ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಅಧಿಕಾರಿ

ಎಸಿಬಿ ಅಧಿಕಾರಿಗಳ ದಾಳಿ: ಆರೋಪಿ ಮನೆಯಲ್ಲಿ ₹ 3.98 ಲಕ್ಷ ನಗದು ಪತ್ತೆ
Last Updated 23 ಜೂನ್ 2022, 4:02 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿಯೊಬ್ಬರು, ನಗರದ ವ್ಯಾಪಾರಿಗೆ ಪರವಾನಗಿ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದರು.

ಕೃಷಿ ಅಧಿಕಾರಿ ಯೋಗೇಶ ಫಕಿರೇಶ ಅಗಡಿ ಎಸಿಬಿ ಅಧಿಕಾರಿಗಳು ಬೀಸಿದ ಗಾಳಕ್ಕೆ ಸಿಕ್ಕಿಕೊಂಡವರು. ₹ 20 ಸಾವಿರ ಲಂಚ ಪಡೆಯುವ ವೇಳೆಯೇ ಅವರು ಹಣದ ಸಮೇತ ಸಿಕ್ಕಿಬಿದ್ದರು. ನಂತರ ಅವರ ಮನೆಯ ಮೇಲೂ ದಾಳಿ ನಡೆಸಿದ ಅಧಿಕಾರಿಗಳಿಗೆ ₹ 3.98 ಲಕ್ಷ ನಗದು ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಇಲ್ಲಿನ ಅನಗೋಳದ ನಿವಾಸಿ ಮೌನೇಶ್ವರ ಕಮ್ಮಾರ ಎನ್ನುವ ವ್ಯಾಪಾರಿ, ನಗರದಲ್ಲಿ ‘ಸಿಟಿ ಕಾಂಪೋಸ್ಟ್‌ ಮಾರ್ಕೆಟ್‌’ ಹೆಸರಿನಲ್ಲಿ ಗೊಬ್ಬರ ಹಾಗೂ ಸಸ್ಯ ಔಷಧ ಮಳಿಗೆ ತೆರೆಯಲು ಪರವಾನಗಿ ಕೋರಿ ಅರ್ಜಿ ಹಾಕಿದ್ದರು. ಹಲವು ದಿನಗಳಿಂದ ಈ ಅರ್ಜಿ ಹಾಗೇ ಇಟ್ಟುಕೊಂಡಿದ್ದ ಕೃಷಿ ಅಧಿಕಾರಿ ಯೋಗೇಶ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸಾಕಷ್ಟು ವಿಳಂಬ ಮಾಡಿದ್ದರಿಂದ ಕೊನೆಗೆ ಬೇಸತ್ತ ವ್ಯಾಪಾರಿ ಹಣ ನೀಡುವುದಾಗಿ ಹೇಳಿದ್ದರು.

ಪರವಾನಗಿ ನೀಡಲು ₹ 30 ಸಾವಿರ ಲಂಚ ನೀಡಬೇಕು ಎಂದು ಯೋಗೇಶ ಕೇಳಿದ್ದರು. ಕರಾರಿನಂತೆ ಮೊದಲ ಕಂತಿನ ₹ 10 ಸಾವಿರ ಲಂಚವನ್ನೂ ಪಡೆದಿದ್ದರು. ಆದರೂ ಅನುಮತಿ ನೀಡಲು ಒಪ್ಪಲಿಲ್ಲ. ಆಗ ಉಪಾಯ ಮಾಡಿದ ವ್ಯಾಪಾರಿ ಮೌನೇಶ್ವರ ಅವರು, ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದರು.

ಕೃಷಿ ಅಧಿಕಾರಿಯನ್ನು ಹಣದ ಸಮೇತ ಬಂಧಿಸಲು ಎಸಿಬಿ ಪೊಲೀಸರು ಜಾಲ ಹೆಣೆದರು. ಅದರಂತೆ, ಮೌನೇಶ್ವರ ಅವರು ಉಳಿದ ₹ 20 ಸಾವಿರ ಲಂಚ ಕೊಡಲು ಇಲ್ಲಿನ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಬಂದರು. ಅವರಿಂದ ಹಣ ಪಡೆದು ಎಣಿಸಿಕೊಳ್ಳುವಾಗ ಅಧಿಕಾರಿಗಳು ದಾಳಿ ಮಾಡಿದರು.

ಬಳಿಕ ಪಂಚರ ಸಮಕ್ಷಮದಲ್ಲಿ ಯೋಗೇಶ ಅವರ ಮನೆ ಹಾಗೂ ಕಚೇರಿಯಲ್ಲಿಯೂಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅಧಿಕಾರಿ ಮನೆಯ ತಿಜೋರಿಯಲ್ಲಿ ₹ 3.98 ಲಕ್ಷ ನಗದು ಸಿಕ್ಕಿದ್ದು, ಇದಕ್ಕೆ ಯಾವುದೇ ದಾಖಲೆಗಳು ಇಲ್ಲ. ಹಾಗಾಗಿ, ಹಣ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸಿಬಿ ಡಿವೈಎಸ್‌ಪಿ ಜೆ.ಎಂ. ಕರುಣಾಕರಶೆಟ್ಟಿ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಅಡಿವೇಶ ಗೂದಿಗೊಪ್ಪ ಹಾಗೂ ತಂಡದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಸವದತ್ತಿ: ವಾಹನ ಕಳ್ಳರ ಬಂಧನ

ಸವದತ್ತಿ: ಪಟ್ಟಣ ಸೇರಿ ವಿವಿಧೆಡೆ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸವದತ್ತಿ ಪೋಲಿಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಶಿಂಧೋಗಿ ಗ್ರಾಮದ ಶಂಕರ ಮಹಾದೇವಪ್ಪ ಅಬ್ಬಾರ, ಮಾಂತೇಶ ಯಲ್ಲಪ್ಪ ತೋರಗಲ್ಲ ಬಂಧಿತ ಆರೋಪಿಗಳು.

ಇವರಿಂದ ಸುಮಾರು ₹ 8.90 ಲಕ್ಷ ಮೌಲ್ಯದ 1 ಜಾನ್‍ಡೀರ್ ಟ್ರ್ಯಾಕ್ಟರ್, ಬೂದು ಬಣ್ಣದ ಟೇಲರ್ ಮತ್ತು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‍ಐ ಶಿವಾನಂದ ಗುಡಗನಟ್ಟಿ ನೇತೃತ್ವದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಬಿ.ಆರ್.ಸಣ್ಣಮಾಳಗಿ, ಬಿ.ವಿ. ಹೀರೆಮಠ, ಎಂ.ಪಿ. ತೆರದಾಳ, ಎ.ಎಸ್. ಕಪ್ಪತ್ತಿ, ಎಚ್.ಬಿ.ವಾಸನ್ ಹಾಗೂ ಎಸ್.ಆರ್. ಭಜಂತ್ರಿ ಭಾಗಿಯಾಗಿದ್ದರು.

*

ಅಕ್ರಮ ಮದ್ಯ ವಶ, ಆರೋಪಿ ಬಂಧನ

ಖಾನಾಪುರ: ತಾಲ್ಲೂಕಿನ ಕಣಕುಂಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವಾದಿಂದ ತರಲಾದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು, ಆರೋಪಿಯನ್ನೂ ಬಂಧಿಸಿದರು.

ಮಹಾರಾಷ್ಟ್ರ ಮೂಲದ ಪ್ರತೀಕ್ ಮಾಳಿಬಂಧಿತ. ಮಂಗಳವಾರ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಆರೋಪಿ ಮಾಲು ಸಮೇತ ಸಿಕ್ಕಿಬಿದ್ದರು. ಒಟ್ಟು 167 ಬಾಟಲಿಗಳಲ್ಲಿ 125.250 ಲೀಟರ್‌ ಮದ್ಯ ಪತ್ತೆಯಾಗಿದೆ. ವಾಹನ ಹಾಗೂ ಮದ್ಯ ಸೇರಿ ₹ 6 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಾಹನದ ಮಾಲೀಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೆಳಗಾವಿ ಕೇಂದ್ರ ಸ್ಥಾನದ ಅಬಕಾರಿ ಹೆಚ್ವುವರಿ ಆಯುಕ್ತ ಡಾ.ವೈ. ಮಂಜುನಾಥ, ಜಂಟಿ ಆಯುಕ್ತ ಫಿರೋಜಖಾನ್ ಕಿಲ್ಲೇದಾರ, ದಕ್ಷಿಣ ವಿಭಾಗದ ಅಬಕಾರಿ ಉಪ ಆಯುಕ್ತ ಜಯರಾಮೇಗೌಡ, ಉಪ ಅಧೀಕ್ಷಕ ಸಿ.ಎಸ್.ಪಾಟೀಲ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್‌ ಮಂಜುನಾಥ ಗಲಗಲಿ ಪ್ರಕರಣ ಭೇದಿಸಿದರು.

ಸಿಬ್ಬಂದಿಯಾದ ಬಿ.ಎಸ್‍.ಅಟಿಗಲ್, ಎಂ.ಎಫ್. ಕಟಗೆನ್ನವರ, ಎ.ಐ. ಸಯ್ಯದ್‌ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT