ಶುಕ್ರವಾರ, ನವೆಂಬರ್ 15, 2019
21 °C

ದೌರ್ಜನ್ಯ ಖಂಡಿಸಿ ಮುಸ್ಲಿಮರ ಪ್ರತಿಭಟನೆ

Published:
Updated:
Prajavani

ಅಥಣಿ: ಜಾರ್ಖಂಡ್‌ನಲ್ಲಿ ಮುಸ್ಲಿಂ ಯುವಕನ ಮೇಲಿನ ಹಲ್ಲೆ ಖಂಡಿಸಿ ಯುನೈಟೆಡ್‌ ವೆಲ್‌ಫೇರ್‌ ಫೌಂಡೇಷನ್ ಮತ್ತು ಜಮೈತ್ ಉಲ್ಮ ಇ ಸಂಘಟನೆಗಳ ನೇತೃತ್ವದಲ್ಲಿ ಮುಸ್ಲಿಮರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ನಾಲಬಂದ ಗಲ್ಲಿ ಮಸೀದಿ ಬಳಿಯಿಂದ ಎಂ.ಜಿ. ಮಾರ್ಕೆಟ್‌–ಅಂಬೇಡ್ಕರ್‌ ವೃತ್ತ  ಮೂಲಕ ಹಳೆಯ ತಹಶೀಲ್ದಾರ್‌ ಕಚೇರಿವರೆಗೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಬಂದರು. ಬಳಿಕ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯನ್ನು ಅರ್ಧ ಗಂಟೆವರೆಗೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.

‘ಕೆಲವು ದಿನಗಳ ಹಿಂದೆ ಜಾರ್ಖಂಡ್‌ನಲ್ಲಿ ಮುಸ್ಲಿಂ ಸಮುದಾಯದ ತಬ್ರೇಜ್‌ ಅನ್ಸಾರಿ ಎನ್ನುವವರಿಂದ ಅನವಶ್ಯಕವಾಗಿ ಘೋಷಣೆ ಕೂಗಿಸುವುದು ಮತ್ತು ಅವರ ಮೇಲೆ ದೌರ್ಜನ್ಯ ನಡೆಸಿರುವುದನ್ನು ದೇಶದ ಜನರೆಲ್ಲರೂ ಖಂಡಿಸಬೇಕು’ ಎಂದು ಮುಖಂಡ ಶಹಜಹಾನ್ ಡೊಂಗರಗಾಂವ ಹೇಳಿದರು.

ದಸಂಸ ಮುಖಂಡ ಸಿದ್ದಾರ್ಥ ಶಿಂಗೆ ಮಾತನಾಡಿ, ‘ಕೆಳವರ್ಗದವರ ಮೇಲೆ ಅನವಶ್ಯವಾಗಿ ಹೆಲ್ಲೆ ನಡೆಸುವುದು ಮತ್ತು ಕುಟುಂಬದ ಮೇಲೆ ದೌರ್ಜನ್ಯ ಎಸಗುವುದು ರಾಜಾರೋಷವಾಗಿ ನಡೆದಿದೆ. ಆದರೆ ಇದನ್ನು ತಡೆಯಲು ಕೇಂದ್ರ ಸರ್ಕಾರ ವಿಫಲವಾಗಿದೆ. ಈ ರೀತಿ ನಡೆದರೆ ಕೆಳ ವರ್ಗದವರು ಸುರಕ್ಷಿತವಾಗಿ ಇರುವುದು ಹೇಗೆ ಎನ್ನುವುದೇ ಪ್ರಶ್ನೆಯಾಗಿದೆ. ರಾಷ್ಟ್ರಪತಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಮೌಲ್ವಿ ಮುಫ್ತಿ ಹಬೀಬುಲ್ಲಾ ಖಾಸಮಿ ಮಾತನಾಡಿ, ‘ಬಾಬಾಸಾಹೇಬ್ ಅಂಬೇಡ್ಕರ್‌ ಎಲ್ಲರಿಗೂ ಒಳಿತಾಗಲೆಂದು ಸಂವಿಧಾನ ರಚಿಸಿದ್ದಾರೆ. ಎಲ್ಲರೂ ಕೂಡಿ ಬಾಳಬೇಕು. ಪರಸ್ಪರ ಗೌರವಿಸಬೇಕು’ ಎಂದರು.

ಮುಖಂಡರಾದ ಅಸ್ಲಾಂ ನಾಲಬಂದ, ಮೆಹಬೂಬ್ ತರಡೆ, ಅಯಾಜ್ ಮಾಸ್ಟರ್, ಶಬ್ಬೀರ್‌ ಸಾತಬಚ್ಚೆ, ದಂಸಸ ಮುಖಂಡರಾದ ಸಂಜಯ ಕಾಂಬಳೆ, ಕಪಿಲ್‌ ಘಟಕಾಂಬಳೆ, ಮಂಜುನಾಥ ಹೋಳಿಕಟ್ಟಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)