ಶುಕ್ರವಾರ, ಏಪ್ರಿಲ್ 23, 2021
28 °C

ಎಸ್‌ಟಿಪಿ: ಭೂಸ್ವಾಧೀನಕ್ಕೆ ವಿರೋಧ, ಮನವೊಲಿಕೆ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಹೊರವಲಯದ ಹಲಗಾ ಗ್ರಾಮದ ಬಳಿ ಮಲಿನ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣಕ್ಕೆ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ರೈತರ ವಿರೋಧ ಮುಂದುವರಿದಿದ್ದು, ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸರು ಭಾನುವಾರ ನಡೆಸಿದ ಸಂಧಾನ ಸಭೆ ವಿಫಲವಾಯಿತು. ಇನ್ನೊಂದೆಡೆ, ಸ್ಥಳದಲ್ಲಿ ಪೊಲೀಸ್ ಭದ್ರತೆಯಲ್ಲಿ ಜಮೀನು ಸಮತಟ್ಟು ಮಾಡುವ ಕೆಲಸ ನಡೆಯಿತು.

ಗ್ರಾಮದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ರೈತರು, ‘ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವುದಿಲ್ಲ. ಸರ್ಕಾರ ನಮಗೆ ನ್ಯಾಯ ದೊರಕಿಸಿಕೊಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ಇನ್ನೆರಡು ದಿನಗಳಲ್ಲಿ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪಾಟೀಲ ಮಾತನಾಡಿ, ‘ರೈತರ ಭೂಮಿಯನ್ನು ಒತ್ತಾಯಪೂರ್ವಕವಾಗಿ ವಶಕ್ಕೆ ಪಡೆಯುವುದು ಸರಿಯಲ್ಲ. ಫಲವತ್ತಾದ ಭೂಮಿ ಕಸಿದುಕೊಂಡರೆ ಅವರಿಗೆ ಅನ್ಯಾಯವಾಗುತ್ತದೆ. ಶಾಸಕರು, ಸಚಿವರು ಸಭೆ ನಡೆಸಿ ರೈತರಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

‘ಇಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ಹಿಂದಿನಿಂದಲೂ ನಮ್ಮ ವಿರೋಧವಿದೆ. ಮನವಿಯನ್ನೂ ಸಲ್ಲಿಸಿದ್ದೇವೆ. ಹೋರಾಟವನ್ನೂ ನಡೆಸಿದ್ದೇವೆ. ಆದರೂ ಏಕಾಏಕಿ ಕಾಮಗಾರಿ ಆರಂಭಿಸಿರುವುದು ಖಂಡನೀಯ. ಜೀವ ಹೋದರೂ ಜಮೀನು ಬಿಟ್ಟುಕೊಡುವುದಿಲ್ಲ’ ಎಂದು ರೈತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಶಿವಾಜಿ ಸುಂಟಕರ ಮಾತನಾಡಿದರು. ಎಸಿಪಿಗಳಾದ ನಾರಾಯಣ ಭರಮನಿ, ಮಹಾಂತೇಶ್ವರ ಜಿದ್ದಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.