ಶನಿವಾರ, ಸೆಪ್ಟೆಂಬರ್ 18, 2021
28 °C
‘ಸಾವಿರ ಪ್ರಯೋಗ’ದ ಸರದಾರರಾದ ನಿಂಗಪ್ಪ–ಸಂಗಪ್ಪ ಸ್ಮರಣೆ

ರಾಯಣ್ಣನ ಹೆಸರು ‘ಅಮರ’ವಾಗಿಸಿದ್ದ ಜೋಡಿ ನಿಂಗಪ್ಪ–ಸಂಗಪ್ಪ

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಉತ್ತರ ಭಾರತದ ಝಾನ್ಸಿ ರಾಣಿ ಲಕ್ಷ್ಮಿಬಾಯಿಗಿಂತ 33 ವರ್ಷಗಳ ಮೊದಲೇ ದೈತ್ಯ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದು ಕಿತ್ತೂರು ರಾಣಿ ಚನ್ನಮ್ಮ. ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯೊದಗಿ ಬಂದಾಗ ಪುಟ್ಟ ಸಂಸ್ಥಾನವಾಗಿದ್ದರೂ ಅವರ ವಿರುದ್ಧದ ಕಾದಾಟದಲ್ಲಿ ಗೆದ್ದು, ಅನಂತರ ಸೋತವರು ಕಿತ್ತೂರಿನ ವೀರ ಸೈನಿಕರು.

ರಾಣಿ ಚನ್ನಮ್ಮನ ಜೊತೆ ಬಲಿಷ್ಠ ವೀರರ ಪಡೆಯೇ ಅಂದಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ರಾಣಿ ಚನ್ನಮ್ಮನ ಬಲಗೈ ಬಂಟನೆಂದು ಖ್ಯಾತಿ ಪಡೆದು ಸ್ವಾತಂತ್ರ್ಯದ ಕನಸು ನನಸು ಮಾಡಲು ಪಣತೊಟ್ಟು ಹೋರಾಟ ಮಾಡಿದ ವೀರರಲ್ಲಿ ಸಂಗೊಳ್ಳಿ ರಾಯಣ್ಣನದು ಮುಂಚೂಣಿ ಸೇನಾನಿಗಳ ಹೆಸರುಗಳಲ್ಲಿ ಒಂದಾಗಿದೆ.

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ರಾಯಣ್ಣನನ್ನು 1831ರಲ್ಲಿ ಸೆರೆಹಿಡಿದು ಬ್ರಿಟಿಷರು ಗಲ್ಲಿಗೆ ಹಾಕಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಈ ರೋಚಕ ಇತಿಹಾಸವನ್ನು ಜನಮಾನಸದ ಹೆಚ್ಚು ಆಳಕ್ಕೆ ಇಳಿಸಿದವರು ರಾಯಣ್ಣನ ತವರೂರು ಸಂಗೊಳ್ಳಿಯವರಾಗಿದ್ದ ನಿಂಗಪ್ಪ ಹಕ್ಕಿ ಮತ್ತು ಸಂಗಪ್ಪ ಕೊಡ್ಲಿ ಎಂಬ ಜೋಡಿ ಕಲಾವಿದರು ಎಂದು ನೆನಪಿಸುತ್ತಾರೆ ಗ್ರಾಮದ ಪ್ರಮುಖರು.

ಸಾವಿರ ಪ್ರಯೋಗ: ‘ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೇಲೆ ಗೌರವಾಭಿಮಾನ ಹಾಗೂ ಪ್ರೀತಿ ಇಟ್ಟುಕೊಂಡಿದ್ದ ಈ ಜೋಡಿ ಕಲಾವಿದರು ಸೇರಿಕೊಂಡು 60ರ ದಶಕದಲ್ಲಿ ಹವ್ಯಾಸಿ ಕಲಾವಿದರ ತಂಡ ಕಟ್ಟಿಕೊಂಡು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನಾಟಕವನ್ನು ನಾಡಿನಾದ್ಯಂತ ಪ್ರದರ್ಶಿಸಿದರು’ ಎಂದು ಗ್ರಾಮದ ವಿಜಯಕುಮಾರ ಶಿಂಧೆ ಸ್ಮರಿಸುತ್ತಾರೆ.

‘ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಅನೇಕ ಊರುಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಯೋಗಗಳನ್ನು ಪ್ರದರ್ಶಿಸಿದರು. ಆ ಮೂಲಕ ಕಿತ್ತೂರು ಕ್ರಾಂತಿವೀರರ ಶೌರ್ಯತ್ವದ ಪರಿಚಯವನ್ನು ಪ್ರೇಕ್ಷಕರ ಮನದಾಳಕ್ಕೆ ಹೆಚ್ಚು ಇಳಿಸಿದರು. ಅವರು ನಾಟಕ ಪ್ರದರ್ಶಿಸುತ್ತಿದ್ದರೆ ಪ್ರೇಕ್ಷಕರು ರೋಮಾಂಚನಗೊಳ್ಳುತ್ತಿದ್ದರು. ಊರಿಂದೂರಿಗೆ ನಾಟಕ ಪ್ರದರ್ಶನಕ್ಕೆ ಆಮಂತ್ರಣ ನೀಡುತ್ತಿದ್ದರು’ ಎಂದು ಅವರು ತಿಳಿಸಿದರು.

ಉತ್ತಮ ಕಲಾವಿದರು: ‘ಹವ್ಯಾಸಿ ಈ ನಾಟಕ ತಂಡಕ್ಕೆ ‘ಸಂಗಮೇಶ್ವರ ನಾಟ್ಯ ಸಂಘ’ ಎಂದು ನಾಮಕರಣ ಮಾಡಲಾಗಿತ್ತು. ಸಂಗೊಳ್ಳಿ ರಾಯಣ್ಣ ನಾಟಕಕ್ಕೆ ಮಾತ್ರ ಈ ತಂಡ ಸೀಮಿತವಾಗಿತ್ತು. ರಾಯಣ್ಣನ ಪಾತ್ರಧಾರಿಯಾಗಿ ನಿಂಗಪ್ಪ ಹಕ್ಕಿ, ರಾಯಣ್ಣನ ಪರಮ ಸ್ನೇಹಿತನಾಗಿದ್ದ ಭರಮನಾಯ್ಕ ಪಾತ್ರದಲ್ಲಿ ವಾಸ್ತವದಲ್ಲೂ ಹಕ್ಕಿ ಅವರ ಪರಮಾಪ್ತರಾಗಿದ್ದ ಸಂಗಪ್ಪ ಕೊಡ್ಲಿ ಜೀವ ತುಂಬುತ್ತಿದ್ದರು.

ಶಿವಯ್ಯ ಪೂಜಾರ, ಸಿದ್ದಯ್ಯ ಹೂಗಾರ, ಬಾಳಪ್ಪ ಕುಲಕರ್ಣಿ, ಕರವೀರ ಅಯ್ಯನವರು, ಬಾಲಚಂದ್ರ ಪೂಜಾರ ಸೇರಿದಂತೆ ಅನೇಕ ಹವ್ಯಾಸಿ ಕಲಾವಿದರು ಆ  ಕಾಲಕ್ಕೆ ತುಂಬಾ ಹೆಸರು ಮಾಡಿದ್ದರು. ಅದ್ಭುತವಾಗಿ ಅಭಿನಯಿಸುತ್ತಿದ್ದರು. ಕಿರುತೆರೆ ಇಲ್ಲದ ದಿನಗಳಲ್ಲಿ ಇವರ ನಾಟಕವೇ ಈ ಭಾಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು’ ಎಂದು ಮಾಹಿತಿ ನೀಡಿದರು.

‘ನಾಟ್ಯ ಸಂಘದ ಪ್ರಮುಖ ಆಧಾರ ಸ್ತಂಭವಾಗಿದ್ದ ನಿಂಗಪ್ಪ ಹಕ್ಕಿ ಆಕಸ್ಮಿಕ ನಿಧನದಿಂದಾಗಿ ತಂಡ ಚದುರಿತು. ಅನಂತರ ಸಂಗಪ್ಪ ಕೊಡ್ಲಿ ನಿಧನರಾದರು. ಅವರ ಪುತ್ರ ಪರಪ್ಪ ಕೊಡ್ಲಿ ಇದನ್ನು ಕೆಲ ದಿನಗಳವರೆಗೆ ಮುಂದುವರಿಸಿದರು. ಇವರೂ ರಾಯಣ್ಣನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಿದ್ದರು. ಈ ಮನೆತನದ ಬಸವರಾಜ ಕೊಡ್ಲಿ ಅವರು ಈ ಪರಂಪರೆಯ ವಾರಸುದಾರರಾಗಿ ಮುಂದುವರಿದಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಈ ನಾಟಕ ಪ್ರದರ್ಶನ ಮಾಡುತ್ತಾರೆ’ ಎನ್ನುತ್ತಾರೆ ವಿಜಯಕುಮಾರ ಶಿಂಧೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು