ಬುಧವಾರ, ಸೆಪ್ಟೆಂಬರ್ 18, 2019
25 °C
ದೇವರಲ್ಲಿ ಮೊರೆ ಇಡುತ್ತಿರುವ ನದಿತೀರದ ವಾಸಿಗಳು

ನೀರು ಕಡಿಮೆಯಾಗಲೆಂದು ಪ್ರಾರ್ಥನೆ!

Published:
Updated:
Prajavani

ಚಿಕ್ಕೋಡಿ: ‘ಹಿರಿ ಹೊಳಿ ಹೊಲಾಮನಿ ಹೊಕ್ಕು ಕೊಚ್ಚಿಕೊಂಡ್ ಹೋಗಿದ್‌ ಬದುಕ್‌ ಕಟ್ಕೋಳಾಕ್‌ ಹತ್ತೇವಿ. ಅಷ್ಟಾರಾಗ್‌ ನಮ್ಮವ್ವ ಕೃಷ್ಣವ್ವ ಮತ್‌ ಕೋಪಿಸೀಕೊಳ್ಳಾಕ್ ಹತ್ಯಾಳ್‌. ಇದ್ರಿಂದ್‌ ನಮಗ್‌ ಮತ್‌ ಹೆದರಿಕಿ ಆಗಾಕತೈತ್ರೀ. ಹಿರಿಹೊಳಿ ಹರಿವ್‌ ಕಡಮಿ ಆಗಲೆಂತ್‌ ದೇವರ್ರನ್‌ ಬೇಡಾಕತೇವಿ..!’

ತಿಂಗಳ ಹಿಂದಷ್ಟೇ ಕೃಷ್ಣಾ ನದಿ ಮಹಾಪೂರದ ಕಹಿ ಅನುಭವ ಕಂಡ ತಾಲ್ಲೂಕಿನ ಕಲ್ಲೋಳ ಗ್ರಾಮದ ನೆರೆ ಸಂತ್ರಸ್ತೆ ಶೋಭಾ ತುಕಾರಾಮ್ ಕೋಳಿ ಹೇಳಿದ ಆತಂಕದ ಮಾತುಗಳಿವು.

‘ನಾವ್ ಎಂದೂ ಕಂಡ್ ಕಾಣದ ಮಹಾಪೂರ್‌ದಾಗ ಹತ್ತಾರ್‌ ವರ್ಷಾ ದುಡಿದ್‌ ಕಟ್ಟಿಕೊಂಡಿದ್‌ ಬದುಕ ಕೊಚ್ಚಿ ಹೋಗೈತೀ. ಇನ್ನೊಂದ್‌ ಪೂರ ಸಹಿಸೋ ಶಕ್ತಿ ನಮಗಿಲ್ಲ. ಆದ್ರ, ಮತ್‌ ಮಳಿ ಹೆಚ್ಚಾಗ್‌ ಹತೈತೀ. ಹಿರಿಹೊಳಿನೂ ಒಡಲ ತುಂಬಿ ಹರ್‍ಯಾಕ್‌ ಹತೈತೀ. ಇದಾ ರೀತಿ ಮಳಿ ಹೆಚ್ಚಾಗತ್ತಾ ಹೋದ್ರ ಅನ್ನೋ ಆತಂಕ ಎದರಾಗ್‌ ಹತೈತಿ’ ಎಂದು ನೋವಿನಿಂದ ಹೇಳಿದರು.

ಆಗಸ್ಟ್‌ನಲ್ಲಿ ಉಂಟಾದ ನೆರೆಯಿಂದ ನಲುಗಿದ್ದ ನದಿ ತೀರದ ಗ್ರಾಮಸ್ಥರು ಆ ಕಹಿ ಅನುಭವಗಳಿಂದ ಇನ್ನೂ ಹೊರಬಂದಿಲ್ಲ. ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ನಡುವೆಯೇ ಮತ್ತೆ ಕೃಷ್ಣಾ, ದೂಧ್‌ಗಂಗಾ, ವೇದಗಂಗಾ, ಪಂಚಗಂಗಾ ನದಿಗಳು ಸೊಕ್ಕೇರಿ ಹರಿಯಲಾರಂಭಿಸಿವೆ. ಇದರಿಂದ ಸಂತ್ರಸ್ತರಲ್ಲಿ ದುಗುಡ ಮನೆ ಮಾಡಿದೆ.

‘ಕಳೆದ ತಿಂಗಳು 20 ದಿನಗಳಿಗೂ ಹೆಚ್ಚು ಕಾಲ ಕೃಷ್ಣಾ ನದಿ ಪ್ರವಾಹ ಉಂಟಾಗಿದ್ದರಿಂದ ಮನೆ ಬಿಟ್ಟು, ದನಕರುಗಳೊಂದಿಗೆ ಸಂಬಂಧಿಕರ ಮನೆಗಳಿಗೂ, ಪರಿಹಾರ ಕೇಂದ್ರಗಳಲ್ಲೂ ಆಸರೆ ಪಡೆದಿದ್ದೆವು. ಗ್ರಾಮಕ್ಕೆ ಬಂದು ವಾರವೂ ಆಗಿಲ್ಲ. ನೆರೆ ಪೀಡಿತ ಗ್ರಾಮಗಳು ಇದೀಗ ಸಹಜ ಸ್ಥಿತಿಗೆ ಮರಳುತ್ತಿವೆ. ಸರ್ಕಾರ ತುರ್ತು ಪರಿಹಾರವಾಗಿ ನೀಡಿದ ₹ 10ಸಾವಿರ ಹಣವನ್ನು ಪರ ಸ್ಥಳಗಳಿಗೆ ಸಾಗಿಸಿದ್ದ ಜಾನುವಾರುಗಳನ್ನು ಸ್ಥಳಾಂತರಿಸಲು, ಮನೆ ಖರ್ಚಿಗೆ ಬಳಸಿಕೊಂಡಿದ್ದಾರೆ. ಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಅಷ್ಟರಲ್ಲೇ ಮತ್ತೆ ಮಳೆ ಆರ್ಭಟ ಹೆಚ್ಚಾಗುತ್ತಿದೆ. ಈಗಲೂ ಪ್ರವಾಹ ಎದುರಾದರೆ ಹೇಗೆ ಎಂಬ ಆತಂಕ ಕಾಡುತ್ತಿದೆ’ ಎಂದು ಸಂತ್ರಸ್ತ ರಾಜೇಂದ್ರ ಪಟ್ಟಣಕುಡೆ ಅಳಲು ತೋಡಿಕೊಂಡರು.

ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದೆ. ಅಲ್ಲಿನ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಪರಿಣಾಮ, ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಹರಿವಿನಲ್ಲಿ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಬಿಡುಗಡೆ ಮಾಡಲಾದ 70ಸಾವಿರ ಕ್ಯುಸೆಕ್‌ ನೀರು ಸೇರಿದಂತೆ ರಾಜಾಪುರ ಬ್ಯಾರೇಜ್‌ನಿಂದ 1.10 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರುತ್ತಿದೆ. ಅದರೊಂದಿಗೆ ದೂಧ್‌ಗಂಗಾ ಮತ್ತು ವೇದಗಂಗಾ ನದಿಗಳಿಂದ ಹರಿದು ಬರುತ್ತಿರುವ 19ಸಾವಿರ ಕ್ಯುಸೆಕ್‌ ನೀರು ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 1.29 ಲಕ್ಷ ಕ್ಯುಸೆಕ್‌ ನೀರು ಸೇರುತ್ತಿದೆ.

ತಾಲ್ಲೂಕಿನ ಕಲ್ಲೋಳ–ಯಡೂರ ಮಧ್ಯೆ ಕೃಷ್ಣಾ ನದಿಗಿರುವ ಕೆಳಮಟ್ಟದ ಸೇತುವೆಯಲ್ಲಿ 15 ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದ 4 ಅಡಿಗಳಷ್ಟು ಏರಿಕೆಯಾಗಿದೆ. ದೂಧ್‌ಗಂಗಾ ನದಿಗೆ ಅಡ್ಡಲಾಗಿರುವ ತಾಲ್ಲೂಕಿನ ಮಲಿಕವಾಡ–ದತ್ತವಾಡ, ನಿಪ್ಪಾಣಿ ತಾಲ್ಲೂಕಿನ ಕಾರದಗಾ – ಭೋಜ್, ವೇದಗಂಗಾ ನದಿಗೆ ಅಡ್ಡಲಾಗಿರುವ ಭೋಜ್‌ವಾಡಿ – ಕುನ್ನೂರ, ಅಕ್ಕೋಳ–ಸಿದ್ನಾಳ, ಜತ್ರಾಟ–ಭೀವಶಿ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ.

Post Comments (+)