಿಸಿ, ಬಿಜೆಪಿ ಸರ್ಕಾರ ರಚನೆಯಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಹೀಗೆಯೇ ಬೆಳೆದರೆ ಮುಂದೆ ಮುಖ್ಯಮಂತ್ರಿ ಆಗುತ್ತಾರೆಂದು ಅವರ ವಿರುದ್ಧ ಷಡ್ಯಂತ್ರಕ್ಕೆ ದೊಡ್ಡ ಜಾಲವೇ ಕೆಲಸ ಮಾಡಿದೆ. ಹೀಗಾಗಿ ಅವರು ಬಲಿಪಶು ಆಗಿದ್ದಾರೆ’ ಎಂದು ತಿಳಿಸಿದರು.

‘ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ರಾಜಕಾರಣಿಗಳು ತಾಂತ್ರಿಕವಾಗಿ ಶಕ್ತರಿಲ್ಲ. ಮುಗ್ಧರು ಹಾಗೂ ಬಿಚ್ಚು ಮನಸ್ಸಿನವರು. ಇದರಿಂದಾಗಿ ಷಡ್ಯಂತ್ರಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ. ಉತ್ತರ ಕರ್ನಾಟಕದವರು ಬೆಳೆಯಬಾರದು ಎಂಬ ಉದ್ದೇಶ ಇದರಲ್ಲಿದೆ’ ಎಂದು ದೂರಿದರು.

‘ಸುವರ್ಣ ವಿಧಾನಸೌಧದಲ್ಲಿ ಅಧಿವೇಶನಕ್ಕೆ ಬಂದಾಗ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು, ಶನಿವಾರ ಮತ್ತು ಭಾನುವಾರ ಗೋವಾ ಪ್ರವಾಸ ಹೋಗುತ್ತಾರೆ. ಹಿಂದೆ ಹೋಗಿದ್ದವರು ಹಾಗೂ ಮುಂದೆ ಹೋಗುವವರು ಎಚ್ಚರಿಕೆ ವಹಿಸಬೇಕು. ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಮೈ ಮರೆಯಬಾರದು. ಈ ಎಚ್ಚರಿಕೆಯನ್ನು ರೈಲು ಬರುವುದಕ್ಕೆ ಮುನ್ನ ಕೊಡುವ ಸಿಗ್ನಲ್ ರೀತಿ ಭಾವಿಸಿಕೊಳ್ಳಿ, ಎಚ್ಚರಿಕೆಯಿಂದಿರಿ. ಗೋವಾಕ್ಕೆ ಪ್ರವಾಸಕ್ಕೆ ಹೋಗದಿರುವುದೇ ಒಳ್ಳೆಯದು’ ಎಂದರು.

‘ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದುವುದು ದಕ್ಷಿಣದವರಿಗೆ ಬೇಕಿಲ್ಲ. ತೆರಿಗೆ ಕಟ್ಟುವವರು ನಾವು; ಎಂಜಾಯ್ ಮಾಡುವವರು ಅವರು. ಹೀಗೆಯೇ ಉತ್ತರದವರ ವಿರುದ್ಧ ಷಡ್ಯಂತ್ರಗಳು ಮುಂದುವರಿದಲ್ಲಿ ಪ್ರತ್ಯೇಕ ರಾಜ್ಯದ ಹೋರಾಟದ ನೇತೃತ್ವವನ್ನು ನಾನೇ ವಹಿಸುತ್ತೇನೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು