ಭಾನುವಾರ, ಜುಲೈ 25, 2021
28 °C

ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟ; ಮುಗಿಲು ಚುಂಬಿಸುವ ಮೋಡಗಳು ಸೊಬಗು

ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ (ಬೆಳಗಾವಿ ಜಿಲ್ಲೆ): ಬೇಸಿಗೆ ಕಳೆದು ಮಳೆಗಾಲದ ಆರಂಭಕ್ಕೆ ಕ್ಷಣಗಣನೆ ಪ್ರಾರಂಭಗೊಳ್ಳುವುದರ ಪ್ರತೀಕವಾಗಿ ತಾಲ್ಲೂಕಿನ ಕರ್ನಾಟಕ-ಮಹಾರಾಷ್ಟ್ರ ಮತ್ತು ಗೋವಾ ಗಡಿಯ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ದೃಶ್ಯವೈಭವ ಕಾಣಸಿಗುತ್ತಿದೆ.

ಮುಗಿಲು ಚುಂಬಿಸುವ ಮೋಡಗಳು ಮತ್ತು ಇಬ್ಬನಿಯಿಂದ ಪಶ್ಚಿಮ ಘಟ್ಟಗಳು ನವವಧುವಿನಂತೆ ಕಂಗೊಳಿಸುತ್ತಿವೆ. ದಟ್ಟ ಅರಣ್ಯವನ್ನು ಸುತ್ತುವರಿದ ಬೆಟ್ಟ ಸಾಲುಗಳನ್ನು ಚುಂಬಿಸಲು ಮೋಡಗಳು ಹಾತೊರೆಯುತ್ತಿವೆ. ತುಂತುರು ಮಳೆಯಿಂದ ನಿರ್ಮಾಣಗೊಂಡ ಇಬ್ಬನಿಯಿಂದ ಬೆಟ್ಟಗುಡ್ಡಗಳು ನಯನಮನೋಹರವಾಗಿ ಗೋಚರಿಸತೊಡಗಿವೆ.

ಆಗಾಗ ಬೀಸುವ ಜೋರಾದ ತಣ್ಣನೆಯ ಗಾಳಿ. ಕೆಲವೊಮ್ಮೆ ಸಣ್ಣ. ಕೆಲವೊಮ್ಮೆ ದಪ್ಪ ಹನಿಗಳಿಂದ ಉದುರುವ ಮಳೆ. ಕಣ್ಣು ಹಾಯಿಸಿದಲ್ಲೆಲ್ಲ ಗೋಚರಿಸುವ ಹಚ್ಚ ಹಸಿರಿನ ಬೆಟ್ಟಗಳು. ಈಗ ತಾನೆ ಚಿಗುರೊಡೆಯುತ್ತಿರುವ ಹುಲ್ಲು ಮಳೆಗಾಲ ಆರಂಭದ ಮುನ್ಸೂಚನೆಯನ್ನು ನೀಡುತ್ತಿದೆ. ಪ್ರಕೃತಿ ಮಾತೆಯಲ್ಲಿ ಉಂಟಾದ ಈ ಬದಲಾವಣೆಯಿಂದಾಗಿ ತಾಲ್ಲೂಕಿನ ಅರಣ್ಯದ ನಿಸರ್ಗದತ್ತ ಸೌಂದರ್ಯ ಇಮ್ಮಡಿಯಾಗಿದೆ.

ಮುಂಗಾರು ಮಳೆಯ ಆಗಮನಕ್ಕೆ ತಾಲ್ಲೂಕಿನ ಕಣಕುಂಬಿ, ಚಿಗುಳೆ, ಮಾನ, ಸಡಾ, ಚಿಕಲೆ, ಅಮಟೆ, ಪಾರವಾಡ ಮತ್ತು ಸುತ್ತಲಿನ ಕಾಡಿನಲ್ಲಿ ಮಂಜು ಆವರಿಸಿ ಹೃನ್ಮನಗಳಿಗೆ ಮುದ ನೀಡುತ್ತಿದೆ. ಘಟ್ಟ ಪ್ರದೇಶದಲ್ಲಿ ತಂಪಿನ ವಾತಾವರಣ ನಿರ್ಮಾಣಗೊಂಡು ಬೇಸಿಗೆಯ ಬೇಗುದಿಯನ್ನು ಮರೆಸುತ್ತಿದೆ. ಹಚ್ಚ ಹಸಿರಿನ ವನ ಸಿರಿಯ ವೈಭವ ಮತ್ತು ಕಾನನದಲ್ಲಿ ಸುರಿಯುವ ಮಳ ಮತ್ತು ತಂಪಾದ ಚಳಿಗೆ ಮೈಯೊಡ್ಡುವುದು ನಿಸರ್ಗ ಪ್ರಿಯರ ಪಾಲಿಗೆ ಹಬ್ಬದ ವಾತಾವರಣದಂತೆ ಭಾಸವಾಗುತ್ತಿದೆ.

ಗೋವಾ ರಾಜಧಾನಿ ಪಣಜಿಯಿಂದ ಚೋರ್ಲಾ ಮತ್ತು ಅನಮೋಡ್ ಮಾರ್ಗವಾಗಿ ಬೆಳಗಾವಿಯತ್ತ ಸಾಗುವ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರಸ್ತುತ ಕಾಣಿಸುತ್ತಿರುವ ಗಗನವನ್ನು ಚುಂಬಿಸುವ ಮೋಡಗಳ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವಾದಂತಾಗಿದೆ. ವರ್ಷದ ಕೆಲವೇ ತಿಂಗಳುಗಳ ಕಾಲ ಕಾಣಸಿಗುವ ಈ ನೈಸರ್ಗಿಕ ಹಾಗೂ ನಯನ ಮನೋಹರ ದೃಶ್ಯಗಳು ಸೃಷ್ಟಿಯ ವಿಸ್ಮಯಗಳಾಗಿವೆ. ದಾರಿಹೋಕರು ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್‌ ಕಳೆಯುತ್ತಿದ್ದಂತೆಯೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು