ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಿಗ ನಾ ನಿನ್ನ ನಂಬಿದೆ...

ಅಂಬಿಗನ ನಂಬಿದವರು
Last Updated 19 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅವತ್ತು ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಯಿತು. ಕೊಯ್ನಾ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಟ್ಟರು. ಕೃಷ್ಣಾ ನದಿ ಉಕ್ಕಿ ಹರಿಯಿತು. ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ಕಾಗವಾಡ, ರಾಯಭಾಗ ತಾಲ್ಲೂಕುಗಳ ನದಿ ತೀರದ 86 ಹಳ್ಳಿಗಳಿಗೆ ಜಲದಿಗ್ಭಂದನ. ನದಿ ಪಾತ್ರಗಳಲ್ಲಿರುವ ತೋಟಗಳಲ್ಲೇ ನೆಲೆಸಿದ್ದ ಕುಟುಂಬಗಳು ಅತಂತ್ರವಾದವು. ಅಪಾಯದಲ್ಲಿರುವವರನ್ನು ರಕ್ಷಿಸುವಂತೆ ‘ರಕ್ಷಣಾ ತಂಡಗಳಿಗೆ’ ಮಾಹಿತಿ ಹೋಯಿತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿ ಸೇನೆ ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧರಾಗುತ್ತಿದ್ದರು. ಅಷ್ಟರಲ್ಲಾಗಲೇ ಕಾರ್ಯಾಚರಣೆಗಿಳಿದ ‘ಸಮವಸ್ತ್ರ ರಹಿತ ಯೋಧರು’ ನೂರಾರು ಕುಟುಂಬಗಳನ್ನು ದಡ ತಲುಪಿಸಿದರು. ಅವರೇ ನಮ್ಮ ಅಂಬಿಗರು!

ಅದು ಅಥಣಿ ತಾಲ್ಲೂಕಿನ ನದಿಇಂಗಳಗಾಂವ ಗ್ರಾಮ. ಅಲ್ಲಿಂದ ಅರ್ಧ ಕಿ.ಮೀ. ಸಾಗಿದರೆ ಸಿಗುವುದೇ ಪೇರಲತೋಟ. ಅಲ್ಲಿ ನೂರಾರು ಮಂದಿ ತಮ್ಮ ಜಮೀನುಗಳಲ್ಲೇ ವಾಸವಿದ್ದರು. ಉಕ್ಕಿದ ಕೃಷ್ಣಾ ನದಿ ಆಳೆತ್ತರ ಬೆಳೆದಿದ್ದ ಕಬ್ಬಿನ ಗದ್ದೆಗಳನ್ನು ಸುತ್ತುವರಿದು, ತೋಟಗಳಲ್ಲಿ ವಾಸವಿದ್ದವರ ಮನೆಗಳ ಬಾಗಿಲಿಗೂ ಬಂದು ನಿಂತಿತ್ತು. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಜನ ಕಂಗಾಲಾಗಿದ್ದರು. ಆಗ ಅಂಬಿಗರಾದ ಬಸವರಾಜ ಅಂಬಿ, ಅಣ್ಣಪ್ಪ ಅಂಬಿ, ತೋಟದ ಬಳಿ ದೋಣಿ ಕೊಂಡೊಯ್ದು ನಿಲ್ಲಿಸಿದರು. ತೋಟದಲ್ಲಿ ವಾಸವಿದ್ದ ಜನರನ್ನು ದೋಣಿಗೆ ಹತ್ತಿಸಿಕೊಂಡರು. 15 ರಿಂದ 20 ಮಂದಿಯಿದ್ದ ದೋಣಿಯನ್ನು ಇಬ್ಬರೇ ಹುಟ್ಟು ಹಾಕುತ್ತಾ ಮುನ್ನಡೆಸುತ್ತಿದ್ದರು.

ಪೇರಲತೋಟದ ನಿವಾಸಿಗಳ ಸ್ಥಿತಿ ನೋಡಲು ಹೋಗಿದ್ದ ನಾವು ಅದೇ ದೋಣಿ ಯಲ್ಲಿದ್ದೆವು. ನದಿಯಲ್ಲಿ ನೀರು ಹರಿವ ಪ್ರಮಾಣ ಹೆಚ್ಚಾಗಿ ದೋಣಿ ದಿಕ್ಕು ಬದಲಿಸುತ್ತಾ, ಎತ್ತೆತ್ತಲೋ ಸಾಗುತ್ತಿತ್ತು. ಒಮ್ಮೊಮ್ಮೆ ಇನ್ನೇನು ಮಗುಚಿಕೊಂಡೇಬಿಟ್ಟಿತು ಎಂಬ ಭಯ ಕಾಡಿತು. ಆದರೂ, ದೋಣಿ ಬ್ಯಾಲೆನ್ಸ್‌ ಮಾಡುತ್ತಾ ನಮ್ಮನ್ನೆಲ್ಲ ದಡ ಸೇರಿಸಿದರು. ಸಹಪಯಣಿಗರೂ ಹರಿಗೋಲಿನಿಂದ ಹುಟ್ಟು ಹಾಕುತ್ತಾ ಅವರಿಗೆ ಸಾಥ್ ನೀಡುತ್ತಿದ್ದರು, ತಮ್ಮ ಪ್ರಾಣ ಉಳಿಸಿಕೊಳ್ಳುವ ಧಾವಂತದಲ್ಲಿ!’

ಹೀಗೆ ಪ್ರಾಣದ ಹಂಗು ತೊರೆದು ಇಡೀ ದಿನ ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ, ಪರಿಹಾರ ಕೇಂದ್ರಗಳಿಗೆ ತಲುಪಿಸಿದವರು ಅಂಬಿಗರು. ಇದರಲ್ಲಿ ಬಾಣಂತಿಯರು, ಗರ್ಭಿಣಿಯರು, ಮಕ್ಕಳು, ವೃದ್ಧರು ಎಲ್ಲರೂ ಇದ್ದರು. ಈ ‘ಸೇವಾ ಕಾರ್ಯ’ದಲ್ಲಿ ಕೈಜೋಡಿಸಿದ ಅಪ್ಪಾಸಾಹೇಬ ಅಂಬಿಗೇರ, ಶಿವಾನಂದ ಅಂಬಿ, ಬಾಬಾಸಾಹೇಬ ಅಂಬಿ, ಭರಮು ಅಂಬಿ, ಅಶೋಕ ಅಂಬಿ, ರಾವಸಾಹೇಬ ಅಂಬಿ, ಮುಕುಂದ ಅಂಬಿ, ವಿಶ್ವನಾಥ ಅಂಬಿ, ರಾವಸಾಬ ಅಂಬಿ, ಧನಂಜಯ ಅಂಬಿ, ಬಸವರಾಜ ಅಂಬಿ, ಅಣ್ಣಪ್ಪ ಅಂಬಿಯಂತಹವರ ಸೇವೆ ಸ್ಮರಣಾರ್ಹ.

2005ರಲ್ಲಿ ನೆರೆ ಬಂದಾಗಲೂ ಇದೇ ಅಂಬಿಗರ ತಂಡ, ಹಳೆಯ ಮತ್ತು ಬಹುತೇಕ ದುಃಸ್ಥಿತಿಯಲ್ಲಿರುವ ದೋಣಿಗಳನ್ನೇ ಬಳಸಿಕೊಂಡು ಸಾವಿರಾರು ಮಂದಿಯನ್ನು ಕಾಪಾಡಿದ್ದಾರೆ. ಬಹಳ ಶ್ರಮದ ಈ ಕೆಲಸವನ್ನು ಶ್ರದ್ಧೆಯಿಂದ ಮಾಡಿ; ಸ್ಥಳೀಯರ ಕೈಹಿಡಿದಿದ್ದಾರೆ.

ಈ ದೋಣಿ ನಡೆಸುವ ನಾವಿಕರಲ್ಲಿ ಬಹುತೇಕರು ಆಯಾ ಗ್ರಾಮದವರೇ ಆಗಿರುತ್ತಾರೆ. ಹೀಗಾಗಿ ಪ್ರವಾಹದ ಮುನ್ಸೂಚನೆ ಸಿಕ್ಕ ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗುತ್ತಾರೆ. ಪ್ರವಾಹ ಹೆಚ್ಚಾದ ಬಳಿಕವಷ್ಟೇ ಸೇನೆ, ಅಗ್ನಿಶಾಮಕ ದಳದವರು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ನವರು ಬಲೂನ್‌ ಬೋಟ್, ಅಲ್ಯೂಮಿನಿಯಂ ಬೋಟ್‌ಗಳೊಂದಿಗೆ ಬರುವುದು. ಹೀಗಾಗಿ ನದಿ ಪಾತ್ರದ ಮಂದಿಗೆ ಅಂಬಿಗರೇ ಆಪತ್ಭಾಂದವರು, ಆಪ್ತರಕ್ಷಕರು !

ಇಷ್ಟೆಲ್ಲ ಜೀವವನ್ನು ಪಣಕ್ಕಿಟ್ಟು ನೂರಾರು ಮಂದಿಯನ್ನು ರಕ್ಷಿಸುವ ಅಂಬಿಗರಿಗೆ ಸೂಕ್ತವಾದ ‘ಲೈಫ್ ಜಾಕೆಟ್’ಗಳಿಲ್ಲ. ಯಾಂತ್ರಿಕ ದೋಣಿಗಳಿಲ್ಲ. ಮಾನವಚಾಲಿತ ಮರದ ಹಳೆಯ ಬೋಟುಗಳೇ ಇವರಿಗೆ ಆಧಾರ. ಇಂಥವರಿಗೆ ಯಾಂತ್ರಿಕ ದೋಣಿಗಳನ್ನು ಒದಗಿಸಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ.

ಈ ಬಾರಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ನಾಲ್ಕುನೂರು ಮಂದಿಯನ್ನು ರಕ್ಷಿಸಿದ್ದಾರೆ ಅಂಬಿಗರು. ಅಷ್ಟೇ ಪ್ರಮಾಣದ ಜಾನುವಾರು ಗಳನ್ನೂ ಸ್ಥಳಾಂತರಿಸಿದ್ದಾರೆ. ಆದರೂ, ಯೋಧರಿಗೆ ಸಿಕ್ಕಿದಷ್ಟು ‘ಗೌರವ’ಗಳು ತಮ್ಮ ಜೀವಪಣಕ್ಕಿಟ್ಟು ಇನ್ನೊಬ್ಬರ ಜೀವ ರಕ್ಷಿಸುವ ಅಂಬಿಗರಿಗೆ ಸಿಗಲಿಲ್ಲ. ಕಾಗವಾಡ ತಾಲ್ಲೂಕಿನ ಜುಗೂಳದ ಜನರು ಸ್ವಾತಂತ್ರ್ಯೋತ್ಸವದಂದು ಧ್ವಜರೋಹಣ ನೆರವೇರಿಸುವ ಅವಕಾಶ ನೀಡಿ ಗೌರವ ಸಲ್ಲಿಸಿದ್ದು ಬಿಟ್ಟರೆ, ಇವರಿಗ್ಯಾರೂ ರಾಕಿ ಕಟ್ಟಲಿಲ್ಲ. ಹಬ್ಬದ ಊಟ ಬಡಿಸಲಿಲ್ಲ. ಆದರೆ, ಪರಿಹಾರ ಕೇಂದ್ರಗಳಲ್ಲಿರುವ ನೂರಾರು ಮಂದಿ ತಮ್ಮನ್ನು ಕಾಪಾಡಿದ ಅಂಬಿಗರು ಚೆನ್ನಾಗಿರಲಿ ಎಂದು ಹಾರೈಸುತ್ತಿದ್ದಾರೆ. ‘ನಮಗೆ ಅಷ್ಟು ಸಾಕು ಬಿಡಿ’ ಎನ್ನುವಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಅಂಬಿಗರು.

ಇವರ ಸೇವೆಯನ್ನು ಕಂಡಾಗ ಪುರಂದರ ದಾಸರ ‘ಅಂಬಿಗ ನಾ ನಿನ್ನ ನಂಬಿದೆ...’ ಕೀರ್ತನೆಯ ಈ ಕೆಳಗಿನ ಸಾಲುಗಳು ನೆನಪಾಗುತ್ತಲೇ ಇದ್ದವು..

ಆರು ತೆರೆಯ ನೋಡಂಬಿಗ,

ಅದು ಮೀರಿ ಬರುತಲಿದೆ ಅಂಬಿಗ,

ಯಾರಿಂದಲಾಗದು ಅಂಬಿಗ,

ಅದ ನಿವಾರಿಸಿ ದಾಟಿಸೋ ಅಂಬಿಗ...

* ‘ನದಿ ಉಕ್ಕಿದಾಗ, ಪ್ರವಾಹ ಬಂದಾಗ ಉಚಿತವಾಗಿ ಪರಿಹಾರ ಕಾರ್ಯ ಮಾಡುತ್ತೇವೆ. ಯಾರಿಂದಲೂ ಹಣ ಕೇಳುವುದಿಲ್ಲ. ನಮ್ಮ ತಂದೆ ಕಾಲದಿಂದಲೂ ಹೀಗೆಯೇ ನಡೆದುಕೊಂಡು ಬಂದಿದೆ. ಈ ಬಾರಿ 400ಕ್ಕೂ ಹೆಚ್ಚು ಜನರು, ನಡುಗಡ್ಡೆಯಲ್ಲಿ ಸಿಲುಕಿದ್ದ 400ಕ್ಕೂ ಹೆಚ್ಚಿನ ಜಾನುವಾರುಗಳನ್ನು ದೋಣಿಯಲ್ಲಿ ಹಾಕಿಕೊಂಡು ದಡ ಸೇರಿಸಿದ್ದೇವೆ. ಗ್ರಾಮ ಪಂಚಾಯ್ತಿಯವರು ಅವರಾಗಿಯೇ ಹಣ ಕೊಟ್ಟರೆ ತೆಗೆದುಕೊಳ್ಳುತ್ತೇವೆ’

- ಧನಂಜಯ ಅಂಬಿ, ಕೃಷ್ಣಾಕಿತ್ತೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT