ಗುರುವಾರ , ಮೇ 6, 2021
25 °C
ಹಲವು ತೊಂದರೆ; ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ ಸಂಸ್ಥೆಗಳು

ಬೆಳಗಾವಿ: ಉಲ್ಬಣಿಸಿದ ಪಾರ್ಕಿಂಗ್‌ ಪ್ರಾಬ್ಲಂ; ಜನರು ಹೈರಾಣ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದ ಬಹುತೇಕ ಕಡೆಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವುದು, ಪೈಪ್‌ಲೈನ್‌, ಯು.ಜಿ.ಕೇಬಲ್‌ ಅಳವಡಿಕೆ ಮೊದಲಾದ ಕಾಮಗಾರಿಗಳ ಕಾರಣಗಳಿಂದಾಗಿ ಪಾರ್ಕಿಂಗ್‌ ಪ್ರಾಬ್ಲಂ ಉಲ್ಬಣಿಸಿದೆ. ಇದರಿಂದಾಗಿ ಜನರು ಹಲವು ತೊಂದರೆಗಳನ್ನು ಎದುರಿಸುವಂತಾಗಿದೆ.

ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ನಗರದಲ್ಲಿ ಪಾರ್ಕಿಂಗ್ ಪ್ರಾಬ್ಲಂ ದಿನೇ ದಿನೇ ಕಡಿಮೆಯಾಗುವ ಬದಲಿಗೆ ಹೆಚ್ಚಾಗುತ್ತಲೇ ಸಾಗಿದೆ. ಇದರಿಂದಾಗಿ ವಾಹನಗಳ ಸವಾರರು, ಚಾಲಕರು ವಾಹನಗಳನ್ನು ನಿಲ್ಲಿಸುವುದಕ್ಕೆ ಜಾಗವಿಲ್ಲದೇ ಹೈರಾಣಾಗುತ್ತಿದ್ದಾರೆ.

ಪುಣೆ–ಬೆಂಗಳೂರು ರಸ್ತೆ ಕಡೆಯಿಂದ ಕೃಷ್ಣದೇವರಾಯ ವೃತ್ತದಿಂದ ರಾಣಿ ಚನ್ಮಮ್ಮ ವೃತ್ತದವರೆಗೆ, ಕಾಲೇಜು ರಸ್ತೆಯಿಂದ ಬೋಗಾರ್‌ವೇಸ್‌ ವೃತ್ತದವರೆಗೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ‘ವೈಟ್‌ ಟ್ಯಾಪಿಂಗ್‌’ ಕಾಮಗಾರಿ ನಡೆಯುತ್ತಿದೆ. ಒಂದು ಬದಿಯಲ್ಲಿ ಕಾಮಗಾರಿ ನಡೆದಿರುವುದರಿಂದ, ಆ ಭಾಗದಲ್ಲಿ ವಾಹನಗಳ ನಿಲುಗಡೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಆ ರಸ್ತೆಯಲ್ಲಿರುವ ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ಬರುವವರು ವಾಹನಗಳನ್ನು ನಿಲ್ಲಿಸುವುದಕ್ಕೆ ಸ್ಥಳಾವಕಾಶ ಲಭ್ಯವಿಲ್ಲದಂತಾಗಿದೆ. ಎಲ್ಲರೂ ಇನ್ನೊಂದು ಬದಿಯಲ್ಲಿ ಪಾರ್ಕ್‌ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವು ಕಡೆಗಳಲ್ಲಿ ರಸ್ತೆಯೇ ‘ಪಾರ್ಕಿಂಗ್‌ ಲಾಟ್‌’ ಆಗಿ ಹೋಗಿದೆ. ಇದರಿಂದಾಗಿ ಸುಗಮ ಸಂಚಾರಕ್ಕೆ  ಸಮಸ್ಯೆಯಾಗುತ್ತಿದೆ.

ಹೆಚ್ಚಿನ ತೊಂದರೆ

ಕಾಕತಿವೇಸ್‌, ಕಿರ್ಲೋಸ್ಕರ್‌ ರಸ್ತೆ, ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆ, ಸಮಾದೇವಿ ಗಲ್ಲಿ, ಖಡೇಬಜಾರ್, ಕಾಲೇಜು ರಸ್ತೆ, ಗಣಪತಿ ಗಲ್ಲಿ, ಕ್ಲಬ್‌ ರಸ್ತೆ, ಮಾರ್ಕೆಟ್‌ ಸುತ್ತಮುತ್ತಲಿನ ಪ್ರದೇಶ, ಹಳೇ ಪಿ.ಬಿ. ರಸ್ತೆ, ಕೇಂದ್ರ ಹಾಗೂ ನಗರ ಬಸ್‌ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶ, ಮಾರುತಿ ಗಲ್ಲಿ, ರಾಮದೇವ್‌ ಗಲ್ಲಿ, ಗೋಂದಳಿ ಗಲ್ಲಿ, ಆರ್‌ಟಿಒ ವೃತ್ತದ ಸುತ್ತಮುತ್ತ ಅನಿವಾರ್ಯವಾಗಿ ಎಲ್ಲೆಂದರಲ್ಲಿ, ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿ ಹೋಗಬೇಕಾದ ಸ್ಥಿತಿ ಇದೆ. ಮಾರುಕಟ್ಟೆ ಪ್ರದೇಶದಲ್ಲಂತೂ ರಸ್ತೆಗಳು ಕಿಷ್ಕಿಂದೆಯಂತೆ ಇರುವುದರಿಂದ ಕಾರ್‌ಗಳಿರಲಿ, ದ್ವಿಚಕ್ರ ವಾಹನಗಳಿಗೂ ಜಾಗ ಸಿಗುವುದಿಲ್ಲ. ಪಾರ್ಕಿಂಗ್‌ಗೆ ಜಾಗವೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಒಂದರ್ಥದಲ್ಲಿ ನಗರ ಬಾಧಿಸುತ್ತಿರುವ ‘ದೊಡ್ಡ ಸಮಸ್ಯೆ’ಯಾಗಿ ಇದು ‘ಬೆಳೆದು’ ನಿಂತಿದೆ.

ಕಟ್ಟಡ ಉಪವಿಧಿ (ಬಿಲ್ಡಿಂಗ್ ಬೈಲಾ) ಪ್ರಕಾರ, ಪಾರ್ಕಿಂಗ್‌ ಉದ್ದೇಶಕ್ಕೆಂದು ಅನುಮತಿ ಪಡೆದು ಕಟ್ಟಿದ ಬೇಸ್‌ಮೆಂಟ್‌ಗಳಲ್ಲಿ ವಾಹನಗಳ ನಿಲುಗಡೆಗೆ ಮಾತ್ರವೇ ಅವಕಾಶ ಇರಬೇಕು. ಆದರೆ, ಹಲವು ಕಡೆಗಳಲ್ಲಿ ಈ ನಿಯಮವನ್ನು ಗಾಳಿಗೆ ತೂರಿ, ಬೇಸ್‌ಮೆಂಟ್‌ ಅನ್ನು ರಾಜಾರೋಷವಾಗಿ ಅನ್ಯಉದ್ದೇಶಕ್ಕೆ ಬಳಸಲಾಗುತ್ತಿದೆ. ತೆರವು ಕಾರ್ಯಾಚರಣೆಗೆ ಹಲವು ವರ್ಷಗಳಿಂದಲೂ ‘ಗ್ರಹಣ’ ಹಿಡಿದಿದೆ. ಇದು ಕೂಡ ಪಾರ್ಕಿಂಗ್‌ ಪ್ರಾಬ್ಲಂಗೆ ತನ್ನದೇ ಆದ ‘ಕೊಡುಗೆ’ ನೀಡುತ್ತಿದೆ ಎನ್ನಲಾಗುತ್ತಿದೆ.

ಆಗಲೇ ಇಲ್ಲ

ಸಮಸ್ಯೆ ಪರಿಹಾರಕ್ಕಾಗಿ ನಗರಪಾಲಿಕೆಯಿಂದ ಮಲ್ಟಿಲೆವಲ್ ಪಾರ್ಕಿಂಗ್‌ ಲಾಟ್ ನಿರ್ಮಿಸಲು ಹಲವು ವರ್ಷಗಳ ಹಿಂದೆಯೇ ಯೋಜಿಸಲಾಗಿತ್ತು. ಆದರೆ, ಅದು ನಿರ್ಮಾಣವಾಗಲೇ ಇಲ್ಲ! ಖಡೇಬಜಾರ್‌ನಲ್ಲಿ ಸಂಜೆ ವೇಳೆ ಹೋದರೆ ದ್ವಿಚಕ್ರವಾಹನ ನಿಲ್ಲಿಸುವುದಕ್ಕೆ ಅಕ್ಷರಶಃ ಪರದಾಡಬೇಕಾದ ಸ್ಥಿತಿ ಇದೆ. ಸವಾರರು ಜಾಗ ಸಿಗುವವರೆಗೂ ಅತ್ತಿಂದಿತ್ತ ಓಡಾಡುತ್ತಲೇ ಇರುವುದು ಸಾಮಾನ್ಯವಾಗಿದೆ.

‘ನಗರದ ಹಲವು ಕಡೆಗಳಲ್ಲಿ ಪಾರ್ಕಿಂಗ್‌ಗೆ ನಿಗದಿತ ಜಾಗ ಗುರುತಿಸುವ ಕೆಲಸವಾಗಿಲ್ಲ. ಅನಿವಾರ್ಯವಾಗಿ ಜಾಗ ಸಿಕ್ಕಲ್ಲಿ ವಾಹನ ನಿಲ್ಲಿಸಬೇಕಾಗಿದೆ. ಆದರೆ, ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಇದು ಖಂಡನೀಯ. ಮೊದಲು ಪಾರ್ಕಿಂಗ್‌ಗೆ ಸಮರ್ಪಕ ವ್ಯವಸ್ಥೆ ಮಾಡಲಿ. ನಂತರ ದಂಡಾಸ್ತ್ರ ಪ್ರಯೋಗಿಸಲಿ’ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಪಾಲಿಕೆ–ಪೊಲೀಸ್ ಇಲಾಖೆ ನಡುವೆ ಸಮನ್ವಯದ ಕೊರತೆ ಕಂಡುಬರುತ್ತಿದೆ. ಸ್ಥಳೀಯ ಸಂಸ್ಥೆಯಾದ ನಗರಪಾಲಿಕೆಯವರು ಸಮಸ್ಯೆ ಪರಿಹರಿಸಲು ಕ್ರಮ ವಹಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಾಗದ ತೊಂದರೆ!

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸ್ಮಾರ್ಟ್ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ, ‘ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ‌ಬಾಪಟ್‌ ಗಲ್ಲಿಯಲ್ಲಿ ಮಲ್ಟಿಲೆವಲ್‌ ಪಾರ್ಕಿಂಗ್‌ ತಾಣ ನಿರ್ಮಾಣಕ್ಕೆ ಜಾಗ ನೀಡುವಂತೆ ಪಾಲಿಕೆಯನ್ನು ಕೋರಲಾಗಿದೆ. ಎಲ್ಲಿ ಅವಶ್ಯವಿದೆಯೋ ಅಲ್ಲಿ ನಿರ್ಮಾಣಕ್ಕೆ ಜಾಗ ದೊರೆಯುತ್ತಿಲ್ಲ’ ಎಂದು ತಿಳಿಸಿದರು.

‘ತಿಲಕವಾಡಿ ಮೊದಲನೇ ರೈಲು ಗೇಟ್‌ ಬಳಿ ಪಾಲಿಕೆಗೆ ಸೇರಿದ 25 ಗುಂಟೆ ಜಾಗವಿದ್ದು, ಅದನ್ನೂ ಕೇಳಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಯಲ್ಲಿ ₹ 15 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ದಂಡು ಮಂಡಳಿ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲೂ ಜಾಗ ಕೇಳಿದ್ದೇವೆ. ಅಲ್ಲಿ ಜಾಗ ಕೊಟ್ಟರೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು. ಆಗ, ಜನರಿಗೆ ತೊಂದರೆ ತಪ್ಪಲಿದೆ. ಸಂಚಾರ ವ್ಯವಸ್ಥೆಯೂ ಸುಗಮಗೊಳ್ಳಲಿದೆ’ ಎನ್ನುತ್ತಾರೆ ಅವರು.

***

ಮಾರುಕಟ್ಟೆಯೊಳಕ್ಕೆ ಕಾರ್‌ ತೆಗೆದುಕೊಂಡು ಹೋಗುವುದಕ್ಕೆ ಆಗುತ್ತಿಲ್ಲ. ಹೊರಗಡೆ ಎಲ್ಲಿ ಜಾಗವಿದೆಯೋ ಅಲ್ಲಿ ನಿಲ್ಲಿಸಿ ಹೋಗಬೇಕಾಗಿದೆ. ಹೀಗಾಗಿ, ಮಾರುಕಟ್ಟೆಯಿಂದ ವಸ್ತುಗಳನ್ನು ಹೊತ್ತುಕೊಂಡು ಬರಬೇಕಾಗಿದೆ. ಕಡೋಲ್ಕರ್‌ ಗಲ್ಲಿ ಕಾರ್‌ ಪಾರ್ಕಿಂಗ್‌ ಖಾಲಿ ಮಾಡಿಸಿ, ಬಹುಮಹಡಿ ಪಾರ್ಕಿಂಗ್‌ ಮಾಡಿದರೆ ಅನುಕೂಲ ಆಗುತ್ತದೆ. ಬೇಸ್‌ಮೆಂಟ್‌ಗಳನ್ನು ಅನ್ಯ ಉದ್ದೇಶಕ್ಕೆ ಬಳಸುವುದನ್ನು ತಡೆಯಬೇಕು.

-ಅಶೋಕ ಧರಿಗೌಡರ, ಎಚ್‌.ಡಿ. ಕುಮಾರಸ್ವಾಮಿ ಬಡಾವಣೆ

***

ಅಲ್ಲಲ್ಲಿ ಮಲ್ಟಿಲೆವಲ್‌ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕು. ಹೊರವಲಯದಲ್ಲಿ ಅಭಿವೃದ್ಧಿಯಾದರೆ, ನಗರದ ಹೃದಯ ಭಾಗಕ್ಕೆ ಬರುವವರು ಕಡಿಮೆಯಾಗುತ್ತಾರೆ.

-ವಜ್ರಕಾಂತ ಸಾಲಿಮಠ, ರಾಮತೀರ್ಥ ನಗರ

***

ಅಂಗಡಿಗಳಿಗೆ ವಿವಿಧೆಡೆಯಿಂದ ಸರಕುಗಳನ್ನು ಹೊತ್ತು ತರುವ ಗೂಡ್ಸ್‌ ವಾಹನಗಳಿಗೆ ಮುಂಜಾನೆ ಸಮಯ ನಿಗದಿಪಡಿಸಬೇಕು. ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಮುಖ್ಯ ರಸ್ತೆಗಳಲ್ಲಿ ತಳ್ಳುಗಾಡಿಗಳನ್ನು ಇಟ್ಟುಕೊಳ್ಳುವವರಿಗೆ ಪ್ರತ್ಯೇಕವಾಗಿ ಸ್ಥಳ ನಿಗದಿಪಡಿಸಬೇಕು. ಆಗ, ಪಾರ್ಕಿಂಗ್‌ ಸಮಸ್ಯೆ ನಿವಾರಿಸಬಹುದು.

-ನಾನಾಗೌಡ ಬಿರಾದಾರ, ನಾಗರಿಕ

***

ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಲ್ಲಲ್ಲಿ ಪಾರ್ಕಿಂಗ್‌ ತಾಣಗಳನ್ನು ನಿರ್ಮಿಸುವ ಯೋಜನೆ ಇದೆ. ಆಗ, ಸಮಸ್ಯೆಗೆ ಪರಿಹಾರ ದೊರೆಯಲಿದೆ. ಮುಂದಿನ ದಿನಗಳಲ್ಲಿ ಅವೈಜ್ಞಾನಿಕವಾಗಿ ವಾಹನಗಳನ್ನು ನಿಲುಗಡೆ ಮಾಡುವವರ ವಿರುದ್ಧ ಕ್ರಮ ವಹಿಸುವುದಕ್ಕಾಗಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ದಂಡ ವಿಧಿಸಲು ಯೋಜಿಸಲಾಗಿದೆ.

-ಶಶಿಧರ ಕುರೇರ, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್‌ ಸಿಟಿ ಕಂಪನಿ

***

ನಗರದಲ್ಲಿ ಪಾರ್ಕಿಂಗ್‌ಗೆ ತೊಂದರೆಯಾಗುತ್ತಿರುವುದು ಗಮನದಲ್ಲಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಲ್ಲಲ್ಲಿ ಮಲ್ಪಿಲೆವಲ್‌ ಕಾರ್‌ ಪಾರ್ಕಿಂಗ್‌ಗೆ ಜಾಗ ಕೋರಲಾಗಿದೆ. ಕೊಡುವ ಬಗ್ಗೆ ಆಡಳಿತಾಧಿಕಾರಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ಬೇಸ್‌ಮೆಂಟ್‌ಗಳ ಸಮೀಕ್ಷೆ ನಡೆಸಿದ್ದರ ಮಾಹಿತಿ ಇಲ್ಲ. ಅಧಿಕಾರಿಗಳಿಂದ ವಿವರ ಪಡೆದು ಕ್ರಮ ಕೈಗೊಳ್ಳಲಾಗುವುದು.

-ಕೆ.ಎಚ್. ಜಗದೀಶ್, ಆಯುಕ್ತರು, ನಗರಪಾಲಿಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು