ಬುಧವಾರ, ಜನವರಿ 26, 2022
26 °C
ರಾಜ್ಯಮಟ್ಟದ ಚಿಂತನ–ಮಂಥನ ಸಂವಾದ ಕಾರ್ಯಕ್ರಮದಲ್ಲಿ ಮುಖಂಡರ ಆಗ್ರಹ

‘ನೇಕಾರರ ಅಸಂಘಟಿತ ವಲಯಕ್ಕೆ ಸೇರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಮ್ಮನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು. ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಹೆಚ್ಚಿನ ಸೌಲಭ್ಯ ಒದಗಿಸಬೇಕು. ನೇಕಾರಿಕೆ ಉಳಿವಿಗಾಗಿ ಗುಜರಾತ್‌, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮಾದರಿ ಯೋಜನೆಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂದು ನೇಕಾರರು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ಉದ್ಯಮಬಾಗ್‌ದ ಫೌಂಡ್ರಿ ಕ್ಲಸ್ಟರ್‌ನಲ್ಲಿ ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಚಿಂತನ–ಮಂಥನ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು.

ಶಾಲಾ ಮಕ್ಕಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ನೌಕರರಿಗೆ ಬಟ್ಟೆ, ಸೀರೆಗಳನ್ನು ಹೊರರಾಜ್ಯಗಳಿಂದ ಸರ್ಕಾರ ಖರೀದಿಸುತ್ತಿದೆ. ಇದರ ಬದಲಿಗೆ ರಾಜ್ಯದ ನೇಕಾರರಿಂದಲೇ ಉತ್ಪಾದಿಸಿ ಖರೀದಿಸಬೇಕು. ಕೊರೊನಾ ಸಂಕಷ್ಟ ಸಮಯದಲ್ಲಿ ಬದುಕು ನಿರ್ವಹಣೆಗೆ ಹೆಣಗಾಡುತ್ತಿರುವ ನೇಕಾರರೊಂದಿಗೆ ಮುಖ್ಯಮಂತ್ರಿ ವಿಶೇಷ ಸಭೆ ನಡೆಸಬೇಕು. ಶಿಕ್ಷಣ ರಂಗದಲ್ಲಿ ನೇಕಾರರ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು. ನೇಕಾರರ ಅಭಿವೃದ್ಧಿಗಾಗಿ ಸ್ಥಾಪಿಸಿರುವ ನಿಗಮಕ್ಕೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು. ಸ್ವ ಉದ್ಯೋಗ ಕೈಗೊಳ್ಳಲು ಯಂತ್ರಗಳ ಖರೀದಿಗೆ ಹೆಚ್ಚಿನ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದರು.

ಸಾನ್ನಿಧ್ಯ ವಹಿಸಿದ್ದ ಅಥಣಿಯ ವಿರಕ್ತಮಠದ ಮಹಾಂತ ದೇವರು, ‘ನೇಕಾರರದ್ದು ಶ್ರಮಿಕ ಸಮುದಾಯ. ಸಮುದಾಯದ ಏಳ್ಗೆಗಾಗಿ ನಡೆಯುವ ಹೋರಾಟಗಳಿಗೆ ಸದಾ ನಮ್ಮ ಬೆಂಬಲವಿದೆ’ ಎಂದರು.

ಕರ್ನಾಟಕ ಜವಳಿ ಗಿರಣಿಗಳ ಮಹಾಮಂಡಳದ ಉಪಾಧ್ಯಕ್ಷ ರಾಜಶೇಖರ ಸೂರಗಾಂವಿ ‘ಪ್ರಚಲಿತ ನೇಕಾರಿಕೆ ವೃತ್ತಿ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳೇನು’ ಹಾಗೂ ಸಾಹಿತಿ ಶಂಕರ ಬುಚಡಿ ‘ಹೊರರಾಜ್ಯಗಳಲ್ಲಿ ನೇಕಾರರಿಗಿರುವ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯಗಳು ಹಾಗೂ ಮೀಸಲಾತಿ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನ ವೇಳೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಜವಳಿ ಸಚಿವರನ್ನು ಭೇಟಿಯಾಗಲು ತೀರ್ಮಾನಿಸಲಾಯಿತು. ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.

ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರ್ಗಿ, ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ, ಶಿವಾನಂದ ಟಿರಕಿ, ಲೋಹಿತ ಮೋರಕರ್‌ ಉಪಸ್ಥಿತರಿದ್ದರು. ರಾಜ್ಯದ ವಿವಿಧೆಡೆಯ ನೇಕಾರ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು