ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಾಡಿನೊಳಗೊಂದು ಮುನೇಶ್ವರ ಗುಡಿ

ಬತ್ತದ ನೀರಿನ ಹೊಂಡ: ಸುಂದರ ಪ್ರಕೃತಿ ತಾಣ
Last Updated 19 ಜೂನ್ 2021, 19:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ದಟ್ಟ ಕಾಡು. ಒಂದು ಬದಿಗೆ ಕೊಳ್ಳ. ಅಲ್ಲೇ ಇರುವ ಪುಟ್ಟ ನೀರಿನ ಹೊಂಡ. ಕಾಡಿನ ಇಳಿಜಾರು ಪ್ರದೇಶದ ನಡುವೆ ಪ್ರತಿಷ್ಠಾಪಿಸಲಾಗಿರುವ ಮುನೇಶ್ವರ ದೇವರ ಗುಡಿ ಜಾಗೃತ ತಾಣ ಎಂದೇ ಭಕ್ತ ವರ್ಗದಲ್ಲಿ ಪ್ರಸಿದ್ಧಿ ಪಡೆದಿದೆ.

ಜಿಂಕೆ, ನವಿಲು, ಕಾಡುಗೋಣ, ಕಾಡುಕೋಳಿಗಳ ಓಡಾಟ ಇಲ್ಲಿ ಸಾಮಾನ್ಯ. ಇದರ ಪಕ್ಕದಲ್ಲಿರುವ ಕೊಳ್ಳದ ನೀರು ಕಾಡು ಪ್ರಾಣಿಗಳ ದಾಹ ಇಂಗಿಸುತ್ತದೆ.

ಕಿತ್ತೂರು ಸಮೀಪದ ಹೊನ್ನಾಪುರ–ಕುಲವಳ್ಳಿ ರಸ್ತೆಯಲ್ಲಿ ಹೊನ್ನಾಪುರದಿಂದ 4 ಕಿ. ಮೀ. ಅಂತರದಲ್ಲಿ ಈ ಗುಡಿ ಇದೆ. ಭಕ್ತರ ಹಾಗೂ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ಮುನಿ, ಸನ್ಯಾಸಿ:‘ದೇಗುಲಗಳ ಹಳ್ಳಿ ಎಂದೇ ಪ್ರಸಿದ್ಧಿ ಪಡೆದಿದ್ದ ದೇಗುಲಹಳ್ಳಿ ಗ್ರಾಮದಲ್ಲಿ ಶತಮಾನಗಳ ಹಿಂದೆ ಮುನಿಯೊಬ್ಬನಿದ್ದರು. ಕೃಶ ದೇಹವಾದರೂ ನೋಡಲು ಬಲು ಚೆಲುವನಿದ್ದರು. ಅವರ ಕಂಠ ಕೂಡ ಕಂಚಿನದಾಗಿತ್ತಂತೆ. ದೀಪರಾಗ ಮುನಿಯ ಇಷ್ಟದ ರಾಗ. ಮುನಿ ಹಾಡುಗಾರಿಕೆಯಲ್ಲಿ ಸದಾ ಮಗ್ನನಾಗುತ್ತಿದ್ದರಂತೆ. ಮುಂದೆ ಈ ಮುನಿಯ ಹತ್ಯೆ ಮಾಡಲಾಗುತ್ತದೆ. ಹತ್ಯೆ ಮಾಡಿದ ಯೋಗಿಯ ಸನಿಹದಲ್ಲಿ ಅನಾದಿ ಕಾಲದಿಂದಲೂ ಒಂದು ಕಲ್ಲು ಇಡಲಾಗಿತ್ತು. ಹಿಂದಿನಿಂದಲೂ ಅದಕ್ಕೆ ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು. ಇದೇ ಸ್ಥಳವನ್ನು ‘ಮುನೇಶ್ವರ ತಾಣ’ ಹಾಗೂ ಈ ಪ್ರದೇಶವನ್ನು ‘ಮುನಿಕೊಳ್ಳ’ ಎಂದು ಕರೆಯಲಾಗುತ್ತಿದೆ’ ಎಂದು ಹಿರಿಯರು ಮಾಹಿತಿ ನೀಡಿದರು.

ಭಕ್ತ ಸಮೂಹ:‘ಹೊನ್ನಾಪುರ ಸೇರಿದಂತೆ ದೇವಗಾಂವ, ಗಂಗ್ಯಾನಟ್ಟಿ, ಕುಲವಳ್ಳಿ, ಲಿಂಗದಳ್ಳಿ, ಸಾಗರ, ತೇಗೂರು ಗ್ರಾಮಗಳ ನೂರಾರು ಭಕ್ತರು ಪ್ರತಿ ಅಮಾವಾಸ್ಯೆಯಂದು ‘ಕೊಳ್ಳ’ಕ್ಕೆ ಬರುತ್ತಾರೆ. ಪ್ರತಿ ವರ್ಷ ಫೆ.7ರಂದು ಸಣ್ಣ ಪ್ರಮಾಣದಲ್ಲಿ ಜಾತ್ರೆ ನಡೆಯುತ್ತದೆ. ಅಭಿಷೇಕ, ಪೂಜೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಮುನೇಶ್ವರ ಸನ್ನಿಧಿಯಲ್ಲಿ ಸಾಗುತ್ತವೆ’ ಎಂದು ಮಾಹಿತಿ ನೀಡಿದವರು ಹೊನ್ನಾಪುರದ ಅಶೋಕ ದೊಡಮನಿ.

‘ಕಲ್ಲು ಇಟ್ಟು ಮೊದಲೆಲ್ಲ ಪೂಜೆ ಮಾಡುತ್ತಿದ್ದ ಸ್ಥಳದಲ್ಲಿ ದೇವಗಾಂವ, ಹೊನ್ನಾಪುರ ಸೇರಿದಂತೆ ಕೆಲ ಊರಿನ ಭಕ್ತರು ಅಂದವಾದ ಪುಟ್ಟ ಗುಡಿಯನ್ನು 2001ರಲ್ಲಿ ಕಟ್ಟಿಸಿದ್ದಾರೆ. ಮುನೇಶ್ವರ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಈ ಗುಡಿ ಪಕ್ಕದಲ್ಲಿಯೇ ಪುಟ್ಟ ನೀರಿನ ಹೊಂಡವಿದೆ. ಈ ಭಾಗದಲ್ಲಿ ಭೀಕರ ಬರಗಾಲ ಬಿದ್ದು ಹಳ್ಳ, ಕೊಳ್ಳ, ಕೆಲ ಕೊಳವೆಬಾವಿಗಳು ಬತ್ತಿದಾಗಲೂ ಪುಟ್ಟ ಹೊಂಡದ ನೀರು ಬತ್ತಿದ್ದನ್ನು ನೋಡಿಲ್ಲ’ ಎನ್ನುತ್ತಾರೆ ಅವರು.

ಕಾಡು ಪ್ರಾಣಿಗಳ ತಾಣ:‘ಗುಡಿ ಪಕ್ಕದಲ್ಲಿಯೇ ಕೊಳ್ಳ ಇರುವುದರಿಂದ ಅನೇಕ ಕಾಡು ಪ್ರಾಣಿಗಳು ದಾಹ ಇಂಗಿಸಿಕೊಳ್ಳಲು ಬರುತ್ತವೆ. ಜಿಂಕೆ ಹಿಂಡು, ನವಿಲು, ಕಾಡುಕೋಳಿ ಹಾಗೂ ಕಾಡುಕೋಣಗಳು ಬರುವುದು ಸಾಮಾನ್ಯ. ಕತ್ತೆ ಕಿರುಬ ಬಂದದ್ದೂ ಇದೆ. ಹುಲಿ ಗರ್ಜನೆ ಒಮ್ಮೆ ಮೊಳಗಿದ್ದು ಬಿಟ್ಟರೆ ಮತ್ತೆಂದೂ ಕೇಳಿಲ್ಲ. ಇದು ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿ ಮತ್ತಷ್ಟು ಬೆಳೆಯುವ ಅರ್ಹತೆ ಹೊಂದಿದೆ’ ಎನ್ನುತ್ತಾರೆ ಅವರು.

ಹೊನ್ನಾಪುರದ ಅಶೋಕ ಮಡಿವಾಳಪ್ಪ ಮಡಿವಾಳರ ಮುನೇಶ್ವರ ದೇವರ ಗುಡಿ ಅರ್ಚಕರಾಗಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT