ಶುಕ್ರವಾರ, ಜುಲೈ 1, 2022
22 °C

ಯುವಜನರ ಸಹಭಾಗಿತ್ವದಿಂದ ಬಲಿಷ್ಠ ಪ್ರಜಾಪ್ರಭುತ್ವ: ಸಿಇಒ ಕೆ.ವಿ. ರಾಜೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಯುವಜನರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಟಗೊಳಿಸಲು ಸಾಧ್ಯವಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಒಇ ಕೆ.ವಿ. ರಾಜೇಂದ್ರ ಹೇಳಿದರು.

ಜಿಲ್ಲಾಡಳಿತದಿಂದ ಇಲ್ಲಿನ ಕುಮಾರಗಂಧರ್ವ ಕಲಾಮಂದಿರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ 18 ವರ್ಷ ತುಂಬಿದವರಿಗೆ ಮತದಾನದ ಹಕ್ಕನ್ನು ಸಂವಿಧಾನ ಒದಗಿಸಿದೆ. ಆದರೆ, ಯುವಜನತೆ ಮತ್ತು ಸುಶಿಕ್ಷಿತರೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಾರೆ. ಇದು ಸರಿಯಲ್ಲ. ದೇಶ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಯುವಜನತೆಯ ಸಹಭಾಗಿತ್ವ ಅಗತ್ಯ’ ಎಂದು ತಿಳಿಸಿದರು.

ನಾವೇ ಆಯ್ಕೆ ಮಾಡಿಕೊಳ್ಳಬೇಕು:

‘ಸಂವಿಧಾನವು ದೇಶದ ನಾಗರಿಕರಿಗೆ ನೀಡಿರುವ ಪ್ರಬಲ ಆಯುಧವೆಂದರೆ ಮತದಾನದ ಹಕ್ಕು. ಅದನ್ನು ಯೋಗ್ಯ ವ್ಯಕ್ತಿಗೆ ನೀಡಿ ನಾಯಕರನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಅರ್ಹರಾದ ಎಲ್ಲರೂ ಪ್ರಜಾಪ್ರಭುತ್ವಕ್ಕೆ ಕೊಡುಗೆ ನೀಡಲು ಮತದಾನ ಮಾಡಬೇಕು. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು‌’ ಎಂದು ಹೇಳಿದರು.

ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ಮಾತನಾಡಿ, ‘ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ದೇಶ ಕಟ್ಟುವ ಕಾರ್ಯವನ್ನು ಪ್ರತಿಯೊಬ್ಬ ಅರ್ಹರೂ ಮಾಡಬಹುದಾಗಿದೆ. ಮತದಾನ ನಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಬೇಕು. ಅದೊಂದು ಪವಿತ್ರ ಮತ್ತು ಮುಖ್ಯ ಕಾರ್ಯ. ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುವುದು ಎಂದರೆ ದೇಶಕ್ಕೆ ಅಗೌರವ ತೋರಿದಂತೆ ಎಂದು ತಿಳಿಯಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ‘ಮತದಾನದ ಪ್ರಕ್ರಿಯೆ ಬಗ್ಗೆ ಯುವಜನರು ನಿರ್ಲಕ್ಷ್ಯ ತೋರಬಾರದು. ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ನೆರೆ ಹೊರೆಯವರಿಗೂ ಮತದಾನದ ಮಹತ್ವದ ಬಗ್ಗೆ ತಿಳಿಸಿ ಪ್ರೋತ್ಸಾಹಿಸಬೇಕು. ಮಹಿಳಾ ಮತದಾರರು ಕೂಡ ಹಕ್ಕು ಚಲಾಯಿಸಲು ಮುಂದಿರಬೇಕು’ ಎಂದು ತಿಳಿಸಿದರು.

ಆನ್‌ಲೈನ್‌ನಲ್ಲೂ ಅವಕಾಶ:

‘ಚುನಾವಣಾ ಆಯೋಗ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು, ಆನ್‌ಲೈನ್ ಮೂಲಕ ಹೆಸರು ನೋಂದಾಯಿಸುವ ಅವಕಾಶವನ್ನು ಆಯೋಗ ನೀಡಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್) ವಿತರಣೆ ಮಾಡಲಾಯಿತು. ಅಂಧರಿಗೆ ಬ್ರೈಲ್‌ ಲಿಪಿಯುಳ್ಳ ಚೀಟಿ ವಿತರಿಸಿದ್ದು ವಿಶೇಷವಾಗಿತ್ತು.

ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಇದ್ದರು. ಮಹೇಶ್ವರಿ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪಾಲಿಕೆ ಆಯುಕ್ತ ಶಶಿದರ ಕುರೇರ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ ವಂದಿಸಿದರು.

ಇದಕ್ಕೂ ಮುನ್ನ, ರಾಣಿ ಚನ್ನಮ್ಮ ವೃತ್ತದಿಂದ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು