7
ವಿಟಿಯು; ಅನರ್ಹರ ನೇಮಕ ವಿವಾದ

64 ಬೋಧಕರಿಗೆ ನೋಟಿಸ್‌

Published:
Updated:

ಬೆಳಗಾವಿ: ನೇಮಕಾತಿ ವೇಳೆ ಸಲ್ಲಿಸಿರುವ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಇವುಗಳಿಗೆ ಸ್ಪಷ್ಟನೆ ನೀಡಬೇಕೆಂದು 64 ಜನ ಬೋಧಕರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನೋಟಿಸ್‌ ಜಾರಿ ಮಾಡಿದೆ. 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

2013ರಲ್ಲಿ ಎಚ್‌.ಮಹೇಶಪ್ಪ ಅವರು ಕುಲಪತಿಯಾಗಿದ್ದ ಸಂದರ್ಭದಲ್ಲಿ 168 ಜನ ಬೋಧಕರನ್ನು ನೇಮಿಸಿಕೊಳ್ಳಲಾಗಿತ್ತು. ಈ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದು, ಅನರ್ಹರನ್ನೂ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುವ ಆರೋಪಗಳು ಕೇಳಿಬಂದವು. ಇದರ ಬಗ್ಗೆ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರವು 2017ರಲ್ಲಿ ನ್ಯಾ.ಕೇಶವ ನಾರಾಯಣ ಸಮಿತಿ ರಚಿಸಿತ್ತು. ನೇಮಕಾತಿಯಲ್ಲಿ ಕೆಲವು ಅನರ್ಹ ವ್ಯಕ್ತಿಗಳೂ ಆಯ್ಕೆಯಾಗಿದ್ದಾರೆ ಎಂದು ಸಮಿತಿಯು ವರದಿ ನೀಡಿತ್ತು.

ಈ ವರದಿಯ ಆಧಾರದ ಮೇಲೆ ವಿಟಿಯು ಎಕ್ಸಿಕ್ಯುಟಿವ್‌ ಕೌನ್ಸಿಲ್‌ ಕಮಿಟಿಯು ನೇಮಕಾತಿ ಪರಿಶೀಲನಾ ಸಮಿತಿಯನ್ನು ರಚಿಸಿತು. ಈ ಸಮಿತಿಯು 64 ಜನರ ದಾಖಲೆಗಳಲ್ಲಿ ನ್ಯೂನ್ಯತೆ ಇರುವುದನ್ನು ಪತ್ತೆ ಹಚ್ಚಿತು. ಮುಖ್ಯವಾಗಿ ಶೈಕ್ಷಣಿಕ ಅರ್ಹತೆ, ಅನುಭವ ಹಾಗೂ ಜಾತಿ ಕುರಿತು ಸುಳ್ಳು ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ವರದಿ ನೀಡಿತು.

ಕಮಿಟಿಯಲ್ಲಿ ಮುಂದಿನ ತೀರ್ಮಾನ:

‘ನೇಮಕಾತಿ ಪರಿಶೀಲನಾ ಸಮಿತಿ ನೀಡಿದ ವರದಿಯ ಆಧಾರದ ಮೇಲೆ 64 ಜನ ಬೋಧಕರಿಗೆ ನೋಟಿಸ್‌ ನೀಡಿದ್ದೇನೆ. ಶೈಕ್ಷಣಿಕ ಅರ್ಹತೆ, ಅನುಭವ ಹಾಗೂ ಜಾತಿ ಪ್ರಮಾಣ ಪತ್ರದ ಬಗ್ಗೆ ಎದ್ದಿರುವ ಸಂದೇಹಗಳಿಗೆ ವಿವರಣೆ ನೀಡುವಂತೆ 15 ದಿನಗಳ ಕಾಲಾವಕಾಶ ನೀಡಿದ್ದೇನೆ. ಅವರು ನೀಡುವ ಉತ್ತರವನ್ನು ಎಕ್ಸಿಕ್ಯುಟಿವ್‌ ಕೌನ್ಸಿಲ್‌ ಕಮಿಟಿಗೆ ಸಲ್ಲಿಸುತ್ತೇನೆ. ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದು ಕುಲಸಚಿವ (ಮೌಲ್ಯಮಾಪನ) ಜಗನ್ನಾಥ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !