ಸೋಮವಾರ, ಫೆಬ್ರವರಿ 24, 2020
19 °C
ಅಗ್ಗದಲ್ಲಿ ಸೊಪ್ಪು ಮಾರಾಟ : ಮಾಂಸ ದರದಲ್ಲಿ ಸ್ಥಿರ

ಬೆಳಗಾವಿ| ಕೊನೆಗೂ ಇಳಿಕೆಯಾದ ಈರುಳ್ಳಿ ಬೆಲೆ

ಮಾಲತೇಶ ಮಟಿಗೇರ Updated:

ಅಕ್ಷರ ಗಾತ್ರ : | |

prajavani

ಬೆಳಗಾವಿ: ಕಳೆದ ವಾರ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ಒಂದು ಕೆ.ಜಿ. ಈರುಳ್ಳಿಗೆ ₹200ರ ಗಡಿ ತಲುಪಿದ್ದ ಈರುಳ್ಳಿ ಗಣನೀಯವಾಗಿ ಇಳಿಕೆ ಕಂಡಿದೆ. ಗುರುವಾರ ₹70ರಿಂದ ₹120ಕ್ಕೆ ಬಂದಿದೆ. ಕಳೆದ ವಾರದಲ್ಲಿ ಈರುಳ್ಳಿ ಕೊರತೆ ಉಂಟಾಗಿದ್ದರಿಂದ ಬೆಲೆ ಏರಿಕೆಯಾಗಿ ಇದುವರೆಗಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿತ್ತು. ಆದರೆ, ಈಗ ಅರ್ಧದಷ್ಟು ಬೆಲೆ ಕಡಿಮೆಯಾಗಿದೆ.

‘ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದವಾರಷ್ಟೇ ಪ್ರತಿ ಕ್ವಿಂಟಲ್‌ ಈರುಳ್ಳಿಗೆ ₹14ಸಾವಿರದಿಂದ ₹18ಸಾವಿರಕ್ಕೆ ಮಾರಾಟವಾಗಿತ್ತು. ಆದರೆ, ಈ ವಾರ ಮಾರುಕಟ್ಟೆಗೆ ಹೆಚ್ಚಿನ ಈರುಳ್ಳಿ ಆವಕ ಆಗಿರುವುದರಿಂದಾಗಿ ₹2ಸಾವಿರದಿಂದ ₹9ಸಾವಿರದವರೆಗೆ ಮಾರಾಟವಾಗಿದೆ. ಬೆಲೆ ಕಡಿಮೆಯಾಗಿರುವುದರಿಂದ, ಗ್ರಾಹಕರು ಈರುಳ್ಳಿ ಖರೀದಿಗೆ ಮುಂದಾಗುತ್ತಿದ್ದಾರೆ’ ಎಂದು ಚಿಲ್ಲರೆ ವ್ಯಾಪಾರಿಯೊಬ್ಬರು ತಿಳಿಸಿದರು.

‘ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬುಧವಾರ ಮಹಾರಾಷ್ಟ್ರದಿಂದ 41 ಲಾರಿಗಳು ಹಾಗೂ ಸ್ಥಳೀಯವಾಗಿ ಈರುಳ್ಳಿ ತುಂಬಿದ 7 ಲಾರಿಗಳು ಬಂದಿದ್ದವು. ಒಟ್ಟು 48 ಲಾರಿ ಈರುಳ್ಳಿ ಆವಕವಾಗಿರುವುದರಿಂದ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಈ ಹಿಂದೆ ಹೊರ ರಾಜ್ಯದ ಈರುಳ್ಳಿ ಬರದಿದ್ದರಿಂದ ದರ ಹೆಚ್ಚಾಗಿತ್ತು’ ಎಂದು ಎಪಿಎಂಸಿ ಕಾರ್ಯದರ್ಶಿ ಡಾ.ಕೆ. ಕೋಡಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಉಳಿದಂತೆ ಆಲೂಗಡ್ಡೆ, ಟೊಮೆಟೊ ದರದಲ್ಲಿ ವ್ಯತ್ಯಾಸಗಳಾಗಿವೆ. ಕೆ.ಜೆ ಆಲೂಗಡ್ಡೆ ₹20–40 (ಕಳೆದವಾರ ₹20–₹30) ಇತ್ತು. ಟೊಮೆಟೊ ಹಿಂದಿನ ವಾರಕ್ಕಿಂತ ಕಡಿಮೆಯಾಗಿದ್ದು, ₹10ರಿಂದ ₹30 ಇದೆ. ಇತರ ಯಾವುದೇ ತರಕಾರಿ ದರ ಹೆಚ್ಚಳವಾಗಿಲ್ಲ. ಬೆಂಡೆಕಾಯಿ ₹30ರಿಂದ ₹50 ಇದೆ. ದೊಡ್ಡಮೆಣಸಿನಕಾಯಿ ₹40ರಿಂದ ‌₹60, ಬದನೆಕಾಯಿ ₹40ರಿಂದ ₹60, ಮೆಣಸಿನಕಾಯಿ ₹30ರಿಂದ ₹50, ಸೌತೆಕಾಯಿ ₹60ರಿಂದ ₹80 ಇದೆ.

ಸೊಪ್ಪಿನ ದರದಲ್ಲಿ ಇಳಿಕೆ: ಚಳಿಗಾಲ ಆರಂಭವಾಗಿದ್ದರಿಂದ ತರಕಾರಿ ಚೆನ್ನಾಗಿ ಬೆಳೆದಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿದೆ. ಇದರ ಪರಿಣಾಮ ದರಗಳು ಕಡಿಮೆಯಾಗಿವೆ ಎನ್ನುತ್ತಾರೆ ವ್ಯಾಪಾರಿಗಳು. ಕೊತ್ತಂಬರಿ ಸೊಪ್ಪು (ಒಂದು ಕಂತೆಗೆ ₹5ರಿಂದ ₹10), ಮೆಂತ್ಯೆ ಸೊಪ್ಪು (₹5–₹8 ), ಪುದೀನಾ (₹5–₹10), ಸಬ್ಬಸಗಿ (₹10– ₹15) ಬೆಲೆ ಇಳಿಕೆ ಕಂಡಿದೆ.

ಬಾರೆ ಹಣ್ಣು ಕೆ.ಜಿ.ಗೆ ₹30– ₹40 ಇತ್ತು. ಅನಾನಸ್ (ಒಂದಕ್ಕೆ) ₹30ರಿಂದ ₹50ರವರೆಗೆ ಇದೆ. ಸೇಬು ಕೆ.ಜಿ.ಗೆ ಸರಾಸರಿ ₹60 ರಿಂದ ₹120 ಇತ್ತು. ಹೋದ ವಾರವೂ ಇಷ್ಟೇ ಇತ್ತು. ಪೇರಲ, ಚಿಕ್ಕು, ದಾಳಿಂಬೆ ಹಣ್ಣುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಕೋಳಿ ಮಾಂಸ (ಕೆ.ಜೆ.ಗೆ ₹150–₹160), ಕುರಿ ಮಾಂಸದ (₹520–₹540) ಬೆಲೆ ಹಿಂದಿನ ವಾರದಷ್ಟೇ ಇದೆ. ಮೀನುಗಳ ಬೆಲೆ ಯಥಾಸ್ಥಿತಿಯಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು