ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ತಕ್ಷಣ ಪಾವತಿಸಲು ಸೂಚನೆ

ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಡಿಸಿ ಬೊಮ್ಮನಹಳ್ಳಿ ಸಭೆ
Last Updated 17 ಅಕ್ಟೋಬರ್ 2018, 12:11 IST
ಅಕ್ಷರ ಗಾತ್ರ

ಬೆಳಗಾವಿ: ಕಬ್ಬು ಪೂರೈಸಿದ ರೈತರಿಗೆ ಕೊಡಬೇಕಾದ ಬಾಕಿಯನ್ನು ಕೂಡಲೇ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈತರ ಶ್ರಮದ ಫಲವಾಗಿ ಕಾರ್ಖಾನೆಗಳಿಗೆ ಸಾಕಷ್ಟು ಕಬ್ಬು ಪೂರೈಕೆ ಆಗುತ್ತಿದೆ. ಇದನ್ನು ಅರಿಯಬೇಕು. ಕೆಲವು ಕಾರ್ಖಾನೆಗಳು ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಬಾಕಿ ಪಾವತಿಗೆ ಕೋರಿ ಕಾರ್ಖಾನೆಗೆ ಬರುವ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದು ತಿಳಿಸಿದರು.

‌‘ಸರ್ಕಾರ ರೂಪಿಸಿರುವ ನಿಯಮಾವಳಿ ಮತ್ತು ನಿಗದಿಪಡಿಸಿದ ದರದ ಪ್ರಕಾರವೇ ಕಾರ್ಖಾನೆಗಳು ಬಿಲ್ ಪಾವತಿಸಬೇಕು. ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ನುರಿಸುವುದನ್ನು ತಕ್ಷಣ ಆರಂಭಿಸಬೇಕು. ಇದೇ ವೇಳೆಗೆ ಹಳೆಯ ಬಾಕಿಯನ್ನೂ ಪಾವತಿಸಬೇಕು’ ಎಂದು ತಾಕೀತು ಮಾಡಿದರು.

ವಿಳಂಬ ಸಲ್ಲದು:
ಮಲಪ್ರಭಾ, ಘಟಪ್ರಭಾ ಹಾಗೂ ಸೋಮೇಶ್ವರ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಅವರು, ‘ಯಾವುದೇ ಕಾರಣಕ್ಕೂ ಹಣ ಪಾವತಿಸಲು ವಿಳಂಬ ಮಾಡಬಾರದು’ ಎಂದು ಹೇಳಿದರು.

ಪ್ರತಿಕ್ರಿಯಿಸಿದ ಕಾರ್ಖಾನೆಗಳ ಪ್ರತಿನಿಧಿಗಳು, ‘ಅ. 25ರ ಒಳಗೆ ಬಿಲ್ ಪಾವತಿಸಲಾಗುವುದು. ಸಕ್ಕರೆ ದರ ಇಳಿಕೆಯಾದ್ದರಿಂದ ಪೂರ್ಣ ಬಿಲ್ ಪಾವತಿ ಸಾಧ್ಯವಾಗಿರಲಿಲ್ಲ’ ಎಂದು ತಿಳಿಸಿದರು.

‘ಪೂರ್ತಿ ಹಣ ಪಾವತಿಸಿರುವ ಬಗ್ಗೆ ಪ್ರಮಾಣಪತ್ರ ನೀಡಿದ ಬಳಿಕವೇ ಪರವಾನಗಿ ನವೀಕರಣಕ್ಕೆ ಅವಕಾಶ ಇದೆ. ಮುಂಬರುವ ದಿನಗಳಲ್ಲಿ ಕಾರ್ಖಾನೆಗಳವರು ತಮ್ಮ ಉತ್ಪಾದನೆಗೆ ತಕ್ಕಂತೆ ಸಕ್ಕರೆ ಸಂಸ್ಥೆಗೆ ಹಣ ಪಾವತಿಸಿದ ಬಳಿಕವೇ ಪ್ರಮಾಣಪತ್ರ ನೀಡಬೇಕು’ ಎಂದು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯವರಿಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರವೀಣ ಬಾಗೇವಾಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸೈಯದ್ ಬಾನು ಅಫ್ರೀನ್ ಬಳ್ಳಾರಿ ಇದ್ದರು.

ಸಭೆಗೆ ರೈತ ಪ್ರತಿನಿಧಿಗಳನ್ನು ಅಹ್ವಾನಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT