ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖರೀದಿ ಕೇಂದ್ರ’ಗಳಿಂದ ದೊರೆಯದ ‘ಬೆಂಬಲ’!

ನೆಪ ಮಾತ್ರಕ್ಕೆ ಎನ್ನುವಂತಾಗಿವೆ: ರೈತರ ಅಸಮಾಧಾನ
Last Updated 10 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ತೆರೆಯುವ ಖರೀದಿ ಕೇಂದ್ರಗಳು ಹೆಸರಿಗಷ್ಟೇ ಎನ್ನುವಂತಾಗಿವೆ. ಫಸಲು ಕೈಗೆ ಬಂದಾಗ ಕೇಂದ್ರ ಆರಂಭಿಸುವುದಿಲ್ಲ. ಅವು ತೆರೆದಾಗ ರೈತರ ಬಳಿ ಉತ್ಪನ್ನಗಳು ಇರುವುದೇ ಇಲ್ಲ! ನಮಗೆ ಮತ್ತೆ ದಲ್ಲಾಳಿಗಳ ಮೊರೆ ಹೋಗುವುದು ತಪ್ಪುವುದಿಲ್ಲ. ಅವುಗಳಿಂದ ‘ಬೆಂಬಲ’ ಸಿಗುವುದೇ ಇಲ್ಲ.

– ಇದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನವರ ಅಭಿಪ್ರಾಯ. ಜಿಲ್ಲೆಯ ಬಹುತೇಕ ರೈತರದ್ದು ಇದೇ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿ ಕಟಾವು ಅಥವಾ ಕೊಯ್ಲು ಮುಗಿದರೂ ಖರೀದಿ ಕೇಂದ್ರಗಳು ಆರಂಭವಾಗದ್ದರಿಂದ ರೈತರು ಭತ್ತ, ಜೋಳ, ತೊಗರಿ ಮತ್ತಿತರ ಬೆಳೆಗಳನ್ನು ಸಿಕ್ಕಷ್ಟು ದರಕ್ಕೆ ಮುಕ್ತ ಮಾರುಕಟ್ಟೆಯಲ್ಲೇ ಮಾರಾಟ ಮಾಡುತ್ತಿದ್ದಾರೆ ಅಥವಾ ದಲ್ಲಾಳಿಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ.

‘ಸರ್ಕಾರವು ನೆಪ ಮಾತ್ರಕ್ಕೆ ಖರೀದಿ ಕೇಂದ್ರ ತೆರೆದರೆ ಸಾಲದು. ವಾಸ್ತವಾಗಿ ರೈತರ ನೆರವಿಗೆ ಬರಬೇಕು’ ಎನ್ನುವುದು ಕೃಷಿಕರ ಆಗ್ರಹವಾಗಿದೆ.

ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿವೆ. ಒಂದೋ ಹಂಗಾಮು ಮುಗಿದ ಮೇಲೆ ಖರೀದಿ ಕೇಂದ್ರಗಳ ಆರಂಭಿಸಲಾಗುತ್ತಿದೆ. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇದ್ದಾಗ ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸಲಾಗುತ್ತಿದೆ. ಖರೀದಿಗೆ ಇಂತಿಷ್ಟು ಎಂದು ಮಿತಿ ವಿಧಿಸಿರುವುದು, ಹಣ ತಡವಾಗಿ ಪಾವತಿಸುವುದು, ಗುಣಮಟ್ಟದ ನೆಪ ಹೇಳಿ ತಿರಸ್ಕರಿಸುವುದು, ಅಲೆಸುವುದು ಮೊದಲಾದ ಕಾರಣಗಳಿಂದಾಗಿ ರೈತರನ್ನು ಬೆಂಬಲ ಬೆಲೆ ಖರೀದಿ ಕೇಂದ್ರಗಳಿಂದ ದೂರವಾಗಿಸಲಾಗುತ್ತಿದೆ. ಜತೆಗೆ ರೈತರ ಸೋಗಿನ ದಲ್ಲಾಳಿಗಳಿಗೆ ನೆರವಾಗಿದೆ.

ಭತ್ತಕ್ಕೆ ಹಾನಿ:

ಈಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ 5,367 ಹೆಕ್ಟೇರ್‌ ಭತ್ತದ ಭತ್ತಕ್ಕೆ ಹಾನಿಯಾಗಿದೆ. ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕುಗಳಲ್ಲೇ ಹೆಚ್ಚಿನ ಹಾನಿ ಸಂಭವಿಸಿತ್ತು. ಆದರೂ, ರೈತರು ಒಂದಿಷ್ಟು ಭತ್ತ ಕೊಯ್ಲು ಮಾಡಿ ಒಕ್ಕಣೆ ಮಾಡಿ, ಮಾರಾಟಕ್ಕೆ ಮುಂದಾಗಿದ್ದರು. ‘ಬೆಳಗಾವಿ ಹಾಗೂ ನಂದಗಡದಲ್ಲಿ ಭತ್ತ ಖರೀದಿಗಾಗಿ ನಾವೂ ನೋಂದಣಿಯನ್ನೂ ಮಾಡಿಕೊಂಡಿದ್ದೇವೆ’ ಎಂದು ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕಟಾವು ಮುಗಿದರೂ ಕೇಂದ್ರ ಆರಂಭವಾಗದ್ದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ.

ತೊಗರಿ ಖರೀದಿಗೆ ಒತ್ತಡ:

ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೆಳೆದಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗಾಗಿ ಕೇಂದ್ರ ಆರಂಭಿಸುವಂತೆ ಮೇಲೆ ಒತ್ತಡ ತರುತ್ತಿದ್ದಾರೆ. ರೈತರ ಬೇಡಿಕೆ ಕುರಿತು ಸರ್ಕಾರದ ಗಮನಕ್ಕೆ ತಂದಿರುವುದಾಗಿ ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಾರದಲ್ಲಿ ಆರಂಭ:

‘ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಗಾಗಿ ಗೋಕಾಕ, ಸವದತ್ತಿ, ರಾಮದುರ್ಗ ಹಾಗೂ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಕೇಂದ್ರ ತೆರೆಯಲಿದ್ದೇವೆ. ಇದೇ ವಾರದಲ್ಲಿ ಅವು ಕಾರ್ಯಾರಂಭ ಮಾಡಲಿವೆ. ಪ್ರತಿ ಕ್ವಿಂಟಲ್‌ ಬಿಳಿ ಜೋಳಕ್ಕೆ₹ 2,738 ಹಾಗೂ ಮಾಲದಂಡಿ ಜೋಳಕ್ಕೆ ₹ 2,758 ನೀಡಿ ಖರೀದಿಸಲಾಗುವುದು’ ಎಂದು ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

5,460 ಕ್ವಿಂಟಾಲ್‌ ಖರೀದಿ: ‘2021ರ ಅಕ್ಟೋಬರ್‌ನಲ್ಲಿ ಹೆಸರು ಖರೀದಿಗಾಗಿ ಬೈಲಹೊಂಗಲ, ದೊಡವಾಡ, ಸವದತ್ತಿ, ರಾಮದುರ್ಗ, ಮುರಗೋಡದಲ್ಲಿ ಖರೀದಿ ಕೇಂದ್ರ ತೆರೆದಿದ್ದೆವು. ರೈತರಿಂದ ಒಟ್ಟು 5,460 ಕ್ವಿಂಟಲ್‌ ಹೆಸರು ಖರೀದಿಸಲಾಗಿದೆ’ ಎಂದು ತಿಳಿಸಿದರು.

ಕಟಾವು ಮಗಿದರೂ ಆರಂಭವಾಗದ ಕೇಂದ್ರ

ಖಾನಾಪುರ: ಈಚೆಗೆ ಮುಗಿದ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆದಿದ್ದ ರೈತರು ಕಟಾವಿನ ಹಂತದಲ್ಲೇ ಅಕಾಲಿಕ ಮಳೆ ಸುರಿದಿದ್ದರಿಂದ ತೊಂದರೆ ಅನುಭವಿಸಿದ್ದರು. ಆದರೂ, ಕೈಗೆ ಸಿಕ್ಕ ಅಷ್ಟಿಷ್ಟು ಭತ್ತವನ್ನು ರಾಶಿ ಮಾಡಿ ಮಾರಾಟ ಮಾಡಲು ಯೋಚಿಸಿದ್ದರು. ಆದರೆ, ಕೃಷಿ ಇಲಾಖೆ ಮತ್ತು ಎಪಿಎಂಸಿಯವರು ಖರೀದಿ ಕೇಂದ್ರ ತೆರೆಯದ ಕಾರಣ ಅವರು ಸಮಸ್ಯೆ ಎದುರಿಸುವಂತಾಗಿದೆ.

ತಾಲ್ಲೂಕಿನ ನಂದಗಡ ಗ್ರಾಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಸುಸಜ್ಜಿತ ಕಟ್ಟಡ, ಮಾರುಕಟ್ಟೆ ಪ್ರಾಂಗಣ, ಗೋದಾಮು, ಸಿಬ್ಬಂದಿ ಸೇರಿದಂತೆ ಅಗತ್ಯ ವ್ಯವಸ್ಥೆ ಇಲ್ಲಿದೆ. ಹಲವು ವರ್ಷಗಳಿಂದ ಮಾರುಕಟ್ಟೆ ಪ್ರಾಂಗಣದಲ್ಲೇ ಭತ್ತ ಖರೀದಿ ಕೇಂದ್ರ ತೆರೆದು ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆದರೆ, 2020ರಿಂದ ಖರೀದಿ ಕೇಂದ್ರ ತೆರೆಯುವತ್ತ ಅಧಿಕಾರಿಗಳು ಗಮನಹರಿಸಲೇ ಇಲ್ಲ. ಪರಿಣಾಮ ರೈತರು ಭತ್ತ ಮಾರಾಟಕ್ಕಾಗಿ ದಲ್ಲಾಳಿಗಳ ಮೊರೆ ಹೋಗುವಂತಾಗಿದೆ. ಇದರಿಂದ ನಿರೀಕ್ಷಿತ ಬೆಲೆಯೂ ಸಿಗುತ್ತಿಲ್ಲ ಎಂದು ರೈತ ಮುಖಂಡ ಪುಂಡಲೀಕ ಉಳ್ಳಾಗಡ್ಡಿ ಅಳಲು ತೋಡಿಕೊಂಡರು.

ದಲ್ಲಾಳಿಗಳಿಗೆ ಮಾರಾಟ

ತೆಲಸಂಗ: ಸತತ ಬರದ ಬವಣೆಗೆ ತುತ್ತಾಗುವ ಅಥಣಿ ತಾಲ್ಲೂಕಿನ ರೈತರು ಈ ಬಾರಿಯೂ ತೊಗರಿ ಬೆಳೆಯನ್ನೇ ಜೀವನಕ್ಕೆ ಆಸರೆ ಆಗಿಸಿಕೊಂಡಿದ್ದಾರೆ. ಮಡ್ಡಿಭೂಮಿ ಹೊಂದಿದ ಈ ಭಾಗದ ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ ಬೆಳೆಯುವುದು ಅನಿವಾರ್ಯ. ಆದರೆ, ಪ್ರಸಕ್ತ ವರ್ಷ ಪ್ರಾಕೃತಿಕ ವಿಕೋಪದಿಂದ ಶೇ.90ರಷ್ಟು ತೊಗರಿಗೆ ಹಾನಿಯಾಯಿತು. ಉಳಿದ ತೊಗರಿಯನ್ನಾದರೂ ಉತ್ತಮ ಬೆಲೆಗೆ ಮಾರಾಟ ಮಾಡಲು ರೈತರು ಯೋಜಿಸಿದ್ದರು. ಆದರೆ, ತೊಗರಿ ರಾಶಿ ಪ್ರಾರಂಭವಾಗಿ ತಿಂಗಳುಗಳೇ ಕಳೆದರೂ ಖರೀದಿ ಕೇಂದ್ರ ಆರಂಭವಾಗಿಲ್ಲ. ಹಾಗಾಗಿ ರೈತರು ದಲ್ಲಾಳಿಗಳಿಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ತೆಲಸಂಗ ಹೋಬಳಿಯೊಂದರಲ್ಲೇ 12,322 ಎಕರೆ ಒಣ ಬೇಸಾಯ ಜಮೀನಿನಲ್ಲಿ ತೊಗರಿ ಬಿತ್ತನೆಯಾಗಿದೆ. ಅನಂತಪುರ ಹೋಬಳಿಯಲ್ಲಿ 4,522 ಎಕರೆ, ಅಥಣಿಯಲ್ಲಿ ಸಾವಿರ ಎಕರೆ ಹಾಗೂ ಕಾಗವಾಡದಲ್ಲಿ 500 ಎಕರೆ ತೊಗರಿ ಬಿತ್ತನೆಯಾಗಿದೆ. ಇಷ್ಟಿದ್ದರೂ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಿಲ್ಲದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಲಾಭ ಕಾಣದೆ ಹತಾಶ

ಸವದತ್ತಿ: ರೈತ ಬೆಳೆದ ಬೆಳೆ ಮಾರುಕಟ್ಟೆಗೆ ಬರುವ ವೇಳೆ ಖರೀದಿ ಕೇಂದ್ರ ಆರಂಭಿಸಲಾಗಿಲ್ಲ. ಮಾಡಿದ ಸಾಲ ಮತ್ತು ಬಡ್ಡಿಯಿಂದ ಮುಕ್ತಿ ಹೊಂದಲು ಅವಶ್ಯಕತೆಗೆ ತಕ್ಕಂತೆ ದಲ್ಲಾಳಿಗೆ ಮಾರಾಟ ಮಾಡಿ ಲಾಭ ಕಾಣದೆ ಹತಾಶರಾಗುವುದು ತಪ್ಪಿಲ್ಲ. ರೈತರ ಬೆಳೆ ದಲ್ಲಾಳಿಗಳ ಪಾಲಾದ ನಂತರ ಸರ್ಕಾರ ಕೇಂದ್ರ ತೆರೆಯುತ್ತಿದೆ.

1980ರಿಂದ ಇಂದಿನವರೆಗೂ ಬೆಂಬಲ ಬೆಲೆ ಮತ್ತು ಮಹಾದಾಯಿ ಕುರಿತು ನಿರಂತರ ಹೋರಾಟ ನಡೆದಿದೆ. ಎಂ.ಎಸ್. ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ನಿಗದಿಪಡಿಸಲು ಬೇಡಿಕೆ ಇಟ್ಟು ಅಗ್ರಹಿಸಲಾಗಿದೆ. ಆದರೆ, ಸರ್ಕಾರ ಅವೈಜ್ಞಾನಿಕ ಬೆಲೆ ನಿಗದಿಪಡಿಸಿ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ರೈತ ಪ್ರಮುಖ ಶ್ರೀಕಾಂತ ಹಟ್ಟಿಹೊಳಿ ಅಗ್ರಹಿಸಿದ್ದಾರೆ.

ಈ ಭಾಗದಲ್ಲಿ ಹೆಸರು, ಕಡಲೆ, ಬಿಳಿಜೋಳ ಕೇಂದ್ರಗಳಿದ್ದು ಗೋವಿನಜೋಳ ಖರೀದಿ ಕೇಂದ್ರ 2 ವರ್ಷವಾದರೂ ಆರಂಭವಾಗಿಲ್ಲ. ಸರ್ಕಾರ ಸೂಚನೆ ಮೇರೆಗೆ ಆರಂಭಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಕೆ.ಎನ್. ಮಾರಾಡ್ಡಿ ತಿಳಿಸಿದ್ದಾರೆ.

ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವುದೇ ಇಲ್ಲ. ರೈತರು ಏನಾದರೂ ಮಾರುವುದಿದ್ದರೆ ಬೈಲಹೊಂಗಲ ತಾಲ್ಲೂಕಿಗೆ ಹೋಗುವುದು ತಪ್ಪಿಲ್ಲ. ಮುಕ್ತ ಮಾರುಕಟ್ಟೆಯಲ್ಲೇ ಮಾರುವವರೇ ಜಾಸ್ತಿ. ಖಾಸಗಿಯವರಿಗೆ ಕೊಡುವುದು ಕಂಡುಬರುತ್ತದೆ.

ಸೂಚನೆ ಬಂದ ಕೂಡಲೇ...

ಸರ್ಕಾರದಿಂದ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ನಂದಗಡ ಎಪಿಎಂಸಿ ಆವರಣದಲ್ಲಿ ಈ ವರ್ಷ ಭತ್ತ ಖರೀದಿ ಕೇಂದ್ರ ಆರಂಭಿಸಿಲ್ಲ. ರೈತರಿಂದ ಬೇಡಿಕೆ ಬಂದರೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಖರೀದಿ ಕೇಂದ್ರ ಆರಂಭಿಸಲು ಕ್ರಮ ವಹಿಸಲಾಗುವುದು.

ದಾಮೋದರ ಚವ್ಹಾಣ, ಸಹಾಯಕ ಕೃಷಿ ನಿರ್ದೇಶಕ, ಖಾನಾಪುರ

ಕಲಬುರ್ಗಿಗೆ ಹೋಗುವ ಸ್ಥಿತಿ

ನಮ್ಮಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ 200 ಕಿ.ಮೀ. ದೂರದ ಕಲಬುರ್ಗಿ ಜಿಲ್ಲೆಯ ಆಲಮೇಲ ಪಟ್ಟಣಕ್ಕೆ ತೆರಳಿ ತೊಗರಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಈ ಭಾಗದ ತೊಗರಿ ಬೆಳೆಗಾರರ ಸಮಸ್ಯೆ ಗೊತ್ತಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಅಲ್ಪಸ್ವಲ್ಪ ಬೆಳೆಯೂ ದಲ್ಲಾಳಿಗಳ ಪಾಲಾಗುತ್ತಿದೆ. ಹಾಗಾಗಿ ಈ ಭಾಗದಲ್ಲೇ ಬೆಂಬಲ ಬೆಲೆಯಡಿ ತೊಗರಿ ಖರೀದಿಗಾಗಿ ಕೇಂದ್ರ ಆರಂಭಿಸಬೇಕು.

ಆನಂದ ಕೊಟ್ಟಲಗಿ, ರೈತ, ತೆಲಸಂಗ, ಅಥಣಿ ತಾಲ್ಲೂಕು

(ಪ್ರಜಾವಾಣಿ ತಂಡ: ಎಂ.ಮಹೇಶ, ಇಮಾಮ್‌ಹುಸೇನ್ ಗೂಡುನವರ, ಪ್ರಸನ್ನ ಕುಲಕರ್ಣಿ, ಬಸವರಾಜ ಶಿರಸಂಗಿ, ಜಗದೀಶ ಖೋಬ್ರಿ, ಪ್ರದೀಪ ಮೇಲಿನಮನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT