ಗೋಕಾಕ: ಅಲೆಮಾರಿಗಳು ಶಿಕ್ಷಣದೊಂದಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.
ನಗರದ ಎ.ಪಿ.ಎಂ.ಸಿ. ಬಳಿ ಇರುವ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ ಗುರುವಾರ ಭೇಟಿ ನೀಡಿ ಅವರ ಸ್ಥಿತಿ-ಗತಿ ಅವಲೋಕಿಸಿ ಅಲೆಮಾರಿ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಣ ಇಲ್ಲದೆ, ಮೌಢ್ಯದಲ್ಲಿ ಬದುಕುತ್ತಿರುವ ಅಲೆಮಾರಿ ಸಮುದಾಯವನ್ನು ಮುಂದೆ ತರಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳು ಅದನ್ನು ಸಮುದಾಯದ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈಗಾಗಲೇ ಕಳೆದ ಎರೆಡು ವರ್ಷಗಳಲ್ಲಿ ಸರ್ಕಾರದಿಂದ ಬೆಳಗಾವಿ ಜಿಲ್ಲೆಯ ಅಲೆಮಾರಿ ಜನಾಂಗದ ಶೇಯೋಭಿವೃದ್ಧಿಗಾಗಿ ₹6.20 ಕೋಟಿ ಬಿಡುಗಡೆಯಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಬಳಕೆಯಾಗದೆ ಹಾಗೆ ಉಳಿದುಕೊಂಡಿದೆ ಎಂದರು.
ಶೀಘ್ರದಲ್ಲೇ ಅನುದಾನವನ್ನು ಜಿಲ್ಲೆಯ ಅಲೆಮಾರಿ ಜನಾಂಗದ ಫಲಾನುಭವಿಗಳಿಗೆ ತಲುಪಿಸುವ ಕಾರ್ಯಮಾಡಬೇಕು. ವಿಳಂಬವಾದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದಲ್ಲದೆ ಮುಖ್ಯಮಂತ್ರಿಗಳಿಗೂ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಅಲೆಮಾರಿ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳು ಮುತುವರ್ಜಿ ವಹಿಸಿಕೊಂಡು ಸರ್ಕಾರದ ಯೋಜನೆಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಶಿಕ್ಷಣದಿಂದ ದೂರವಿರುವ ಅಲೆಮಾರಿ ಮಕ್ಕಳನ್ನು ಸಮೀಪದ ಸರ್ಕಾರಿ ಟೆಂಟ್ ಶಾಲೆಗಳಲ್ಲಿ ದಾಖಲಿಸಿಕೊಂಡು, ಅವರಿಗೆ ಅಕ್ಷರ ಜ್ಞಾನವನ್ನು ನೀಡುವ ಕಾರ್ಯ ಶಿಕ್ಷಣ ಇಲಾಖೆ ಮಾಡಬೇಕು. ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಮತ್ತು ನಿಗಮ ಬದ್ದವಾಗಿದ್ದು, ಅಲೆಮಾರಿಗಳು ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಬದುಕಬೇಕು ಎಂದು ಹೇಳಿದರು.
ಆನಂದ ಕುಮಾರ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ಮಲ್ಲಬನ್ನವರ ಸೇರಿದಂತೆ ಇಲಾಖೆಯ ಇತರ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.