ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಚಿಕಿತ್ಸೆ ಯಶಸ್ವಿ: ಹುಣಸೆ ಬೀಜ ಹೊರತೆಗೆದ ವೈದ್ಯರು

Last Updated 28 ಮಾರ್ಚ್ 2022, 7:08 IST
ಅಕ್ಷರ ಗಾತ್ರ

ಬೆಳಗಾವಿ: ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಇಲ್ಲಿನ ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ತಂಡದವರು, ಶ್ವಾಸನಾಳದಲ್ಲಿದ್ದ ಹುಣಸೆಬೀಜ ಹೊರ ತೆಗೆದು 11 ವರ್ಷದ ಬಾಲಕಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

‘ಆ ಬಾಲಕಿಯು ತೀವ್ರ ಉಸಿರಾಟದ ತೊಂದರೆ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಳು. ಯಾವುದೇ ವಸ್ತು ನುಂಗಿದ ಬಗ್ಗೆ ವೈದ್ಯರಿಗೆ ತಿಳಿಸಿರಲಿಲ್ಲ. ಚಿಕ್ಕಮಕ್ಕಳ ವೈದ್ಯರು ತಪಾಸಿಸಿದರೂ ಸುಳಿವು ಸಿಕ್ಕಿರಲಿಲ್ಲ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆಕೆಯನ್ನು ಎಚ್‌ಆರ್‌ಸಿಟಿಗೆ ಒಳಪಡಿಸಿದಾಗ ಶ್ವಾಸನಾಳದಲ್ಲಿ ಯಾವುದೋ ವಸ್ತು ಸಿಕ್ಕಿ ಹಾಕಿಕೊಂಡಿರುವುದು ಕಂಡುಬಂತು. ಚಿಕ್ಕ ಮಕ್ಕಳ ತಜ್ಞಶಸ್ತ್ರಚಿಕಿತ್ಸಕ ಡಾ.ಸ್ವಪ್ನೀಲ್‌ ಪಟ್ಟಣಶೆಟ್ಟಿ ನೇತೃತ್ವದ ತಂಡದವರು ಶಸ್ತ್ರಚಿಕಿತ್ಸೆ ನೆರವೇರಿಸಿ ಸಿಕ್ಕಿಕೊಂಡಿದ್ದ ಹುಣಸೆ ಬೀಜವನ್ನು ಹೊರತೆಗೆದಿದ್ದಾರೆ’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

‘ಚಿಕ್ಕಮಕ್ಕಳ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸ್ಪಂದಿಸದೆ ದಿನದಿಂದ ದಿನಕ್ಕೆ ಶ್ವಾಸನಾಳಕ್ಕೆ ತೀವ್ರ ಗಾಯವಾಗಿ ಆರೋಗ್ಯ ಗಂಭೀರವಾಗತೊಡಗಿತ್ತು. ಬೀಜ ಹೊರತೆಗೆಯುವುದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರವಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನದ ಬ್ರೊಂಕೊಸ್ಕೋಪಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. 4ನೇ ದಿನಕ್ಕೆ ಬಾಲಕಿಯನ್ನು ಬಿಡುಗಡೆ ಮಾಡಲಾಯಿತು’ ಎಂದು ಮಾಹಿತಿ ನೀಡಲಾಗಿದೆ.

ತಂಡದಲ್ಲಿ ಡಾ.ತನ್ಮಯಾ ಮೆಟಗುಡ್, ಡಾ.ಸುಜಾತಾ ಜಾಲಿ, ಡಾ.ಜೀಶನ್ ದೇಸಾಯಿ ಮೊದಲಾದವರು ಇದ್ದರು. ಅವರನ್ನು ಕೆಎಲ್‌ಇ ಸೊಸೈಟಿಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT