ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಚಳಿಗಾಲ ಅಧಿವೇಶನಕ್ಕೆ ಪ್ರತಿಭಟನೆಗಳ ಬಿಸಿ

ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಸಜ್ಜು
Last Updated 11 ಡಿಸೆಂಬರ್ 2021, 11:22 IST
ಅಕ್ಷರ ಗಾತ್ರ

ಬೆಳಗಾವಿ: ಇದೇ 13ರಿಂದ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಪ್ರತಿಭಟನೆಗಳ ಬಿಸಿ ತಟ್ಟಲಿದೆ.

ಪ್ರತಿ ಬಾರಿ ಅಧಿವೇಶನದಲ್ಲಿ ನಾನಾ ಬೇಡಿಕೆಗಳನ್ನು ಹೊತ್ತು ರಾಜ್ಯದ ವಿವಿಧೆಡೆಯಿಂದ ಪ್ರತಿಭಟನಾಕಾರರ ದಂಡೇ ಬೆಳಗಾವಿಯತ್ತ ಹರಿದುಬರುತ್ತದೆ. ಈ ಬಾರಿಯೂ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದ್ದು, ಸರ್ಕಾರದ ‘ಚಳಿ’ ಬಿಡಿಸಲು ಯೋಜಿಸಿವೆ.

75 ಅರ್ಜಿ ಸಲ್ಲಿಕೆ: ರೈತರು, ಕಾರ್ಮಿಕರು, ದಲಿತ ಸಂಘಟನೆಗಳ ಮುಖಂಡರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು, ಕ್ರೈಸ್ತ ಸಮುದಾಯ, ಲಿಂಗಾಯತ ಪಂಚಮಸಾಲಿ, ಮಡಿವಾಳ ಸಮುದಾಯದವರು, ಸಾರಿಗೆ ನೌಕರರು ಸೇರಿ ವಿವಿಧ ಸಂಘಟನೆಗಳವರು ಪ್ರತಿಭಟನೆಗೆ ಅನುಮತಿ ಕೋರಿ 75 ಅರ್ಜಿ ಸಲ್ಲಿಕೆಯಾಗಿವೆ. ಈ ಪೈಕಿ 55 ಸಂಘಟನೆಗಳು ಪ್ರತಿಭಟಿಸಲಿದ್ದು, 20 ಸಂಘಟನೆಗಳು ಮನವಿ ಸಲ್ಲಿಸಲಿವೆ. ಕೆಲವರು ಪಾದಯಾತ್ರೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿಭಟನಾಕಾರರಿಗಾಗಿ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‌ ಬಳಿ 6‍ ಪೆಂಡಾಲ್‌ ಹಾಕಲಾಗಿದೆ. ಅಲ್ಲದೆ, ಕೊಂಡಸಕೊಪ್ಪ ಗ್ರಾಮದ ಗುಡ್ಡದಲ್ಲೂ ವ್ಯವಸ್ಥೆ ಮಾಡಲಾಗಿದೆ.

ಸೋಂಕು ಹರಡುವ ಭೀತಿ: ‘ಪ್ರತಿಭಟನೆಗೆ ಗರಿಷ್ಠ 500 ಜನರು ಸೇರಲಷ್ಟೆ ಅವಕಾಶವಿದೆ. 2ನೇ ಡೋಸ್‌ ಕೋವಿಡ್ ಲಸಿಕೆ ಪಡೆದಿರಬೇಕು. ಕೊರೊನಾ ನಿಯಂತ್ರಣ ಮಾರ್ಗಸೂಚಿ ಕಟ್ಟುನಿಟ್ಟಾಗಿ ‍ಪಾಲಿಸಬೇಕು ಎಂಬ ಷರತ್ತು ವಿಧಿಸಿಯೇ ‌ಸಂಘಟನೆಗಳಿಗೆ ಅನುಮತಿ ನೀಡಲಾಗುತ್ತಿದೆ. ಪ್ರತಿಭಟನಾ ವೇದಿಕೆ ಬಳಿ ಸ್ಯಾನಿಟೈಸರ್‌ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಕೆ.ತ್ಯಾಗರಾಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಏಕಕಾಲಕ್ಕೆ ಸಾವಿರಾರು ಜನರು ಪ್ರತಿಭಟನೆಗೆ ಆಗಮಿಸುವುದರಿಂದ ಕೊರೊನಾ ನಿಯಂತ್ರಣ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆಯಾಗುವುದೇ ಎಂಬ ಪ್ರಶ್ನೆ ತಲೆದೋರಿದೆ. ಪ್ರತಿಭಟನಾಕಾರರು ಮಾರ್ಗಸೂಚಿ ಗಾಳಿಗೆ ತೂರಿದರೆ, ಸೋಂಕು ಹರಡುವ ಆತಂಕವೂ ಎದುರಾಗಿದೆ.

ವೈದ್ಯರ ತಂಡಗಳ ರಚನೆ: ‘ಪ್ರತಿಭಟನಾಕಾರರು ಹಾಗೂ ಕರ್ತವ್ಯನಿರತ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ವೈದ್ಯರ ತಂಡಗಳನ್ನು ರಚಿಸಲಾಗಿದೆ. ಅವು ಸುವರ್ಣ ಗಾರ್ಡನ್‌ ಹಾಗೂ ಕೊಂಡಸಕೊಪ್ಪ ಬಳಿ ಇರಲಿವೆ. ಅನಾರೋಗ್ಯಕ್ಕೆ ತುತ್ತಾದವರಿಗೆ ತಕ್ಷಣ ಚಿಕಿತ್ಸೆ ನೀಡಲಿವೆ’ ಎಂದು ಡಿಎಚ್‌ಒ ಡಾ.ಎಸ್‌.ವಿ. ಮುನ್ಯಾಳ ಪ್ರತಿಕ್ರಿಯಿಸಿದರು.

ಪ್ರತಿಭಟನಾ ವೇದಿಕೆ ಬಳಿ ಕುಡಿಯುವ ನೀರು, ಮೊಬೈಲ್ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹತ್ತಾರು ಕಾರ್ಮಿಕರು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT