ಬೀದಿಗಳಷ್ಟೇ ಅಲ್ಲ, ಭಾವ ಭಾರತ ಸ್ವಚ್ಛವಾಗಬೇಕು: ಬರಗೂರ ರಾಮಚಂದ್ರಪ್ಪ

7

ಬೀದಿಗಳಷ್ಟೇ ಅಲ್ಲ, ಭಾವ ಭಾರತ ಸ್ವಚ್ಛವಾಗಬೇಕು: ಬರಗೂರ ರಾಮಚಂದ್ರಪ್ಪ

Published:
Updated:
Deccan Herald

ಬೆಳಗಾವಿ: ‘ಬೀದಿಗಳಷ್ಟೇ ಅಲ್ಲ, ಬಾಯಿ ಹಾಗೂ ಭಾವ ಭಾರತವೂ ಸ್ವಚ್ಛವಾಗಬೇಕು’ ಎಂದು ಸಾಹಿತಿ ಪ್ರೊ.ಬರಗೂರ ರಾಮಚಂದ್ರಪ್ಪ ಇಲ್ಲಿ ಹೇಳಿದರು.

ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ನಿಂದ ನೀಡುವ ‘ಬೆಟಗೇರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ’ಯನ್ನು ಭಾನುವಾರ ಸ್ವೀಕರಿಸಿ ಅವರು ಮಾತನಾಡಿದರು.

‘ನಾಗರ ನಾಲಿಗೆಗಳ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಪ್ರಸ್ತುತ ಬೀದಿಗಳು ಸ್ವಚ್ಛವಾಗುತ್ತಿವೆ; ಭಾವಗಳು ಸ್ವಚ್ಛವಾಗುತ್ತಿಲ್ಲ’ ಎಂದು ವಿಷಾದಿಸಿದರು.

‘ಸಾಹಿತ್ಯ ಕ್ಷೇತ್ರ ಕೂಡ ವಿಶ್ವಾಸಾರ್ಹತೆಯ ಬಿಕ್ಕಟ್ಟಿನಿಂದ ಪಾರಾಗಿಲ್ಲ. ಶಿಕ್ಷಣ, ಕಾರ್ಯಾಂಗ, ನ್ಯಾಯಾಂಗವೂ ಆ ಬಿಕ್ಕಟ್ಟು ಎದುರಿಸುತ್ತಿವೆ. ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶಿಕ್ಷಣ ಕ್ಷೇತ್ರ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು. ಇದಕ್ಕಾಗಿ ಸಾಹಿತಿಗಳು ಮತ್ತು ಮೇಷ್ಟ್ರುಗಳ ಪಾತ್ರ ಪ್ರಮುಖವಾಗಿದೆ’ ಎಂದರು.

‘ಪ್ರತಿಷ್ಠಾನಗಳು ನೀಡುವ ಪ್ರಶಸ್ತಿ ಮೊತ್ತವನ್ನು ₹ 10ಸಾವಿರಕ್ಕೆ ಮಿತಿಗೊಳಿಸಿರುವುದು ಸರಿಯಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ವಿವೇಕ ಇದ್ದಿದ್ದರೆ ಆ ಆದೇಶ ಹೊರಡಿಸುತ್ತಿರಲಿಲ್ಲ’  ಎಂದು ಕಿಡಿಕಾರಿದರು.

‘ವಿಶ್ವವಿದ್ಯಾಲಯಗಳ ಪೀಠಗಳು ಬಡ್ಡಿ ಪೀಠಗಳಾಗಿವೆ. ಬಡ್ಡಿ ಹಣದಲ್ಲಿ ಕಾರ್ಯಕ್ರಮ ನಡೆಸುವ ಸ್ಥಿತಿಗೆ ಅವುಗಳನ್ನು ತರಲಾಗಿದೆ. ರಾಜಕೀಯ ಕಾರಣಗಳಿಂದಾಗಿ, ಕೆಲವು ಪೀಠಗಳಿಗೆ ಹೆಚ್ಚಿನ ಅನುದಾನ ಕೊಡಲಾಗುತ್ತಿದೆ. ಈ ತಾರತಮ್ಯ ಸಲ್ಲದು’ ಎಂದು ಹೇಳಿದರು.

‘ಕುರ್ಚಿಗಳಷ್ಟು ಅಪಾಯಕಾರಿ ಮತ್ತೊಂದಿಲ್ಲ. ಕುರ್ಚಿಯು ವ್ಯಕ್ತಿಗಿಂತ ದೊಡ್ಡದಿರಬಾರದು. ಕುರ್ಚಿಯಲ್ಲಿ ಕುಳಿತವರು ಕುಬ್ಜರಾಗಬಾರದು’ ಎಂದು ಮಾರ್ಮಿಕವಾಗಿ ನುಡಿದರು.

‘ಏಕೀಕರಣದ ಪರಂಪರೆ ಗೊತ್ತಿಲ್ಲದವರು ರಾಜ್ಯ ಒಡೆಯುವ ಯತ್ನ ಮಾಡುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾತ್ರವಲ್ಲ, ಏಕೀಕರಣಕ್ಕಾಗಿ ಹೋರಾಡಿದವರೆಲ್ಲರಿಗೂ ಮಾಡುವ ಅವಮಾನವಾಗುತ್ತದೆ. ಅಭಿವೃದ್ಧಿಯಲ್ಲಿ ಅಸಮತೋಲನ ಇರುವುದು ನಿಜ. ಆದರೆ,‌ ರಾಜ್ಯ ಒಡೆಯುವುದು ಪರಿಹಾರವಲ್ಲ. ಒಂದಾಗಿರುವ ಭಾವ ಭೂಗೋಳವನ್ನು ಛಿದ್ರ ಮಾಡುವುದು ಸರಿಯಲ್ಲ. ನಿಜವಾಗಿಯೂ ಆಡಳಿತ ಜನರನ್ನು ತಲುಪಬೇಕಾದರೆ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಸಚಿವಾಲಯ ಸ್ಥಾಪಿಸಬೇಕು. ಅನುಷ್ಠಾನ, ಅನುದಾನದ ಅಧಿಕಾರವನ್ನು ಅವುಗಳಿಗೆ ಕೊಡಬೇಕು’ ಎಂದು ಒತ್ತಾಯಿಸಿದರು.

‘ಸುವರ್ಣ ವಿಧಾನಸೌಧಕ್ಕೆ ಕೆಲವು ಕಚೇರಿಗಳನ್ನು ಸ್ಥಳಾಂತರಿಸುವುದನ್ನು ಕೇವಲ ಸಾಂಕೇತಿಕವಾಗಿಯೇ ನೋಡಬೇಕಾಗುತ್ತದೆ. ಜನರಲ್ಲಿ ಪರಕೀಯ ಪ್ರಜ್ಞೆ ಬಾರದಂತೆ ನೋಡಿಕೊಳ್ಳಬೇಕು. ವಿಶ್ವಾಸ ಮೂಡಿಸಬೇಕು. ಭಾವವಲಯ ಸ್ಥಿರವಾಗಿರಬೇಕಾದರೆ ಕರ್ನಾಟಕ ಒಂದಾಗಿಯೇ ಇರಬೇಕು. ರಾಜಕಾರಣಿಗಳು ಅನಗತ್ಯವಾಗಿ ಸಂಕಟ ನಿರ್ಮಾಣ ಮಾಡಬಾರದು. ರಾಜ್ಯದ ಮೂಲೆ ಮೂಲೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಬೇಕು. ಇದನ್ನು ಸಾಹಿತ್ಯ ವಲಯವೂ ದೊಡ್ಡ ದನಿಯಲ್ಲಿ ಹೇಳಬೇಕು’ ಎಂದು ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !