ಭಾನುವಾರ, ಆಗಸ್ಟ್ 25, 2019
20 °C
ರಾಖಿ ಕಟ್ಟಿದ ಯುವತಿಯರು

ಸಂತ್ರಸ್ತರಿಗೆ ಧೈರ್ಯ ತುಂಬಿದ ನಿಖಿಲ್

Published:
Updated:
Prajavani

ಬೆಳಗಾವಿ: ಇಲ್ಲಿನ ಖಾಸಬಾಗದ ಸಾಯಿ ಭವನದಲ್ಲಿ ತೆರೆಯಲಾಗಿರುವ ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸೋಮವಾರ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು. ಈ ವೇಳೆ ಸಂತ್ರಸ್ತ ಯುವತಿಯರು ನಿಖಿಲ್‌ಗೆ ರಾಖಿ ಕಟ್ಟಿ, ರಕ್ಷಾ ಬಂಧನದ ಶುಭಾಶಯ ಕೋರಿದರು.

ಆಹಾರ ಧಾನ್ಯ, ಚಾಪೆ, ಚಾದರ್‌ (ಹೊದಿಕೆ) ಸೇರಿ ಇನ್ನಿತರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಿದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭೀಕರ ಪ್ರವಾಹದಿಂದ ರಾಜ್ಯದ ಜನರು ತೀವ್ರ ಸಂಕಷ್ಟದಲ್ಲಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಲೇ ಸಂತ್ರಸ್ತರಿಗೆ ಅಗತ್ಯ ನೆರವು ಕಲ್ಪಿಸಬೇಕು’ ಎಂದರು. 

ನಮ್ಮ ಕೈಯಲ್ಲಿ ಸರ್ಕಾರವಿಲ್ಲ: ‘ನಮ್ಮ ಕೈಯಲ್ಲಿ ಈಗ ಸರ್ಕಾರವಿಲ್ಲ. ವೈಯಕ್ತಿಕವಾಗಿ ಹಾಗೂ ಪಕ್ಷದ ವತಿಯಿಂದ ಎಷ್ಟು ಆಗುತ್ತದೆಯೋ ಅಷ್ಟು ಸಹಾಯವನ್ನು ಮಾಡುತ್ತೇವೆ. ಪ್ರವಾಹದಿಂದ ಪೀಡಿತರಾಗಿರುವ ಲಕ್ಷಾಂತರ ಜನರಿಗೆ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು. 

‘ನಾನಿಲ್ಲಿ ರಾಜಕೀಯ ಮಾತನಾಡಲು ಬಂದಿಲ್ಲ. ಯಾರೊಬ್ಬರ ಬಗ್ಗೆ ದೂರು ಹೇಳಲು, ಆರೋಪ ಮಾಡಲು ಬಂದಿಲ್ಲ. ಸಂತ್ರಸ್ತರಿಗೆ ಬಟ್ಟೆ, ತಿಂಡಿ– ತಿನಿಸು, ಅಕ್ಕಿ, ಔಷಧಿ ನೀಡಲು ಬಂದಿದ್ದೇನೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂಗೆ ಆಗುತ್ತದೆ. ಎಷ್ಟು ನಷ್ಟವಾಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಪುನಃ ಜೀವನ ಕಟ್ಟಿಕೊಳ್ಳಲು ಅವರಿಗೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು’ ಎಂದರು.

ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಮುಖಂಡ ಎನ್.ಎಚ್. ಕೋನರಡ್ಡಿ ಇದ್ದರು.

Post Comments (+)