ಮಂಗಳವಾರ, ನವೆಂಬರ್ 19, 2019
29 °C
ಜೆಡಿಎಸ್ ಮುಖಂಡ ಎನ್.ಎಚ್. ಕೋನರೆಡ್ಡಿ ಆಗ್ರಹ

ನೆರೆ ಪರಿಹಾರ ಚರ್ಚೆಗೆ ಅಧಿವೇಶನ ನಡೆಸಿ

Published:
Updated:

ಬೆಳಗಾವಿ: ‘ಉತ್ತರ ಕರ್ನಾಟಕದಲ್ಲಿ ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಪ್ರವಾಹ ಬಂದಿದೆ. ಸಹಸ್ರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಅವರಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಕೂಡಲೇ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ವಿಶೇಷ ಅಧಿವೇಶನ ನಡೆಸಬೇಕು’ ಎಂದು ಜೆಡಿಎಸ್ ಮುಖಂಡ ಎನ್.ಎಚ್. ಕೋನರೆಡ್ಡಿ ಆಗ್ರಹಿಸಿದರು.

‘ಕೇಂದ್ರದ ಇಬ್ಬರು ಸಚಿವರು, ಮುಖ್ಯಮಂತ್ರಿ ಹಾಗೂ ಕೇಂದ್ರದ ಅಧ್ಯಯನ ತಂಡ ಬಂದು ಹೋದರೂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಕೇರಳ ಸೇರಿದಂತೆ ಇತರೆಡೆ ಅತಿವೃಷ್ಟಿಯಾದಾಗ ತ್ವರಿತವಾಗಿ ಪರಿಹಾರ ನೀಡಲಾಗಿದೆ. ಆದರೆ, ಕರ್ನಾಟಕದ ವಿಷಯದಲ್ಲಿ ಕೇಂದ್ರವು ಮಲತಾಯಿ ಧೋರಣೆ ತಾಳಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದರೂ ಪರಿಹಾರದ ಬಗ್ಗೆ ಮಾತನಾಡಿಲ್ಲ. ಮೊದಲ ಕಂತಾಗಿ ₹ 5ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪತ್ರ ಬರೆದಿದ್ದರು. ಇದಕ್ಕೂ ಸ್ಪಂದಿಸಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿಗೂ ಕಿವಿಗೊಟ್ಟಿಲ್ಲ’ ಎಂದು ದೂರಿದರು.

‘ಮಹದಾಯಿ ನ್ಯಾಯಮಂಡಳಿ ತೀರ್ಪಿನ ‍ಪ್ರಕಾರ, ಮಹದಾಯಿ ನೀರು ಬಳಸಿಕೊಳ್ಳಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಬೆಂಗಳೂರಿನಲ್ಲಿ ಮುಂದಿನ ವಾರ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಹೊಸ ಪದಾಧಿಕಾರಿಗಳ ನೇಮಕಕ್ಕೆ ಚರ್ಚೆ ನಡೆಯಲಿದೆ’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಮುಖಂಡರಾದ ಫೈಜುಲ್ಲಾ ಮಾಡಿವಾಲೆ, ನಾಸೀರ್ ಬಾಗವಾನ ಇದ್ದರು.

ಪ್ರತಿಕ್ರಿಯಿಸಿ (+)