ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ: ಮುಖ್ಯಮಂತ್ರಿಗೆ ಅಭಿನಂದನೆ

Last Updated 22 ಆಗಸ್ಟ್ 2021, 13:17 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಂಗಳೂರಿನ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿರುವ ಮಹತ್ವದ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಸುವರ್ಣ ವಿಧಾನಸೌಧವನ್ನು ಆಡಳಿತದ ಶಕ್ತಿಕೇಂದ್ರವನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿರುವುದು ಗಡಿ ಭಾಗದ ಕನ್ನಡಿಗರಲ್ಲಿ ಅತೀವ ಸಂತಸ ಮತ್ತು ಸಮಾಧಾನ ಉಂಟು ಮಾಡಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹೇಳಿದೆ.

ಈ ಬಗ್ಗೆ ಮುಖ್ಯಮಂತ್ರಿಗೆ ಭಾನುವಾರ ಅಭಿನಂದನಾ ಪತ್ರ ಬರೆದಿರುವ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ‘ಅಧಿಕಾರ ವಹಿಸಿಕೊಂಡ ನಂತರ ಮೊದಲ ಭೇಟಿಯಲ್ಲೇ ಸುವರ್ಣ ವಿಧಾನಸೌಧದ ಬಗೆಗಿನ ತಮ್ಮ ಬದ್ಧತೆ ಹಾಗೂ ಜನಪರ ನಿಲುವನ್ನು ಪ್ರಕಟಿಸಿದ್ದಕ್ಕಾಗಿ ಗಡಿ ಭಾಗದ ಕನ್ನಡಿಗರು ಮತ್ತು ಕನ್ನಡ ಸಂಘ ಸಂಸ್ಥೆಗಳ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ’ ಎಂದಿದ್ದಾರೆ.

‘ಪ್ರಮುಖ ಕಚೇರಿಗಳ ಸ್ಥಳಾಂತರ ಸಂಬಂಧ ಮುಖ್ಯಮಂತ್ರಿಗಳನ್ನು ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಕನ್ನಡ ಪರ ಸಂಘಟನೆಗಳವರು ಮತ್ತು ಮಠಾಧೀಶರು ಹೋರಾಟದ ಮಾರ್ಗ ಅನುಸರಿಸುತ್ತಲೇ ಬಂದಿದ್ದೇವೆ. ಎಚ್‌.ಡಿ. ಕುಮಾರಸ್ವಾಮಿ ಅವರು ಕೆಲವೊಂದು ಕಚೇರಿಗಳನ್ನು ಉತ್ತರ ಕರ್ನಾಟಕದ ವಿವಿಧ ಕಡೆಗಳಲ್ಲಿ ಸ್ಥಳಾಂತರಿಸುವ ಆದೇಶ ಹೊರಡಿಸಿದರಾದರೂ ಸರಿಯಾಗಿ ಅನುಷ್ಠಾನವಾಗಿಲ್ಲ. ಈಗಿನ ಮುಖ್ಯಮಂತ್ರಿ ಘೋಷಣೆಯಿಂದ ಕಚೇರಿಗಳ ಸ್ಥಳಾಂತರಕ್ಕೆ ಮತ್ತೊಮ್ಮೆ ಚಾಲನೆ ಸಿಕ್ಕಂತಾಗಿದೆ’ ಎಂದಿದ್ದಾರೆ.

‘ಜಿಲ್ಲಾ ಮಟ್ಟದ 23 ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿದ ಹಿಂದಿನ ಸರ್ಕಾರದ ಕ್ರಮವು ಅತ್ಯಂತ ಅಸಮಂಜಸ ಹಾಗೂ ಜನ ವಿರೋಧಿ ಹೆಜ್ಜೆಯಾಗಿದೆ. ರಾಜ್ಯ ಮಟ್ಟದ ಸಚಿವಾಲಯ ಆಗಬೇಕಾದುದು ಜಿಲ್ಲಾಡಳಿತ ಭವನ ಎಂಬ ಹಣೆಪಟ್ಟಿ ಹೊತ್ತಂತಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಬಹುಮಹಡಿ ಕಟ್ಟಡವೊಂದನ್ನು ಕಟ್ಟಿ ಎಲ್ಲ ಜಿಲ್ಲಾ ಮಟ್ಟದ ಕಚೇರಿಗಳನ್ನು ಅಲ್ಲಿಯೇ ಸ್ಥಾಪಿಸಬಹುದು. ಉತ್ತರ ಕರ್ನಾಟಕದ 13 ಜಿಲ್ಲೆಗಳ ಜನತೆಯ ಅನುಕೂಲದ ದೃಷ್ಟಿಯಿಂದ ರಾಜ್ಯದ ಮಹತ್ವದ ಇಲಾಖೆಗಳನ್ನು, ಗಡಿಗೆ ಸಂಬಂಧಿಸಿದ ಪ್ರಾಧಿಕಾರಗಳನ್ನು ಮತ್ತು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕರ ನಿರ್ದೇಶಕರ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT