ನಿಪ್ಪಾಣಿ: ಸ್ಥಳೀಯ ನಗರಸಭೆಯ ಎರಡನೇಯ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದು ಈ ಅವಧಿಯಲ್ಲೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಬಿಜೆಪಿ ಪಕ್ಷದ ಸೋನಲ್ ಕೋಠಡಿಯಾ ಅಧ್ಯಕ್ಷರಾಗಿ ಹಾಗೂ ಸಂತೋಷ ಸಾಂಗಾವಕರ ಉಪಾಧ್ಯಕ್ಷರಾಗಿ ಬಹುಮತಗಳಿಂದ ಆಯ್ಕೆಯಾದರು.
ಇಬ್ಬರೂ ತಲಾ 17 ಮತಗಳನ್ನು ಪಡೆದು ವಿರೋಧಿ ಬಣದ ಶರದ ಪವಾರ ಗುಂಪು ಎನ್‍ಸಿಪಿ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸದಸ್ಯೆ ಅನೀತಾ ಪಠಾಡೆ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸದಸ್ಯಸರ್ಫರಾಜ್ ಬಡೇಘರ್ ಅವರಿಗೆ ಸೋಲಿಸಿದರು.
ನಗರದಲ್ಲಿ ಒಟ್ಟು 31 ವಾರ್ಡ್‍ಗಳಿದ್ದು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷ ಎನ್‍ಸಿಪಿ ಬೆಂಬಲಿತ ಸದಸ್ಯರಲ್ಲಿ ನಗಿನಾ ಹೈದರ ಮುಲ್ಲಾ ಈಚೆಗೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಒಟ್ಟಾರೆ ನಗರಸಭೆಯಲ್ಲಿ ಸಧ್ಯದಲ್ಲಿ ಪಕ್ಷದ ಹಾಗೂ ಪಕ್ಷೇತರರು ಸೇರಿ ಬಿಜೆಪಿಯ 13, ಎನ್‍ಸಿಪಿ ಬೆಂಬಲಿತ 13 ಮತ್ತು ಕಾಂಗ್ರೆಸ್ ಬೆಂಬಲಿತ 4 ಸದಸ್ಯರ ಬಲಾಬಲವಿತ್ತು. ಆದರೆ ಕೆಲವು ರಾಜಕೀಯ ಬೆಳವಣಿಗೆ ನಂತರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ವಿಲಾಸ ಗಾಡಿವಡ್ಡರ್, ಸುರೇಖ ದೇಸಾಯಿ, ಡಾ. ಜಸರಾಜ ಗಿರೆ ಬಿಜೆಪಿಯ ಬೆಂಬಲಕ್ಕೆ ನಿಂತ ಪರಿಣಾಮ ಬಿಜೆಪಿ ಎರಡನೇಯ ಅವಧಿಯಲ್ಲೂ ಆಡಳಿತದ ಚುಕ್ಕಾಣಿ ಹಿಡಿಯಿತು. ಮತ್ತೋರ್ವ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಗೈರಾಗಿದ್ದರು.
ಸ್ಥಳೀಯ ನಗರಸಭೆ ಬಿಜೆಪಿ ತೆಕ್ಕೆಗೆ ಸೇರುತ್ತಿದ್ದಂತೆ ಬಿಜೆಪಿಯ ಕಾರ್ಯಕರ್ತರು ಪಟಾಕಿ ಹಾರಿಸಿ, ಗುಲಾಲ್ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ, ಎಲ್ಲ ಸಂಚಾಲಕರು, ನಗರಸಭೆಯ ಎಲ್ಲ ಸದಸ್ಯರು, ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.