ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಕಾರರಿಗೆ ಉದ್ಯೋಗ ಖಾತ್ರಿ ಆಸರೆ

ಚಿಕ್ಕೋಡಿ ತಾಲ್ಲೂಕಿನಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ
ಅಕ್ಷರ ಗಾತ್ರ

ಚಿಕ್ಕೋಡಿ: ಒಂದೆಡೆ ಬರದಿಂದ ಕುಡಿಯುವ ನೀರಿಗೂ ತತ್ವಾರ. ಇನ್ನೊಂದೆಡೆ ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ ಪರ ಊರುಗಳಿಗೆ ಕೆಲಸ ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ತಾಲ್ಲೂಕಿನ ಬರಪೀಡಿತ ಗ್ರಾಮಗಳ ಸಾವಿರಾರು ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ.

ತಾಲ್ಲೂಕಿನ 63 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ವಿವಿಧ ಬರ ಪರಿಹಾರ ಕಾಮಗಾರಿಗಳಡಿ ಪ್ರಸಕ್ತ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ 69 ಸಾವಿರ ಮಾನವ ದಿನಗಳ ಸೃಜನೆ ಗುರಿ ನಿಗದಿಪಡಿಸಲಾಗಿತ್ತು. ಆ ಪೈಕಿ 65 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ. ಮೇ ತಿಂಗಳಿನಲ್ಲಿ 2.13 ಲಕ್ಷ ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿತ್ತು. ಆ ಪೈಕಿ 1.80 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. 2019–20ರ ಸಾಲಿನಲ್ಲಿ ಒಟ್ಟು 66.95ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದ್ದು, ಆ ಪೈಕಿ ಏಪ್ರೀಲ್‌ ಮತ್ತು ಮೇ ತಿಂಗಳಾಂತ್ಯಕ್ಕೆ ಒಟ್ಟು 8.75 ಕೋಟಿ ಅನುದಾನವನ್ನು ಖರ್ಚು ಮಾಡಲಾಗಿದೆ.

ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳಿಗೆ ತಲಾ 90 ಮಾನವ ದಿನ ಉದ್ಯೋಗ ನೀಡಲಾಗುತ್ತಿದೆ. ದಿನವೊಂದಕ್ಕೆ ಒಬ್ಬ ಕೂಲಿ ಕಾರ್ಮಿಕರಿಗೆ ₹ 249 ದಿನಗೂಲಿಯಂತೆ ಒಟ್ಟು ₹22,410 ಅನುದಾನವನ್ನು ವಸತಿ ಯೋಜನೆ ಯೋಜನೆಯಡಿ ನೀಡಲಾಗುತ್ತಿದೆ.

‘ತಾಲ್ಲೂಕಿನಲ್ಲಿ ಏಪ್ರಿಲ್ 1ರಿಂದ ಇದುವರೆಗೆ ಕೃಷಿ ಹೊಂಡ ನಿರ್ಮಾಣ, ದನಗಳ ಕೊಟ್ಟಿಗೆ ನಿರ್ಮಾಣ, ಕೆರೆಗಳ ಹೊಳೆತ್ತುವುದು, ಚೆಕ್‌ ಡ್ಯಾಂಗಳ ನಿರ್ಮಾಣ, ಸಿ.ಸಿ ರಸ್ತೆಗಳು, ವಸತಿ ಯೋಜನೆಗಳ ನಿರ್ಮಾಣ ಕಾಮಗಾರಿಗಳಲ್ಲಿ ಅಕುಶಲ ಕಾರ್ಮಿಕರು ದುಡಿಯುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಪಾಟೀಲ ಹೇಳುತ್ತಾರೆ.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2018–19ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ನಿಗದಿಪಡಿಸಿದ್ದ 10.92 ಲಕ್ಷ ಮಾನವ ಸೃಜನೆ ಗುರಿ ಪೈಕಿ 9.31 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿತ್ತು. ನಿಗದಿಪಡಿಸಿದ್ದ ₹ 48.26 ಕೋಟಿ ಅನುದಾನದ ಪೈಕಿ ₹ 34.96 ಕೋಟಿ ಅನುದಾನವನ್ನು ಅಕುಶಲ ಕಾರ್ಮಿಕರಿಗೆ ವಿತರಿಸಲಾಗಿದೆ. ಪ್ರಸಕ್ತ ವರ್ಷ ನಿಗದಿಪಡಿಸಿದ್ದ ₹11.82 ಲಕ್ಷ ಮಾನವ ದಿನಗಳ ಸೃಜನೆಯನ್ನು ₹15.22 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಗುರಿ ಪೈಕಿ ಎರಡೇ ತಿಂಗಳಿನಲ್ಲಿ ಶೇ 12.87ರಷ್ಟು ಸಾಧನೆ ಮಾಡಲಾಗಿದೆ’ ಎಂದು ಮನರೇಗಾ ಯೋಜನೆ ಸಹಾಯಕ ನಿರ್ದೇಶಕ ಆನಂದ ಬಡಕುಂದ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಬೆಳೆ ಇಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಜೊತೆಗೆ ಉಪಜೀವನ ನಡೆಸಲು ನಿತ್ಯವೂ ಪರ ಊರುಗಳಿಗೆ ದುಡಿಯಲು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದೀಗ ನರೇಗಾ ಯೋಜನೆಯಡಿ ದಿನವೂ ಗ್ರಾಮದಲ್ಲಿಯೇ ಕೆಲಸ ಸಿಗುತ್ತಿದೆ’ ಎನ್ನುತ್ತಾರೆ ಅಕುಶಲ ಕಾರ್ಮಿಕರು.

*
ಚಿಕ್ಕೋಡಿ ತಾಲ್ಲೂಕಿನ ಬರಪೀಡಿತ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೆಲಸಗಳನ್ನು ನೀಡಲಾಗಿದೆ. ನಿರೀಕ್ಷೆಗೂ ಮೀರಿ ಬರ ಪರಿಹಾರ ಕಾಮಗಾರಿ ನಡೆಯುತ್ತಿವೆ.
-ಆನಂದ ಬಡಕುಂದ್ರಿ, ಸಹಾಯಕ ನಿರ್ದೇಶಕ, ನರೇಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT