ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನ ನೀಡಲು ಆಗ್ರಹ

ಪಂಚಾಯ್ತಿಗಳ ಗ್ರಂಥಾಲಯಗಳ ನೌಕರರ ಪ್ರತಿಭಟನೆ
Last Updated 17 ಡಿಸೆಂಬರ್ 2018, 11:26 IST
ಅಕ್ಷರ ಗಾತ್ರ

ಬೆಳಗಾವಿ: ಕನಿಷ್ಠ ವೇತನ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ಗ್ರಾಮ ಪಂಚಾಯ್ತಿಗಳ ಗ್ರಂಥಾಲಯಗಳ ಮೇಲ್ವಿಚಾರಕರು, ಗ್ರಂಥಪಾಲಕರ ಸಂಘದವರು ಸೋಮವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ 6,635 ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರಿದ್ದೇವೆ. ₹ 300, ₹ 500, ₹ 750, ₹1000, ₹ 1500, ₹ 2500, ₹ 5500 ಗೌರವಧನ ನೀಡಲಾಗುತ್ತಿತ್ತು. ಪ್ರಸ್ತುತ ₹ 7,000 ನೀಡಲಾಗುತ್ತಿದೆ. ಇಷ್ಟು ಕಡಿಮೆ ಸಂಬಳದಲ್ಲಿ ಕುಟುಂಬದ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.

‘ಕಾರ್ಮಿಕ ಇಲಾಖೆಯು 2016ರ ಆಗಸ್ಟ್‌ನಲ್ಲಿ ಹೊರಡಿಸಿದ್ದ ಆದೇಶದ ಪ್ರಕಾರ ₹ 13,200 ಸಂಬಳ ನಿಗದಿಪಡಿಸಲಾಗಿತ್ತು. ಆದರೆ, 2017ರ ಸೆಪ್ಟೆಂಬರ್‌ನಲ್ಲಿ ಇದನ್ನು ರದ್ದುಪಡಿಸಿ, ಗ್ರಂಥಾಲಯದ ಸಮಯವನ್ನು ಬೆಳಿಗ್ಗೆ 2 ಗಂಟೆ ಹಾಗೂ ಸಂಜೆ 2 ಗಂಟೆ ಮಾತ್ರ ನಿಗದಿಪಡಿಸಲಾಗಿದೆ. 28 ವರ್ಷದಿಂದಲೂ ನಿತ್ಯ 8 ತಾಸು ಕೆಲಸದ ಸಮಯ ನಿಗದಿಪಡಿಸಲಾಗಿತ್ತು. ಈಗ ಕನಿಷ್ಠ ವೇತನ ಕೇಳುವುದನ್ನು ತಪ್ಪಿಸುವುದಕ್ಕಾಗಿ ದಿನಕ್ಕೆ 4 ಗಂಟೆಯನ್ನಷ್ಟೇ ಕೆಲಸದ ಸಮಯ ನಿಗದಿಪಡಿಸಲಗಿದೆ’ ಎಂದು ತಿಳಿಸಿದರು.

‘ಕನಿಷ್ಠ ವೇತನ ನೀಡಬೇಕು. ಈ ಹಿಂದಿನಂತೆ ದಿನಕ್ಕೆ 8 ತಾಸು ಕೆಲಸದ ಅವಧಿ ನಿಗದಿಪಡಿಸಬೇಕು. ದಿನಪತ್ರಿಕೆಗಳ ಮೊತ್ತವನ್ನು ಹೆಚ್ಚಿಸಬೇಕು. ಶುಚಿಗಾರರ ಭತ್ಯೆ ಹೆಚ್ಚಿಸಬೇಕು. ಗ್ರಂಥಾಲಯಗಳಿಗೆ ಕಟ್ಟಡಗಳನ್ನು ನಿರ್ಮಿಸಬೇಕು. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಒದಗಿಸಬೇಕು. ಅಕಾಲಿಕ ಮರಣ ಹೊಂದಿದವರ ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ಮೊತ್ತ ನೀಡಬೇಕು. ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರಿಗೆ ಕೆಲಸ ನೀಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಮ್ಮನ್ನು ಸುವರ್ಣ ವಿಧಾನಸೌಧದಲ್ಲಿ ಭೇಟಿಯಾದ ಪ್ರತಿನಿಧಿಗಳ ನಿಯೋಗದಿಂದ ಮನವಿ ಸ್ವೀಕರಿಸಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ‘ಬೇಡಿಕೆಗಳ ಈಡೇರಿಕೆ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಅಧ್ಯಕ್ಷ ಸದಾನಂದ ಪೂಜಾರಿ ಹಾಗೂ ಕಾರ್ಯದರ್ಶಿ ಮಾರುತಿ ಮಲ್ಲವಗೋಳ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT