‘ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ’

7
ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಸಮರ್ಥನೆ

‘ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ’

Published:
Updated:

ಬೆಳಗಾವಿ: ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ’ ಎಂದು ಪೌರಾಡಳಿತ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ರಮೇಶ ಜಾರಕಿಹೊಳಿ ಸಮರ್ಥಿಸಿಕೊಂಡರು.

ಭಾನುವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕ, ಕರಾವಳಿ ಪ್ರದೇಶಕ್ಕೆ ಅನ್ಯಾಯವಾಗಿದೆ ಎನ್ನುವ ವಿರೋಧ ಪಕ್ಷದವರು ಬಜೆಟ್ ಪ್ರತಿಯನ್ನು ಮೊದಲು ಚೆನ್ನಾಗಿ ಓದಬೇಕು. ಸಿದ್ದರಾಮಯ್ಯ ನೀಡಿದ್ದ ಎಲ್ಲ ಕಾರ್ಯಕ್ರಮಗಳನ್ನೂ ಮುಂದುವರಿಸಲಾಗಿದೆ. ಹೀಗಿರುವಾಗ, ಯಾರಿಗೂ ಅನ್ಯಾಯದ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಎಲ್ಲ ವಿಭಾಗಕ್ಕೆ ಬಜೆಟ್‌ನಲ್ಲಿ ನ್ಯಾಯ ಕೊಡಲಾಗಿದೆ.  ಬಿಜೆಪಿಯವರು ಜನರನ್ನು ತಪ್ಪು ದಾರಿಗೆ ಎಳೆಯಬಾರದು’ ಎಂದು ಕೋರಿದರು. ‘ಅಖಂಡ ಕರ್ನಾಟಕಕ್ಕೆ ನನ್ನ ಬೆಂಬಲವಿದೆ. ಕರ್ನಾಟಕದ ಏಕೀಕರಣಕ್ಕಾಗಿ ಬಹಳಷ್ಟು ಮಂದಿ ತ್ಯಾಗ, ಬಲಿದಾನ ಮಾಡಿದ್ದಾರೆ. ಅದನ್ನು ಸ್ಮರಿಸುತ್ತಾ ಸಾಗಬೇಕು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎನ್ನುವ ಬೇಡಿಕೆ ಸರಿಯಲ್ಲ’ ಎಂದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಶಾಸಕ ಎಚ್‌.ಕೆ. ಪಾಟೀಲ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ವೈಯಕ್ತಿಕ ಅಭಿಪ್ರಾಯ ಹೇಳಿರಬಹುದು. ಅವರೊಂದಿಗೆ ಚರ್ಚಿಸುತ್ತೇವೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿನಿಧಿಸುವ ಬದಾಮಿ ಕ್ಷೇತ್ರದ ಜನರ ಬೇಡಿಕೆಗಳನ್ನು ಕಡೆಗಣಿಸಿಲ್ಲ. ಬಜೆಟ್ ಪುಸ್ತಕ ಅಚ್ಚಾದ ನಂತರ ಕೇಳಿದ್ದವು, ನಮೂದಾಗಿಲ್ಲ. ಪೂರಕ ಬಜೆಟ್‌ನಲ್ಲಿ ಎಲ್ಲವನ್ನೂ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ತಿಳಿಸಿದರು.

‘ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲವಿಲ್ಲ. ಮುಂದೇನಾದರೂ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕಾದಿರುವ ಬಿಜೆಪಿಯವರು, ಹತಾಶರಾಗುವುದು ಖಚಿತ’ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !