ಕೆಲಸ ಅರಸುತ್ತಿದ್ದವರೇ ಉದ್ಯೋಗ ನೀಡಿದರು!

7
ಬದುಕು ‘ಕಟ್ಟಿದ’ ಸಿಮೆಂಟ್ ಇಟ್ಟಿಗೆ ತಯಾರಿಕೆ ಘಟಕ

ಕೆಲಸ ಅರಸುತ್ತಿದ್ದವರೇ ಉದ್ಯೋಗ ನೀಡಿದರು!

Published:
Updated:
Deccan Herald

ಚನ್ನಮ್ಮನ ಕಿತ್ತೂರು: ನೌಕರಿಗಾಗಿ ಅರಸುತ್ತಿದ್ದ ಯುವಕನೊಬ್ಬ ಕೊನೆಗೆ ತಾನೇ ಒಂದು ಇಟ್ಟಿಗೆ ಘಟಕ ಪ್ರಾರಂಭಿಸಿ ನಾಲ್ಕಾರು ಜನರಿಗೆ ಕೆಲಸ ನೀಡುವ ಮಟ್ಟಕ್ಕೆ ಬೆಳೆದ ನಿಂತ ಯಶಸ್ಸಿನ ಪಯಣವಿದು.

ಅವರ ಹೆಸರು ಪಟ್ಟಣದ ಸೋಮವಾರ ಪೇಟೆಯ ನಿವಾಸಿ ವೀರೇಶ ಈಶ್ವರಯ್ಯ ಹಿರೇಮಠ. ಸಿಮೆಂಟ್ ಇಟ್ಟಿಗೆ ತಯಾರಿಕೆಯ ಉದ್ಯೋಗ ಪ್ರಾರಂಭಿಸಿದ ಅವರು ಈ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರೆ. ನಾಲ್ಕಾರು ಯುವಕರಿಗೂ ಉದ್ಯೋಗ ನೀಡಿ ಅವರ ಬದುಕಿಗೆ ತಕ್ಕಮಟ್ಟಿಗೆ ನೆರವಾಗಿದ್ದಾರೆ. ಇದರೊಂದಿಗೆ ಇತರರ ಗಮನವನ್ನೂ ಸೆಳೆದಿದ್ದಾರೆ. ಉದ್ಯಮಿಯಾಗಿ ಬೆಳೆಯುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದ್ದಾರೆ.

‘ಮಾಡುವ ಕೆಲಸದಲ್ಲಿ ಪ್ರೀತಿ ಮತ್ತು ಶ್ರದ್ಧೆ ಇರಬೇಕು. ಜೊತೆಗೆ ಅದಕ್ಕೆ ತಕ್ಕ ವ್ಯವಹಾರ ಕೌಶಲವೂ ಬೇಕು. ಅಂದಾಗ ಮಾತ್ರ ಉದ್ಯೋಗದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ’ ಎಂಬ ಅನುಭವದ ಮಾತುಗಳನ್ನು ಆಡುತ್ತಾರೆ ವೀರೇಶ್.

ಕಚ್ಚಾ ಸಾಮಗ್ರಿ:

‘ಆವರಣ ಗೋಡೆ, ಚಿಕ್ಕ ಮನೆಗಳು, ಫಾರ್ಮ್ ಹೌಸ್, ಮೊಲ, ಕೋಳಿ ಸಾಕಾಣಿಕೆ ಶೆಡ್ ನಿರ್ಮಿಸಲು ಹೆಚ್ಚಾಗಿ ಈ ಇಟ್ಟಿಗೆ ಹೆಚ್ಚು ಬಳಕೆಯಾಗುತ್ತದೆ. ನಿರ್ಮಾಣ ಕೆಲಸ ಬೇಗನೆ ಆಗುತ್ತದೆ. ಗುಣಮಟ್ಟದ ಇಟ್ಟಿಗೆಗಳಿಗೆ ಹೆಚ್ಚು ಬೇಡಿಕೆ ಯಾವಾಗಲೂ ಇರುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಖಡಿ, ಖಡಿ ಪುಡಿ, ದಾಂಡೇಲಿ ಪೇಪರ್ ಮಿಲ್ಲಿನಲ್ಲಿ ಉಪಯೋಗಿಸಿದ ಪೌಡರ್ ಮತ್ತು ಸಿಮೆಂಟ್ ಈ ಇಟ್ಟಿಗೆ ತಯಾರಿಕೆಗೆ ಬಳಸುತ್ತೇವೆ. ಇವೆಲ್ಲವುಗಳನ್ನು ಕೂಡಿಸಿ ಕಲಿಸುವ ಮಷಿನ್ ಮತ್ತು ಇಟ್ಟಿಗೆ ಹೊಡೆಯುವ ಮಷಿನ್, ಅಗತ್ಯ ಪರಿಕರ ಸೇರಿ ₹ 7.5 ಲಕ್ಷ ಹೂಡಿಕೆ ಮಾಡಿದ್ದೇನೆ. ಮೊದಲೆಲ್ಲ ಖಡಿ ಪೌಡರ, ಖಡಿ ಸೇರಿ ಲೋಡಿಗೆ ₹ 6ಸಾವಿರ ಧಾರಣಿ ಇತ್ತು. ಆದರೆ ಅದಕ್ಕೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಈಗ ದರ ದುಪ್ಪಟ್ಟಾಗಿದೆ’ ಎಂದು ಹೇಳಿದರು.

ಮೊದಲು ಕಠಿಣವೆನಿಸಿತ್ತು:

‘ಕಿತ್ತೂರು ತಾಲ್ಲೂಕಿನ ಹಳ್ಳಿಗಳಲ್ಲಿ ಹೆಚ್ಚು ಪೂರೈಕೆ ಮಾಡುತ್ತೇವೆ. ಕೊಲ್ಹಾಪುರದಿಂದ ಯಂತ್ರ ಸರಬರಾಜು ಮಾಡಿದವರೇ ನಮಗೆ ತರಬೇತಿ ನೀಡಿ ಹೋಗಿದ್ದಾರೆ. ಮೊದಲು ಕಠಿಣ ಎನ್ನಿಸಿತು. ಕೆಲವು ಇಟ್ಟಿಗೆಗೆಳು ಸರಿಯಾಗುತ್ತಿರಲಿಲ್ಲ. ಆದರೆ ಈಗ ಪರವಾಗಿಲ್ಲ. 6 ಅಂಗುಲ ಎತ್ತರ, 8 ಅಂಗುಲ ಅಗಲವುಳ್ಳ ಸಿಮೆಂಟ್ ಬ್ಲಾಕ್‌ಗಳನ್ನು ಈ ಘಟಕದಲ್ಲಿ ಸಿದ್ಧಪಡಿಸಲಾಗುತ್ತದೆ’ ಎನ್ನುತ್ತಾರೆ ಅವರು.

‘ಮರಳು ಸಿಕ್ಕರೆ ಹೆಚ್ಚು ಲಾಭ ನಮಗೆ ಸಿಗಲು ಸಾಧ್ಯವಿದೆ. ಆದರೆ, ಮರಳು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ದಿನಕ್ಕೆ 4 ಕಾರ್ಮಿಕರು ಸೇರಿ 350ರಿಂದ 400 ಇಟ್ಟಿಗೆಗಳನ್ನು ಸಿದ್ಧಪಡಿಸುತ್ತಾರೆ. ಕಠಿಣ ಕೆಲಸವಾಗಿರುವುದರಿಂದ ವಾರದಲ್ಲಿ ಕಾರ್ಮಿಕರು ಎರಡು ದಿನವಾದರೂ ಕಡ್ಡಾಯವಾಗಿ ರಜೆ ಪಡೆಯುತ್ತಾರೆ’ ಎಂದು ವಿವರಿಸಿದರು. ಮಾಹಿತಿಗೆ: 94484 04210.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !