ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ತಡೆಗೆ ನಿಗಾ ವಹಿಸಲು ಸೂಚನೆ

ಆರ್‌ಪಿಡಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಪರಿಶೀಲನೆ
Last Updated 25 ನವೆಂಬರ್ 2019, 14:07 IST
ಅಕ್ಷರ ಗಾತ್ರ

ಬೆಳಗಾವಿ: ‘ಉಪ ಚುನಾವಣೆ ಹಿನ್ನೆಲೆಯಲ್ಲಿ ಹಣ, ಮದ್ಯ ಮತ್ತಿತರ ವಸ್ತುಗಳ ಹಂಚಿಕೆ ಸೇರಿದಂತೆ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು. ಪ್ರತಿ ಗ್ರಾಮಗಳಿಂದಲೂ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಬೇಕು’ ಎಂದು ಗೋಕಾಕ ಮತ ಕ್ಷೇತ್ರದ ಸಾಮಾನ್ಯ ವೀಕ್ಷಕಿ ಪಿ.ಎ. ಶೋಭಾ ತಿಳಿಸಿದರು.

ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಮತದಾನ ದಿನಾಂಕ ಸಮೀಪಿಸುತ್ತಿರುವುದರಿಂದ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಪ್ರವಾಹದಿಂದ ಬಾಧಿತವಾಗಿರುವ ಗೋಕಾಕದಲ್ಲಿ ಮತದಾರರಿಗೆ ಮತದಾನಕ್ಕೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಒದಗಿಸಬೇಕು. ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌ ಮತ್ತು ಶೌಚಾಲಯ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು’ ಎಂದು ಸೂಚಿಸಿದರು.

ಅಥಣಿ ಮತಕ್ಷೇತ್ರದ ಸಾಮಾನ್ಯ ವೀಕ್ಷಕಿ ಸಿರಿ ಅತ್ತಾಡ, ‘ಅಥಣಿ ಮತಕ್ಷೇತ್ರದ ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವೀಪ್ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು’ ಎಂದು ಸೂಚಿಸಿದರು.

‘ಸಂಚಾರ ಪ್ರಮಾಣ ಹೆಚ್ಚಿರುವ ಪ್ರಮುಖ ರಸ್ತೆಗಳಲ್ಲಿ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್‌ಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು’ ಎಂದು ಕಾಗವಾಡ ವೀಕ್ಷಕ ಕೃಷ್ಣಕುಮಾರ್ ನಿರಾಳ ತಿಳಿಸಿದರು.

ಸಿದ್ಧತೆ ನಡೆದಿದೆ: ವೀಕ್ಷಕರಿಗೆ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ಇವಿಎಂ ಸಿದ್ಧತೆ, ಭದ್ರತೆ, ಮತದಾನ ಕೇಂದ್ರಗಳ ಸ್ಥಾಪನೆ, ಸ್ಟ್ರಾಂಗ್ ರೂಮ್ ನಿರ್ಮಾಣ, ಮತ ಎಣಿಕೆ ಕೇಂದ್ರದ ಸಿದ್ಧತೆ, ಮತದಾನ ಮತ್ತು ಮತ ಎಣಿಕೆ ಸಿಬ್ಬಂದಿ ಆಯ್ಕೆ ಮತ್ತು ತರಬೇತಿ ಸೇರಿದಂತೆ ಸುಗಮ ಮತ್ತು ಪಾರದರ್ಶಕ ಚುನಾವಣೆಗೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಂಡಗಳನ್ನು ರಚಿಸಲಾಗಿದ್ದು, ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ವಿವರಿಸಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ, ‘ಪ್ರತಿ ಮತಗಟ್ಟೆಗೂ ಅಗತ್ಯತೆ ಆಧರಿಸಿ ಭದ್ರತೆ ಕಲ್ಪಿಸಲಾಗುವುದು. ರಾಜ್ಯ ಮೀಸಲು ಪೋಲಿಸ್, ಜಿಲ್ಲಾ ಸಶಸ್ತ್ರ ಪಡೆಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್ ಮತ ಎಣಿಕೆ ನಡೆಯಲಿರುವ ಆರ್.ಪಿ.ಡಿ. ಕಾಲೇಜಿನಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ‘ಭದ್ರತೆ, ಪಾರ್ಕಿಂಗ್, ಸಂಚಾರ ವ್ಯವಸ್ಥೆ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿ ಪ್ರಕಾರ ಮೂರೂ ಮತಕ್ಷೇತ್ರಗಳ ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ರ‍್ಯಾಂಡಮೈಜೇಷನ್ ಮೂಲಕ ಚುನಾವಣಾ ಸಿಬ್ಬಂದಿ ನಿಯೋಜಿಸಲಾಯಿತು.

ಡಿಸಿಪಿಗಳಾದ ಸೀಮಾ ಲಾಟ್ಕರ್, ಯಶೋದಾ ಒಂಟಗೋಡಿ, ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ, ವೆಚ್ಚ ವೀಕ್ಷಕ ನೋಡಲ್ ಅಧಿಕಾರಿ ಈರಣ್ಣ ಚಂದರಗಿ, ಅಬಕಾರಿ ಉಪ ಆಯುಕ್ತ ಬಸವರಾಜ, ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ, ರಿಪೋರ್ಟ್ ನೋಡಲ್ ಅಧಿಕಾರಿ ರೇಖಾ ಶೆಟ್ಟರ್, ದೂರು ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ನಿಸಾರ್ ಅಹ್ಮದ್ ಹಾಜರಿದ್ದರು.

ಬಳಿಕ ಆರ್‌ಪಿಡಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರವನ್ನು ಸಾಮಾನ್ಯ ವೀಕ್ಷಕರು ಪರಿಶೀಲಿಸಿದರು. ಆಯೋಗದ ಮಾರ್ಗಸೂಚಿ ಪ್ರಕಾರ ಸ್ಟ್ರಾಂಗ್ ರೂಂ ನಿರ್ಮಾಣ, ಭದ್ರತೆ ಮತ್ತು ಮತ ಎಣಿಕೆ ಕೊಠಡಿಯ ವ್ಯವಸ್ಥೆ ಮಾಡಿರುವುದನ್ನು ಖಚಿತಪಡಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT