ಮಂಗಳವಾರ, ಆಗಸ್ಟ್ 16, 2022
30 °C
ಕುರಿಗಳ ಸಂಖ್ಯೆ ಹೆಚ್ಚಳ: ಜಾನುವಾರು ಗಣತಿಯ ಮಾಹಿತಿ

ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ದನಗಳ ಸಂಖ್ಯೆ ಇಳಿಕೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ದನಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಕುರಿಗಳು ಮತ್ತು ಎಮ್ಮೆಗಳ ಸಂಖ್ಯೆ ಜಾಸ್ತಿಯಾಗಿದೆ.

ಪಶುಸಂಗೋಪನಾ ಇಲಾಖೆಯಿಂದ ನಡೆಸಿದ ಜಾನುವಾರು ಗಣತಿಯಲ್ಲಿ ಕಂಡುಬಂದಿರುವ ಪ್ರಮುಖಾಂಶಗಳಿವು.

ಹೋದ ವರ್ಷಾಂತ್ಯದಲ್ಲಿ ಆರಂಭವಾಗಿದ್ದ ಜಾನುವಾರು ಗಣತಿಯಲ್ಲಿ, ಮಾಹಿತಿಯನ್ನು ಕಾಗದದ ನಮೂನೆಯ ಬದಲಿಗೆ ಟ್ಯಾಬ್‌ಲೆಟ್‌ಗಳನ್ನು ಬಳಸಿ ಅನ್‌ಲೈನ್‌ನಲ್ಲಿ ಸಂಗ್ರಹಿಸಲಾಗಿದೆ. ಜಿಲ್ಲೆಯಿಂದ ಮಾಹಿತಿ ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಗೆಜೆಟ್‌ನಲ್ಲಿ ಅಧಿಕೃತ ಪ್ರಕಟಣೆಯಷ್ಟು ಬಾಕಿ ಇದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಗಣತಿಯಲ್ಲಿ ಸಂಗ್ರಹಿಸಿರುವ ಮಾಹಿತಿ ‍ಪ್ರಕಾರ, ದನ ಹಾಗೂ ಎಮ್ಮೆಗಳು ಸೇರಿ ಒಟ್ಟು 13.93 ಲಕ್ಷ ಇವೆ. 2014ರಲ್ಲಿ ನಡೆದಿದ್ದ ಗಣತಿಯಂತೆ ಇವುಗಳ  ಸಂಖ್ಯೆ 14.20 ಲಕ್ಷ ಇತ್ತು. ಆಗ ದನಗಳು 5.90 ಲಕ್ಷ ಇದ್ದವು. ಈ ಬಾರಿ 5.49 ಲಕ್ಷ ಇವೆ. ಎಮ್ಮೆಗಳ ಸಂಖ್ಯೆಯು 8.30 ಲಕ್ಷದಿಂದ 8.44 ಲಕ್ಷಕ್ಕೆ  ಏರಿಕೆಯಾಗಿದೆ.

ಕುರಿ ಹಾಗೂ ಆಡುಗಳು 14.59 ಲಕ್ಷ ಇವೆ ಎನ್ನುವ ಮಾಹಿತಿಯನ್ನು ಗಣತಿಯಲ್ಲಿ ಕಲೆ ಹಾಕಲಾಗಿದೆ. ಹಿಂದಿನ ಗಣತಿಯಲ್ಲಿ 4.92 ಲಕ್ಷ ಇದ್ದ ಕುರಿಗಳ ಸಂಖ್ಯೆ, ಈ ಬಾರಿ 7.57 ಲಕ್ಷಕ್ಕೆ ಏರಿಕೆಯಾಗಿವೆ. ಆಡುಗಳ ಸಂಖ್ಯೆ 7.07 ಲಕ್ಷದಿಂದ 7.01 ಲಕ್ಷಕ್ಕೆ ಇಳಿದಿದೆ. ಒಟ್ಟಾರೆ ಜಾನುವಾರು ಸಂಖ್ಯೆ 28.74 ಲಕ್ಷ ಆಗಿದೆ. ಐದು ವರ್ಷಗಳ ಹಿಂದಿನ ಗಣತಿ ವೇಳೆಗೆ ಇವುಗಳ ಪ್ರಮಾಣ 29 ಲಕ್ಷ ಇತ್ತು.

ಹಿಂದಿನ ಗಣತಿ ಕಾಲಕ್ಕೆ 27.38 ಲಕ್ಷ ಕುಕ್ಕುಟ (ಕೋಳಿ)ಗಳಿದ್ದವು. ಈ ಬಾರಿಯ ಗಣತಿ ವೇಳೆಗೆ 28.10 ಲಕ್ಷ ಇರುವ ಅಂಕಿ ಅಂಶ ಲಭ್ಯವಾಗಿದೆ. ಇವುಗಳ  ಸಂಖ್ಯೆಯಲ್ಲಿ ಏರಿಳಿತ ಕಂಡುಬರುತ್ತಲೇ ಇರುತ್ತದೆ. ಇಲಾಖೆಯಿಂದ ಸರಾಸರಿ ಅಂಕಿ–ಅಂಶವನ್ನು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ದೇಶದಾದ್ಯಂತ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಸಲಾಗುತ್ತಿದೆ. ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯು ನಡೆಸಿದ್ದ ಈ ಕಾರ್ಯದಲ್ಲಿ 2012ರಲ್ಲಿ ನಿಗದಿತ ನಮೂನೆಗಳನ್ನು ಮುದ್ರಿಸಿ ನೀಡಿ ಅವುಗಳನ್ನು ಭರ್ತಿ ಮಾಡುವಂತೆ ಗಣತಿದಾರರಿಗೆ ತಿಳಿಸಲಾಗಿತ್ತು. ಆದರೆ, ಈ ಬಾರಿ ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ಗಣತಿಗೆ ಆಧುನಿಕತೆಯ ಸ್ಪರ್ಶ ನೀಡಲಾಗಿತ್ತು. 210 ಗಣತಿದಾರರು ಕಾರ್ಯನಿರ್ವಹಿಸಿದ್ದರು. ಕೇಂದ್ರ ಸರ್ಕಾರದಿಂದ ಅಧಿಕೃತ ತಂತ್ರಾಂಶವನ್ನು ಅಳವಡಿಸಿದ ‌ಟ್ಯಾಬ್‌ಗಳನ್ನು ಕೊಡಲಾಗಿತ್ತು.

ಹಿಂದಿನ ಗಣತಿಗಳಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ಬಾರಿ ಇಲಾಖೆಯವರನ್ನಷ್ಟೇ ಬಳಸಲಾಗಿತ್ತು. ದೇಶದಲ್ಲಿ ಈಗ ಮುಗಿದಿರುವುದು 20ನೇ ಜಾನುವಾರು ಗಣತಿಯಾಗಿದೆ.

***

ಜಾನುವಾರು ಗಣತಿಯಲ್ಲಿ ಸಂಗ್ರಹಿಸಿದ ಅಂಕಿಅಂಶ

5,49,540: ದನಗಳು

8,44,171: ಎಮ್ಮೆಗಳು

7,57,679: ಕುರಿಗಳು

7,01,741: ಆಡುಗಳು

21,784: ಹಂದಿಗಳು

28,10,000: ಕುಕ್ಕುಟಗಳು

210: ಕಾರ್ಯನಿರ್ವಹಿಸಿದ ಗಣತಿದಾರರು

90: ಗಣತಿ ಕ್ಷೇತ್ರ ಕಾರ್ಯಕ್ಕೆ ನಿಗದಿಪಡಿಸಿದ್ದ ದಿನಗಳು

***

ಜಿಲ್ಲೆಯಲ್ಲಿ ಜಾನುವಾರು ಗಣತಿ ಮುಗಿದಿದ್ದು, ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಅವುಗಳ ಸಂಖ್ಯೆಗೆ ತಕ್ಕಂತೆ ಇಲಾಖೆಯಿಂದ ವಿವಿಧ ಯೋಜನೆಗಳ ಮೂಲಕ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ

- ಡಾ.ಅಶೋಕ ಕೊಳ್ಳ, ಉಪನಿರ್ದೇಶಕರು, ಪಶುಸಂಗೋಪನಾ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.