ಬುಧವಾರ, ಸೆಪ್ಟೆಂಬರ್ 18, 2019
28 °C
ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ ಹೇಳಿಕೆ

ನೇಪಾಳಿ ಕವನ ಶೀಘ್ರವೇ ಕನ್ನಡಕ್ಕೆ

Published:
Updated:
Prajavani

ಬೆಳಗಾವಿ: ‘ನೇಪಾಳಿ ಭಾಷೆಯ 50 ಕವನಗಳನ್ನು ಕನ್ನಡಕ್ಕೆ ಅನುವಾದಗೊಳಿಸಿ ಕವನ ಸಂಕಲನ ಮುದ್ರಿಸಲಾಗಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ ತಿಳಿಸಿದರು. 

ಇಲ್ಲಿನ ನೆಹರೂ ನಗರದ ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನೇಪಾಳಿ ಭಾಷೆಗೆ ಕನ್ನಡದ 50 ಕೃತಿಗಳನ್ನು ತರ್ಜುಮೆ ಮಾಡಿ ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ವಿಚಾರ ವಿನಿಮಯ ಮಾಡಿಕೊಂಡಾಗ ಮಾತ್ರ ಸಾಹಿತ್ಯ ಶ್ರೀಮಂತವಾಗಲು ಸಾಧ್ಯ’ ಎಂದು ಪ್ರತಿಪಾದಿಸಿದರು.

₹34 ಲಕ್ಷ ಪರಿಹಾರ: ‘ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಷತ್ತಿನಿಂದ ₹30 ಲಕ್ಷ ಹಾಗೂ ಪದಾಧಿಕಾರಿಗಳಿಂದ ಸಂಗ್ರಹಿಸಿರುವ ₹4 ಲಕ್ಷ ಸೇರಿ ಒಟ್ಟು ₹34 ಲಕ್ಷ ನೀಡಲಾಗುವುದು’ ಎಂದು ವಿವರಿಸಿದರು.

‘ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳ ಭವನ ನಿರ್ಮಾಣದಲ್ಲಿ ಜಿಲ್ಲೆಯೇ ಮೊದಲ ಸ್ಥಾನದಲ್ಲಿದೆ. ಸಾಹಿತಿ ಚಂದ್ರಶೇಖರ ಕಂಬಾರ ಅವರ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಘೋಡಗೇರಿಯಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಭವನದ ಕಾಮಗಾರಿಗೆ ಮಳೆ ಅಡ್ಡಿಯಾಗಿತ್ತು. ಈಗ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಉದ್ಘಾಟಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು. 

ಕನ್ನಡ ಭವನ ಅಭಿವೃದ್ಧಿಗೆ ಕ್ರಮ: ‘ಇಲ್ಲಿನ ವಡಗಾವಿಯಲ್ಲಿರುವ ಗಡಿ ಕನ್ನಡ ಭವನವನ್ನು ಅಭಿವೃದ್ಧಿಪಡಿಸಬೇಕು ಹಾಗೂ ಇದನ್ನು ಸಾಹಿತ್ಯ ಪರಿಷತ್ತಿನ ಸುಪರ್ದಿಗೆ ಪಡೆದುಕೊಳ್ಳಬೇಕು’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಸಾಲಟ್ಟಿ ಒತ್ತಾಯಿಸಿದರು.

‘ಗಡಿ ಕನ್ನಡ ಭವನ ಸದ್ಯ ಪಾಲಿಕೆಯ ಹಿಡಿತದಲ್ಲಿದೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸುಪರ್ದಿಗೆ ನೀಡುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ಭವನವನ್ನು ಅಭಿವೃದ್ಧಿಪಡಿಸಿ ನಿರಂತರವಾಗಿ ಕನ್ನಡದ ಕಾರ್ಯಕ್ರಮಗಳು ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಭವನದಲ್ಲಿಯೇ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಕಚೇರಿ ತೆರೆಯಲಾಗುವುದು’ ಎಂದು ಭರವಸೆ ನೀಡಿದರು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಜಿಲ್ಲಾ ಪದಾಧಿಕಾರಿಗಳಿಂದ ಸಂಗ್ರಹಿಸಿರುವ ₹10 ಸಾವಿರ ಚೆಕ್‌ ಅನ್ನು ಮನು ಬಳಿಗಾರ ಅವರಿಗೆ ಹಸ್ತಾಂತರಿಸಿದರು.

ಸಾಹಿತಿಗಳಾದ ಯ.ರು. ಪಾಟೀಲ, ಪ್ರಕಾಶ ದೇಶಪಾಂಡೆ, ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗುರುಗೌಡ ಪಾಟೀಲ ಇದ್ದರು.

Post Comments (+)