ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸೂಚನೆ– ಅಶೋಕ

Last Updated 15 ಡಿಸೆಂಬರ್ 2021, 20:40 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಬೆಂಗಳೂರಿನ ಜಿಲ್ಲಾಧಿಕಾರಿ ಸೇರಿ ಎಲ್ಲ ಅಧಿಕಾರಿಗಳು ಪ್ರತಿ ಶನಿವಾರ ಸರ್ಕಾರಿ ಭೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ವಿಧಾನ ಪರಿಷತ್‍ನಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಭೂ ಕಬಳಿಕೆ ವಿರುದ್ಧದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರನ್ನು ನೇಮಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ ಲಭ್ಯ ಇರುವ ಸರ್ಕಾರಿ ಜಾಗದಲ್ಲಿ ಮೊದಲು ಸರ್ಕಾರಿ ಶಾಲೆ, ಆಸ್ಪತ್ರೆಯಂಥ ಸಾರ್ವಜನಿಕ ಉದ್ದೇಶಗಳಿಗೆ ಮೊದಲು ಹಂಚಿಕೆ ಮಾಡುವಂತೆ ಎಲ್ಲ ಶಾಸಕರಿಗೆ ಪತ್ರ ಬರೆಯಲಾಗಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ 10 ವರ್ಷಗಳಲ್ಲಿ ಸ್ಮಶಾನಕ್ಕೂ ಒಂದಡಿ ಜಾಗ ಸಿಗುವುದಿಲ್ಲ’ ಎಂದರು.

ಆಗ, ಸದಸ್ಯರು, ‘ನಮಗೆ ಪತ್ರ ಬಂದಿಲ್ಲ’ ಎಂದರು. ‘ಶಾಸಕರು ಎಂದರೆ ಶಾಸಕರು ಮಾತ್ರವಲ್ಲ, ವಿಧಾನ ಪರಿಷತ್ ಸದಸ್ಯರನ್ನೂ ಪರಿಗಣಿಸಿ’ ಎಂದು ಸಭಾಪತಿ ಸೂಚಿಸಿದರು. ಇನ್ನು ಮುಂದೆ ಪರಿಷತ್‌ ಸದಸ್ಯರಿಗೂ ಪತ್ರ ಬರೆಯುವುದಾಗಿ ಸಚಿವರು ಭರವಸೆ ನೀಡಿದರು.

'ಮಂಜೂರಾಗಿದ್ದರೂ ಹಂಚಿಕೆಗೆ ಭೂಮಿ ಇಲ್ಲ'
‘ಗೋಮಾಳದಲ್ಲಿ ಲಭ್ಯವಿದ್ದ ಭೂಮಿಗಿಂತಲೂ ಹೆಚ್ಚಿನ ಭೂಮಿಯನ್ನು ತಹಶೀಲ್ದಾರ್‌ಗಳು ಮಂಜೂರು ಮಾಡಿದ್ದಾರೆ. ಹೀಗಾಗಿ ಬಹಳಷ್ಟು ಮಂದಿಗೆ ಮಂಜೂರಾಗಿದ್ದರೂ ಹಂಚಿಕೆ ಮಾಡಲು ಭೂಮಿ ಇಲ್ಲ. ಇಂಥ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಕಷ್ಟ ಸಾಧ್ಯವಾಗಿದೆ’ ಎಂದು ಅಶೋಕ ತಿಳಿಸಿದರು.

ವಿಧಾನ ಪರಿಷತ್‍ನಲ್ಲಿ ಸದಸ್ಯ ಮರಿತಿಬ್ಬೆಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮಂಜೂರಾತಿ ವೇಳೆ ಕೆರೆ ಕಟ್ಟೆಗಳ ಬಗ್ಗೆ ಪಹಣಿಯಲ್ಲಿ ನಮೂದಿಸಿಲ್ಲ. ಹೀಗಾಗಿ ಸಾಕಷ್ಟು ಗೊಂದಲಗಳಾಗಿವೆ. ಹಲವು ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ. ಯಾರು ಮೊದಲು ಅರ್ಜಿ ಹಾಕಿರುತ್ತಾರೋ ಅವರಿಗೆ ಮೊದಲು ಭೂಮಿ ನೀಡಬೇಕು ಎಂಬ ವೈಯಕ್ತಿಕ ಅಭಿಪ್ರಾಯ ನನ್ನದು’ ಎಂದರು.

‘ಪೋಡಿಯನ್ನು ಸಕಾಲದ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ’ ಎಂದ ಸಚಿವರು, ‘ರಾಜ್ಯದಲ್ಲಿ ಏಕವ್ಯಕ್ತಿ ಪ್ರಕರಣಗಳಡಿ ಪೋಡಿಗೆ ರಾಜ್ಯದಲ್ಲಿ 33,331 ಪ್ರಕರಣಗಳು ಬಾಕಿ ಇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT