ಬುಧವಾರ, ಅಕ್ಟೋಬರ್ 16, 2019
22 °C
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾದ ನಂದಗಡ

ಸ್ವಚ್ಛತೆ, ನೀರು ಪೂರೈಕೆಗೆ ಆದ್ಯತೆ

Published:
Updated:
Prajavani

ಖಾನಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಯಗಳ ಸಮರ್ಪಕ ಅನುಷ್ಠಾನ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮತ್ತು ಶುದ್ಧ ನೀರು ಪೂರೈಕೆಗೆ ಆದ್ಯತೆ ನೀಡಿರುವ ತಾಲ್ಲೂಕಿನ ನಂದಗಡ ಗ್ರಾಮ ಪಂಚಾಯ್ತಿಗೆ ಈ ವರ್ಷದ ‘ಗಾಂಧಿ ಗ್ರಾಮ ಪುರಸ್ಕಾರ’ ದೊರೆತಿದೆ.

‘ನಂದಗಡವನ್ನು ಬಯಲು ಶೌಚ ಮುಕ್ತ ಗ್ರಾಮವೆಂದು ಜಿಲ್ಲಾ ಪಂಚಾಯ್ತಿಯಿಂದ ಘೋಷಿಸಲಾಗಿದೆ. ಸ್ವಚ್ಛತೆ, ಪಾರದರ್ಶಕತೆ, ಸಮಯ ಪಾಲನೆ ಮತ್ತು ಕಡತಗಳ ಸಮರ್ಪಕ ನಿರ್ವಹಣೆಯಲ್ಲಿ ಈ ಪಂಚಾಯ್ತಿ ಮಾದರಿಯಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಮಾಹಿತಿ ನೀಡಿದರು.

ಪ್ರಗತಿ ಗಮನಿಸಿ:

‘ವಾರ್ಡ್ ಸಭೆಗಳು, ಗ್ರಾಮ ಸಭೆಗಳು, ಸಾಮಾನ್ಯ ಸಭೆಗಳು, ಜಮಾಬಂದಿ ಕಾಲಕಾಲಕ್ಕೆ ನಡೆಸಲಾಗುತ್ತಿದೆ. ಸಾಮಾಜಿಕ ಲೆಕ್ಕ ಪರಿಶೋಧನೆಯಂತಹ ನಿಯಮಗಳನ್ನು ಪಾಲಿಸಲಾಗಿದೆ. ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಪಂಚಾಯತ್‌ರಾಜ್ ಅಧಿನಿಯಮದ ಆಶಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸಲಾಗಿದೆ. ಸರ್ವಾಂಗೀಣ ಪ್ರಗತಿ ಗಮನಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ ಪುರಸ್ಕಾರ ಕೊಟ್ಟು ಗೌರವಿಸಿದೆ’ ಎಂದು ಪಿಡಿಒ ಕೆ.ಎಸ್. ಗಣೇಶ್ ಹೇಳುತ್ತಾರೆ.

‘ಪ್ರಜಾಪ್ರಭುತ್ವ ಹಾಗೂ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಡಿ ಗ್ರಾಮೀಣ ಭಾಗದ ಜನರ ಬದುಕು ಹಸನುಗೊಳಿಸುವ ನಿಟ್ಟಿನಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ‘ಆನಂದ ಜಲ’ ಯೋಜನೆಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಸಲಾಗುತ್ತಿದೆ. ಮೃತರ ಕುಟುಂಬಗಳಿಗೆ ‘ಸಾಂತ್ವನ’ ಯೋಜನೆಯಡಿ ಅಂತ್ಯಕ್ರಿಯೆಗಾಗಿ ಸಹಾಯಧನ ಕೊಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬ್ರೌಸಿಂಗ್ ಸೆಂಟರ್: ‘ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಬ್ರೌಸಿಂಗ್ ಸೆಂಟರ್’ ಆರಂಭಿಸಲಾಗಿದ್ದು, ಯುವಕರಿಗೆ ಆನ್‌ಲೈನ್ ಸೇವೆ ಒದಗಿಸಲಾಗುತ್ತಿದೆ. ಘನ ತ್ಯಾಜ್ಯ  ಸಂಸ್ಕರಣಾ ಘಟಕವಿದೆ. ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಸ್ವೆಟರ್‌ ವಿತರಣೆ ಮಾಡಲಾಗುತ್ತಿದೆ. ಅಂಗನವಾಡಿಗಳಿಗೆ ತಟ್ಟೆ-ಲೋಟ ವಿತರಿಸಲಾಗಿದೆ. ಇದು ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಸದಸ್ಯ ಮಹಾಂತೇಶ ರಾಹುತ ಹೇಳುತ್ತಾರೆ.

‘ಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪಂಗಡದವರು, ಅಲ್ಪಸಂಖ್ಯಾತರು ಹಾಗೂ ಅಂಗವಿಕಲರಿಗೆ ಹಲವು ಯೋಜನೆಗಳಡಿ ಸಹಾಯ ಮಾಡಲಾಗಿದೆ. ಕಾಂಕ್ರೀಟ್ ರಸ್ತೆ, ಬೀದಿ ದೀಪಗಳು, ಸೋಲಾರ್ ದೀಪ, ಕುಡಿಯುವ ನೀರು, ಚರಂಡಿ ಮೊದಲದ ಮೂಲಸೌಕರ್ಯ ಒದಗಿಸಲಾಗಿದೆ. ಪರಿಶಿಷ್ಟ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯಧನ ನೀಡಲಾಗಿದೆ’ ಎಂದು ಅಧ್ಯಕ್ಷ ಶಫಿ ಖಾಜಿ ವಿವರಿಸಿದರು.

‘ಯುವಕ–ಯುವತಿಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗಿದೆ. ಅನಕ್ಷರಸ್ಥ ವಯಸ್ಕರಿಗೆ ಅಕ್ಷರ ಜ್ಞಾನ ನೀಡಲಾಗುತ್ತಿದೆ. ಮಹಿಳಾ ವಿಶೇಷ ಗ್ರಾಮ ಸಭೆಗಳನ್ನು ನಡೆಸಿದ್ದೇವೆ. ಕ್ರಿಯಾಶೀಲ ಸ್ವ-ಸಹಾಯ ಸಂಘಗಳಿಗೆ ಸುತ್ತುನಿಧಿ ಹಾಗೂ ಸಹಾಯಧನದೊಂದಿಗೆ ಸಾಲ ನೀಡಲು ಕ್ರಮ ವಹಿಸಲಾಗಿದೆ. ಶಾಲೆ ಮತ್ತು ಅಂಗನವಾಡಿಗಳಿಗೆ ಸೌಕರ್ಯಗಳನ್ನು ಒದಗಿಸಿದ್ದೇವೆ. ಅಲ್ಲಲ್ಲಿ ಸಸಿಗಳನ್ನು ನೆಡಲಾಗಿದೆ’ ಎಂದು ವಿವರಿಸಿದರು.

Post Comments (+)