ಮಂಗಳವಾರ, ನವೆಂಬರ್ 29, 2022
29 °C

ದುರ್ಗಾಮಾತಾ ದೌಡ್‌ನಲ್ಲಿ ಪಾಕಿಸ್ತಾನ ಧ್ವಜಕ್ಕೆ ಅವಮಾನ: ಧ್ವಜ ತುಳಿದ ಯುವಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನವರಾತ್ರಿಯ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಮೊದಲ ದಿನದ ‘ದುರ್ಗಾಮಾತಾ ದೌಡ್‌’ನಲ್ಲಿ ಪಾಕಿಸ್ತಾನದ ಧ್ವಜವನ್ನು ನೆಲಕ್ಕೆ ಹಾಸಿ, ತುಳಿದುಕೊಂಡು ಓಡಲಾಗಿದೆ.

ಇಲ್ಲಿನ ಮಹಾದ್ವಾರ ರಸ್ತೆಯ ಮರಾಠಾ ಕಾಲೊನಿಯ ಓಣಿಯಲ್ಲಿ ಘಟನೆ ನಡೆದಿದೆ. ದುರ್ಗಾಮಾತಾ ದೌಡ್ (ಓಟ) ಮರಾಠಾ ಕಾಲೊನಿಗೆ ಬಂದಾಗ, ಮನೆಯೊಂದರ ಮುಂದೆ ರಂಗೋಲಿ ಹಾಕಿ, ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಅದರ ಮುಂದೆ ಪಾಕಿಸ್ತಾನದ ಧ್ವಜವನ್ನೂ ನೆಲಕ್ಕೆ ಹಾಸಲಾಯಿತು. ಅದರ ಹಿಂದೆ ಹಲವು ಯುವಕ– ಯುವತಿಯರು ಬಿಳಿ ವಸ್ತ್ರಧರಿಸಿ, ಕೇಸರಿ ಧ್ವಜಗಳನ್ನು ಹಿಡಿದು ನಿಂತಿದ್ದರು. ಮಹಿಳೆಯರು ತಿಲಕ ಇಟ್ಟು, ಆರತಿ ಬೆಳಿಗಿದ ತಕ್ಷಣ ಓಟ ಆರಂಭವಾಯಿತು. ಕೇಸರಿ ಧ್ವಜ ಹಿಡಿದು ಬಂದ ಒಬ್ಬೊಬ್ಬರೂ ಕೆಳಗೆ ಹಾಕಿದ್ದ ಪಾಕಿಸ್ತಾನ ಧ್ವಜವನ್ನು ತಿಳಿದುಕೊಂಡು ಮುಂದೆ ಓಡಿದರು.

ಇದರ ಕೆಲವು ವಿಡಿಯೊ, ಚಿತ್ರಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಎಚ್ಚೆತ್ತುಕೊಂಡ ಡಿಸಿಪಿ ರವೀಂದ್ರ ಗಡಾದಿ ಹಾಗೂ ಮಾರ್ಕೆಟ್‌ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆದರೆ, ಅಷ್ಟರೊಳಗೆ ದೌಡ್‌ನಲ್ಲಿದ್ದವರು ದೂರ ಹೋಗಿದ್ದರು. ಅಲ್ಲಿ ಬಿದ್ದಿದ್ದ ಧ್ವಜವನ್ನು ತೆರವು ಮಾಡಲಾಯಿತು.

ಯುವಪೀಳಿಗೆಯಲ್ಲಿ ದೇಶಪ್ರೇಮ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ನವರಾತ್ರಿಯ 9 ದಿನಗಳ ಕಾಲ ದುರ್ಗಾಮಾತೆ ಹೆಸರಿನಲ್ಲಿ ಓಟ ಏರ್ಪಡಿಸಲಾಗುತ್ತದೆ. ವಿವಿಧ ಹಿಂದೂ ಸಂಘಟನೆಗಳ ಮುಖಂಡರು, ಯುವಕ– ಯುವತಿಯರು ಧ್ವಜ ಹಿಡಿದು ನಗರದ ಪ್ರಮುಖ ರಸ್ತೆಗಲ್ಲಿ ಓಡುವುದು ಸಂಪ್ರದಾಯ.

ನಗರವೂ ಸೇರಿದಂತೆ ಜಿಲ್ಲೆಯ ಮೂಲೆಮೂಲೆಯಲ್ಲೂ ಈ ಸಂಪ್ರದಾಯ ಮುಖ್ಯ ಆಕರ್ಷಣೆಯಾಗಿದೆ. ಈ ಬಾರಿ ಕೂಡ ನಗರದಲ್ಲಿ ಅಪಾರ ಸಂಖ್ಯೆಯ ಯುವಜನರು ಇದರಲ್ಲಿ ಪಾಲ್ಗೊಂಡರು. ಪಾಕಿಸ್ತಾನ ಧ್ವಜವನ್ನು ತಿಳಿದು ದಾಟುತ್ತಿದ್ದಂತೆ ಜೈ ಶಿವಾಜಿ, ಜೈ ಭವಾನಿ, ದುರ್ಗಾಮಾತಾ ಕಿ ಜೈ... ಎಂಬ ಘೋಷಣೆ ಮೊಳಗಿಸಿದರು.

ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಸ್ಥಳದಲ್ಲಿ ಯಾವುದೇ ತರದ ಗೊಂದಲವಿಲ್ಲ. ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಾರ್ಕೆಟ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

 

ಸಾಂಪ್ರದಾಯಿಕ ಚಾಲನೆ:

ಕಳೆದ ಎರಡು ವರ್ಷಗಳಿಂದ ಸಂಕ್ಷಿಪ್ತವಾಗಿದ್ದ ದುರ್ಗಾಮಾತಾ ದೌಡ್‌; ಈ ಬಾರಿ ಮತ್ತೆ ವೈಭವ ಮರಳಿ ಪಡೆಯಿತು.‌ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆಯ ಜಿಲ್ಲಾ ಘಟಕದಿಂದ ಆಯೋಜಿಸಿದ ಓಟಕ್ಕೆ ಇಲ್ಲಿನ ಛತ್ರಪತಿ ಶಿವಾಜಿ ಉದ್ಯಾನದಲ್ಲಿ ಹಿರಿಯರು ದುರ್ಗೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಬಿಳಿ ವೇಷ ಧರಿಸಿ, ತಲೆಗೆ ಟೊಪ್ಪಿಗೆ ಹಾಕಿಕೊಂಡು ಸೊಂಟಕ್ಕೆ ಶಾಲು ಸುತ್ತಿಕೊಂಡು, ಕೇಸರಿ ಧ್ವಜಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದ ಯುವಕ– ಯುವತಿಯರು ದೌಡ್‌ನಲ್ಲಿ ಓಡಿದರು.

ಉದ್ಯಾನದಿಂದ ಹುಲಬತ್ತಿ ಕಾಲೊನಿ ರಸ್ತೆ, ಮಹಾತ್ಮ ಫುಲೆ ರಸ್ತೆ, ಎಸ್‌ಪಿಎಂ ರಸ್ತೆ, ಪಾಟಿದಾರ್‌ ಭವನ, ಗೂಡ್ಸ್‌ ಶೆಡ್‌ ರಸ್ತೆ, ಕಪಿಲೇಶ್ವರ ಕಾಲೊನಿ, ಶಾಸ್ತ್ರಿ ನಗರ, ಅಟ್ಲೆ ರೋಡ್, ಮಹಾದ್ವಾರ ರಸ್ತೆ, ಮಾಣಿಕಭಾಗ ರಸ್ತೆ, ಸಮರ್ಥ ನಗರ, ಸಂಭಾಜಿ ಗಲ್ಲಿ ಮೂಲಕ ಹಾದು ಮತ್ತೆ ಎಸ್‌ಪಿಎಂ ಮಾರ್ಗವಾಗಿ ಕಪಿಲೇಶ್ವರ ಮಂದಿರಕ್ಕೆ ಬಂದು ಮಧ್ಯಾಹ್ನ ಸಂಪನ್ನಗೊಂಡಿತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು