ಇಮಾಮ್‌ಹುಸೇನ್ ಗೂಡುನವರ
ಬೆಳಗಾವಿ: ಸೌಲಭ್ಯವಂಚಿತವಾಗಿದ್ದ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಂದೂರ–ಹುಲಿಕೊತ್ತಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ₹ 77 ಲಕ್ಷ ವೆಚ್ಚದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳಿಂದ ಹೊಸ ಮೆರುಗು ಪಡೆದಿದೆ.
2007ರಲ್ಲಿ ಸ್ಥಾಪನೆಯಾದ ಈ ಪ್ರೌಢಶಾಲೆಯು ಆರಂಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದಲ್ಲೇ ನಡೆಯುತ್ತಿತ್ತು. 2021ರ ಫೆಬ್ರವರಿಯಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಯಿತು. ಆದರೆ, ಮೂಲಸೌಕರ್ಯ ಕೊರತೆಯಿಂದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಮಕ್ಕಳ ಕ್ರೀಡಾ ಸಾಧನೆಗೂ ಹೆಚ್ಚು ಅವಕಾಶ ಸಿಗುತ್ತಿರಲಿಲ್ಲ.
ಕಳೆದ ವರ್ಷ ಬೀಡಿ ಹೋಬಳಿ ವಲಯಮಟ್ಟದ ಇಲಾಖೆ ಕ್ರೀಡಾಕೂಟ ಸಂಘಟಿಸಿದ್ದ ಶಾಲೆ, ಈ ವರ್ಷ ಪ್ರಾಥಮಿಕ ಶಾಲೆ ಕೇಂದ್ರಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದೆ.
ಏನೇನು ಸೌಕರ್ಯ?: ‘ಕಳೆದ ವರ್ಷ ನಮ್ಮ ಶಾಲೆ ಆವರಣದಲ್ಲಿ ಬಾಸ್ಕೆಟ್‌ಬಾಲ್, ಥ್ರೋಬಾಲ್, ವಾಲಿಬಾಲ್, ಕೊಕ್ಕೊ, ಕಬಡ್ಡಿ ಅಂಕಣ, ರನ್ನಿಂಗ್ ಟ್ರ್ಯಾಕ್ ನಿರ್ಮಿಸಲಾಗಿದ್ದು, ಮಕ್ಕಳು ನಿತ್ಯ ಅಭ್ಯಸಿಸುತ್ತಾರೆ. ಈ ಸೌಕರ್ಯ ಕಲ್ಪಿಸಿದ್ದರಿಂದ 2022–23ನೇ ಸಾಲಿನಲ್ಲಿ ಬಾಲಕರು ಮತ್ತು ಬಾಲಕಿಯರ ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಎನ್.ಎಂ.ಕುರೇರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಸಕ್ತ ಸಾಲಿನ ಬೀಡಿ ಹೋಬಳಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಬಾಸ್ಕೆಟ್‌ಬಾಲ್‌ನಲ್ಲಿ ಪ್ರಥಮ, ಕಬಡ್ಡಿಯಲ್ಲಿ ದ್ವಿತೀಯ, ಬಾಲಕರ ಬಾಸ್ಕೆಟ್‌ಬಾಲ್ ಮತ್ತು ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಹಲವು ಪದಕಗಳನ್ನು ಗಳಿಸಿ, ತಾಲ್ಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ’ ಎಂದರು.
‘ನರೇಗಾ ಯೋಜನೆಯಡಿ ಆವರಣ ಗೋಡೆ, ಭೋಜನಾಲಯ ನಿರ್ಮಾಣ, ಪೇವರ್ಸ್ ಅಳವಡಿಕೆ ಮತ್ತಿತರ ಕೆಲಸ ಕೈಗೊಂಡಿದ್ದರಿಂದ ಪ್ರೌಢಶಾಲೆಗೆ ಹೊಸ ರೂಪ ಸಿಕ್ಕಿದೆ. ಇಲ್ಲಿ 8ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 99 ಮಕ್ಕಳಿಗೆ ಅನುಕೂಲವಾಗಿದೆ’ ಎಂದು ಮುಖ್ಯಶಿಕ್ಷಕ ಪಿ.ಎಸ್.ಮಾದರ ಹೇಳಿದರು.
ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನರೇಗಾದಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೆ. ಬಾಕಿ ಇರುವ ಕಾಮಗಾರಿಗಳನ್ನೂ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು–ವೀರನಗೌಡ ಏಗನಗೌಡರ ಕಾರ್ಯನಿರ್ವಾಹಕ ಅಧಿಕಾರಿ ಖಾನಾಪುರ ತಾಲ್ಲೂಕು ಪಂಚಾಯಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.