ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸುಧಾರಣೆ: ನರ್ಸ್‌ಗಳ ಸೇವೆ ಹಿರಿದು

ಕೆಎಲ್‌ಇ ನರ್ಸಿಂಗ್ ವಿಜ್ಞಾನ ಸಂಸ್ಥೆ ಪ್ರಥಮ ವಾರ್ಷಿಕೋತ್ಸವ
Last Updated 14 ಜೂನ್ 2019, 12:27 IST
ಅಕ್ಷರ ಗಾತ್ರ

ಬೆಳಗಾವಿ: ‘ರೋಗಿಯ ಆರೋಗ್ಯ ಸುಧಾರಿಸುವಲ್ಲಿ ವೈದ್ಯರಂತೆಯೇ ನರ್ಸ್‌ಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆ ನಿರ್ದೇಶಕ ಡಾ.ಎಂ.ವಿ. ಜಾಲಿ ಹೇಳಿದರು.

ಇಲ್ಲಿ ಗುರುವಾರ ನಡೆದ ಕೆಎಲ್‌ಇ ಶತಮಾನೋತ್ಸವ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಥಮ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವ ಹಿತಾಸಕ್ತಿ ಕಡೆಗಣಿಸಿ ಪರರ ಆರೋಗ್ಯದ ಕಾಳಜಿ ವಹಿಸುವ ನರ್ಸ್‌ಗಳ ವೃತ್ತಿಯು ನಿಜಕ್ಕೂ ಶ್ಲಾಘನೀಯವಾದುದು. ಯಾವುದೇ ರೀತಿಯ ಸಂಬಂಧ ಇಲ್ಲದಿದ್ದರೂ ರೋಗಿಗಳನ್ನು ತನ್ನವರಂತೆ ಕಾಣುತ್ತಾರೆ. ಹೀಗಾಗಿ, ಅವರ ಸೇವೆ ಅಭಿನಂದನಾರ್ಹವಾದುದು’ ಎಂದರು.

ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಮಾತನಾಡಿ, ‘ರೋಗಿಯನ್ನು ಗುಣಮುಖ ಮಾಡುವಲ್ಲಿ ಒಬ್ಬ ವೈದ್ಯನ ಶ್ರಮದಷ್ಟೇ ದಾದಿಯರ ಸೇವೆಯೂ ಪ್ರಾಮುಖ್ಯತೆ ಹೊಂದಿದೆ. ರೋಗಿಗಳ ಸೇವೆಗೆ ತಮ್ಮನ್ನು ಮುಡುಪಾಗಿಡುವ ದಾದಿಯರ ವೃತ್ತಿಯು ನಿಜಕ್ಕೂ ಪವಿತ್ರವಾದದು’ ಎಂದು ತಿಳಿಸಿದರು.

‘ವೈದ್ಯರ ನುಡಿಯಂತೆ ಕಾರ್ಯನಿರ್ವಹಿಸುತ್ತಾ ರೋಗಿಗಳ ಒಡನಾಟದಲ್ಲಿದ್ದು, ಎಲ್ಲ ಸಮಯದಲ್ಲೂ ನಗು ಮೊಗದಿಂದ ಕೆಲಸ ಮಾಡುವುದು ಸುಲಭವಲ್ಲ. ಇದನ್ನು ದಾದಿಯರು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರ ನಲುಮೆ, ನಗು ರೋಗಿಗಳ ನೋವನ್ನು ಮರೆಸುತ್ತದೆ. ಅವರ ಸೇವೆ ಎಲ್ಲ ಆಸ್ಪತ್ರೆಗಳ ಬೆನ್ನುಲುಬಾಗಿದೆ’ ಎಂದರು.

ಕೆಎಲ್ಇ ನರ್ಸಿಂಗ್‌ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ವಿಕ್ರಾಂತ್‌ ನೇಸರಕರ ವಾರ್ಷಿಕ ವರದಿ ಮಂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಯುಎಸ್‌ಎಂ– ಕೆಎಲ್ಇ ಯೋಜನೆಯ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಮಾತನಾಡಿ, ‘ಸೈನಿಕರು ಗಡಿ ಭಾಗದಲ್ಲಿದ್ದು ದೇಶ ಕಾಯುತ್ತಾರೆ. ದೇಶದ ಒಳಗೆ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಶುಶ್ರೂಷಕಿಯರು ಮಹತ್ವದ ಪಾತ್ರ ವಹಿಸುತ್ತಾರೆ. ಒಂದು ಆಸ್ಪತ್ರೆಯ ರೋಗಿಗಳು ಗುಣಮುಖರಾಗುವಲ್ಲಿ ದಾದಿಯರ ಸೇವೆ ದೊಡ್ಡದಿದೆ’ ಎಂದರು.

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನರ್ಸ್‌ಗಳು ತಮ್ಮ ದೈನಂದಿನ ಕರ್ತವ್ಯಗಳ ಜೊತೆಗೆ ಇಂದಿನ ನವೀನ ಮಾದರಿಯ ಹಾಗೂ ವೈದ್ಯಕೀಯ ರಂಗದಲ್ಲಾಗುತ್ತಿರುವ ಸಂಶೋಧನೆಗಳನ್ನು ತಿಳಿದುಕೊಳ್ಳಬೇಕು. ಕೌಶಲಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT