ಶನಿವಾರ, ಸೆಪ್ಟೆಂಬರ್ 18, 2021
27 °C

ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಿ ನಾಲ್ವರ ಜೀವ ಉಳಿಸಲಾಗಿದೆ.

ಇಲ್ಲಿನ ಕೆಎಲ್‍ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ದಾಖಲಾಗಿದ್ದ 50 ವರ್ಷದ ವ್ಯಕ್ತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದರು. ಅವರ ಅಂಗಾಂಗಗಳು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹೊಂದಿಕೊಳ್ಳದೆ ಇದ್ದಿದ್ದರಿಂದ ಲಿವರ್‌ ಅನ್ನು ಬೆಂಗಳೂರು ಹಾಗೂ ಕಿಡ್ನಿಗಳನ್ನು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಕಳುಹಿಸಿಕೊಡಲಾಗಿದೆ. ಪೊಲೀಸರು ‘ಹಸಿರು ಪಥ’ದ (ಝೀರೊ ಟ್ರಾಫಿಕ್) ಮೂಲಕ ಅಂಗಾಂಗಳನ್ನು ರವಾನಿಸಲು ವಾಹನಗಳಿಗೆ ಅವಕಾಶ ಕಲ್ಪಿಸಿಕೊಟ್ಟರು.

‘ವ್ಯಕ್ತಿಯು ದ್ವಿಚಕ್ರವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮಿದುಳಿಗೆ ಗಂಭೀರ ಗಾಯವಾದ್ದರಿಂದ ಚಟುವಟಿಕೆ ನಿಲ್ಲಿಸಿತ್ತು. ಆದರೆ, ಇತರ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿದ್ದವು. ವ್ಯಕ್ತಿಯ ಸಹೋದರರು, ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಆಪ್ತಸಮಾಲೋಚನೆ ನಡೆಸಿದ ವೈದ್ಯರು ಅಂಗಾಂಗಗಳ ದಾನಕ್ಕೆ ಒಪ್ಪಿಸಿದರು. ಇದರಿಂದ ಅಗತ್ಯವಿರುವವರಿಗೆ ಅಂಗಾಂಗಗಳು ದೊರೆತಂತಾಗಿದೆ’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಲಿವರ್ ಅನ್ನು ಹುಬ್ಬಳ್ಳಿಯ ವಿಮಾನನಿಲ್ದಾಣದವರಗೆ ರಸ್ತೆ ಮೂಲಕ ಸಾಗಿಸಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ತಲುಪಿಸಲಾಗಿದೆ. ಕಿಡ್ನಿಗಳನ್ನು ಹುಬ್ಬಳ್ಳಿಯ ತತ್ವಾದರ್ಶ ಹಾಗೂ ಎಸ್‌ಡಿಎಂ ಆಸ್ಪತ್ರೆಗೆ ನೀಡಲಾಗಿದೆ. ಚರ್ಮವನ್ನು ಕೆಎಲ್‍ಇ ರೋಟರಿ ಸ್ಕಿನ್ ಬ್ಯಾಂಕ್‌ ಹಾಗೂ ಕಣ್ಣುಗಳನ್ನು ಕೆಎಲ್‍ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಬ್ಯಾಂಕ್‌ಗೆ ದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಆಸ್ಪತ್ರೆಯ ಮೂತ್ರಕೋಶ ವಿಭಾಗದ ಡಾ.ಆರ್.ಬಿ. ನೇರ್ಲಿ, ಡಾ.ರಿತೇಶ ವೆರ್ನೆಕರ, ಬಿಜಿಎಸ್ ಗ್ಲೋಬ್‍ನ ಡಾ.ಸುನೀಲ ಶೇನ್ವಿ ಹಾಗೂ ಅವರ ತಂಡ, ಕಸಿ ಸಂಯೋಜಕರಾದ ಡಾ.ಪ್ರಮೋದ ಸುಳಿಕೇರಿ, ನೀರಜ ದೀಕ್ಷಿತ, ಆರ್.ಜಿ. ಪಾಟೀಲ, ವಿನಾಯಕ ಪುರಾಣಿಕ, ಜೀವಸಾರ್ಥಕತೆಯ ಮನೋಜ ನಾಯಕ, ಶೀತಲ ಮುಂಡದಾ ಉಪಸ್ಥಿತರಿದ್ದರು.

ಅಂಗಾಂಗಳನ್ನು ದಾನ ಮಾಡಿದ ವ್ಯಕ್ತಿ ಹಾಗೂ ಅವರ ಕುಟುಂಬ ಸದಸ್ಯರನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು