ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಯುಜಿಸಿಯೇತರ ಉಪನ್ಯಾಸಕರ ಭತ್ಯೆಗೆ ‘ಕತ್ತರಿ’

ಆರ್‌ಸಿಯುದಿಂದ ‘ಮಿತವ್ಯಯ’ದ ಕ್ರಮ; ಆಕ್ಷೇಪ
Last Updated 1 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು (ಆರ್‌ಸಿಯು) ಕೋವಿಡ್–19 ಕಾರಣದಿಂದ ಅನುಸರಿಸುತ್ತಿರುವ ‘ಮಿತವ್ಯಯ ಉದ್ದೇಶ’ದ ಕ್ರಮವು ‘ಯುಜಿಸಿಯೇತರ ಉಪನ್ಯಾಸಕ’ರಿಗೆ ಸಿಗುತ್ತಿದ್ದ ಭತ್ಯೆಗೆ ಕತ್ತರಿ ಹಾಕಿದೆ.

ಈಚೆಗೆ ನಡೆದ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ವಿವಿಧ ವಿಷಯಗಳ ಅಂತಿಮ ವರ್ಷದ ಪದವಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಅರಂಭವಾಗಿದೆ. ಈ ಕರ್ತವ್ಯಕ್ಕೆ ಯುಜಿಸಿ ಉಪನ್ಯಾಸಕರಿಗೆ ಮಾತ್ರವೇ ಅನುಮತಿಸಿರುವುದು ಯುಜಿಸಿಯೇತರ ಉಪನ್ಯಾಸಕರ ಆಕ್ಷೇಪಕ್ಕೆ ಕಾರಣವಾಗಿದೆ.

ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಇಂಗ್ಲಿಷ್, ಜಿ.ಎಸ್.ಎಸ್. ಕಾಲೇಜಿನಲ್ಲಿ ಇಂಗ್ಲಿಷ್ ಹೊರತುಪಡಿಸಿ ಕಲಾ ವಿಭಾಗದ ಇತರ ಎಲ್ಲ ವಿಷಯಗಳು ಮತ್ತು ವಿಜ್ಞಾನ ವಿಭಾಗದ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ನಡೆದಿದೆ. ಹಿಂದಿನ ವರ್ಷಗಳಲ್ಲಿ ಈ ಕೆಲಸದಲ್ಲಿ ಯುಜಿಸಿಯೇತರ ಉಪನ್ಯಾಸಕರಿಗೆ ಅವಕಾಶ ಕೊಡಲಾಗುತ್ತಿತ್ತು. ಇವರಿಂದ ಅವರಿಗೆ ಭತ್ಯೆ ಸಿಗುತ್ತಿತ್ತು. ಆದರೆ, ಈ ಬಾರಿ ಇದಕ್ಕೆ ‘ತಡೆ’ ಹಾಕಿರುವುದು ಅವರಲ್ಲಿ ಅಸಮಾಧಾನ ಮೂಡಿಸಿದೆ.

ತೊಂದರೆಯಾಗಿದೆ:

‘ಪ್ರಜಾವಾಣಿ’ಗೆ ಕರೆ ಮಾಡಿದ ಅವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

‘ನಮಗೆ ಮೌಲ್ಯಮಾಪನ ಮಾಡಲು ಕೇಂದ್ರದ ಮುಖ್ಯಸ್ಥರು ಅನುಮತಿ ನೀಡುತ್ತಿಲ್ಲ. ಪ್ರತಿ ವರ್ಷ ಯುಜಿಸಿ ಹಾಗೂ ನಾನ್ ಯುಜಿಸಿ ಉಪನ್ಯಾಸಕರಿಗೆ ಮೌಲ್ಯಮಾಪನದ ಕೆಲಸ ಹಂಚಿಕೆ ಮಾಡಿ ವಿಶ್ವವಿದ್ಯಾಲಯದಿಂದ ಆದೇಶ ಹೊರಡಿಸಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಿದ್ದರಿಂದ ನಾನ್ ಯುಜಿಸಿ ಉಪನ್ಯಾಸಕರನ್ನು ಬಿಟ್ಟು ಕೇವಲ ಯುಜಿಸಿ ಉಪನ್ಯಾಸಕರಿಗೆ ಮಾತ್ರ ಬಳಸಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗಿದೆ’ ಎಂದು ಅಳಲು ತೋಡಿಕೊಂಡರು.

‘ಅತಿಥಿ ಉಪನ್ಯಾಸಕರು ಹಾಗೂ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರಾದ ನಾವು 5-6 ತಿಂಗಳುಗಳಿಂದ ವೇತನವಿಲ್ಲದೆ ತೀರಾ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ಮೌಲ್ಯಮಾಪನ ಕರ್ತವ್ಯ ನಿರ್ವಹಣೆಯಿಂದ ಒಂದಿಷ್ಟು ಭತ್ಯೆ ದೊರೆಯಬಹುದು ಎಂಬ ಭರವಸೆಯಲ್ಲಿದ್ದೆವು. ಆದರೆ ಆರ್‌ಸಿಯು ಕ್ರಮದಿಂದ ನಿರಾಸೆ ಉಂಟಾಗಿದೆ’ ಎಂದು ಅವರು ತಿಳಿಸಿದರು.

ಸಂಕಷ್ಟದಲ್ಲಿದ್ದೆವು:

‘ನಾನ್ ಯುಜಿಸಿ ಉಪನ್ಯಾಸಕರಿಗೆ ಪ್ರತಿ ದಿನ 40 ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶವಿದೆ. ಪ್ರತಿ ಪತ್ರಿಕೆಗೆ ₹ 15ರಂತೆ ದಿನ ಭತ್ಯೆ ₹ 1,100 ಸೇರಿ ಒಟ್ಟು ₹ 1,700 ಭತ್ಯೆ ದೊರೆಯುತ್ತಿತ್ತು. ಈಗ ಈ ಅವಕಾಶ ತಪ್ಪಿಸಲಾಗಿದೆ. ಹೊಸ ಕ್ರಮವನ್ನು ಮುಂದಿನ ವರ್ಷದಿಂದ ಕೈಗೊಳ್ಳಬಹುದಿತ್ತು. ಈ ವರ್ಷ ಯಥಾಸ್ಥಿತಿ ಮುಂದುವರಿಸಿದ್ದರೆ ಸಂಕಷ್ಟದಲ್ಲಿದ್ದ ನಮಗೆ ನೆರವಾಗುತ್ತಿತ್ತು’ ಎಂದು ಅವರು ಮಾಹಿತಿ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ, ‘ಕುಲಪತಿ ಸೂಚನೆಯಂತೆ ಈ ನಿರ್ಧಾರ ಮಾಡಲಾಗಿದೆ. ಹಿಂದೆ ಮೌಲ್ಯಮಾಪನ ಪ್ರಕ್ರಿಯೆಗೆಂದೇ ₹ 6 ಲಕ್ಷ ವೆಚ್ಚವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಯುಜಿಸಿ ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಮಿತವ್ಯಯದ ಕ್ರಮ ಇದಾಗಿದೆ. ತೀರಾ ಅವಶ್ಯವಿದ್ದರಷ್ಟೆ ನಾನ್ ಯುಜಿಸಿ ಉಪನ್ಯಾಸಕರನ್ನು ನಿಯೋಜಿಸಲು ಸೂಚಿಸಲಾಗಿದೆ. ಪರೀಕ್ಷೆ ಪ್ರಕ್ರಿಯೆಯಲ್ಲೂ ಮಿತವ್ಯಯ ಸಾಧಿಸಲಾಗಿದೆ’ ಎಂದು ತಿಳಿಸಿದರು.

ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರು ನಾನ್ ಯುಜಿಸಿ ಉಪನ್ಯಾಸಕರನ್ನು ಮೌಲ್ಯಮಾಪನ ಕರ್ತವ್ಯಕ್ಕೆ ನಿಯೋಜಿಸುತ್ತಿಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ. ತಾರತಮ್ಯ ಮಾಡದೆ ಎಲ್ಲರಿಗೂ ಅವಕಾಶ ಕೊಡಬೇಕು
ಎ.ವೈ. ಸೋನ್ಯಾಗೋಳ
ಅತಿಥಿ ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT