ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ದಶಕ ಪೂರೈಸಿದ ಪ್ರದರ್ಶನ ತಾಣ

ಇಂದಿರಾ ಗಾಂಧಿ ಉದ್ಘಾಟಿಸಿದ್ದ ವಸ್ತುಸಂಗ್ರಹಾಲಯ: ಅಪರೂಪದ ವಸ್ತುಗಳು ಇಲ್ಲಿವೆ
Last Updated 11 ಆಗಸ್ಟ್ 2018, 17:29 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರು ಇತಿಹಾಸ ಕಾಲದ ಖಡ್ಗ, ವೇಷಭೂಷಣ, ಇದಕ್ಕೂ ಹಿಂದಿನ ಕಾಲದ ಶಿಲ್ಪ ಮತ್ತು ಶಿಲಾಶಾಸನ ಸಂಗ್ರಹ ಕೇಂದ್ರವಾಗಿರುವ ಇಲ್ಲಿಯ ಕೋಟೆಯೊಳಗಿನ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೀಗ ಭರ್ತಿ 51 ವರ್ಷ.

ರಾಜ್ಯದ ಶಿಕ್ಷಣ ಮಂತ್ರಿಗಳಾಗಿದ್ದ ದಿವಂಗತ ಎಸ್.ಆರ್, ಕಂಠಿ ಅವರ ಕಾಳಜಿಯಿಂದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1967ರಲ್ಲಿ ಈ ವಸ್ತುಸಂಗ್ರಹಾಲಯ ಉದ್ಘಾಟಿಸಿದ್ದರು.

ಮೊದಲು ಸಂಗ್ರಹಾಲಯ ಹಂಚಿನ ಮನೆಯಲ್ಲಿ ಆರಂಭವಾಗಿತ್ತು. ಆಗ ಶಿಲ್ಪಗಳನ್ನು ಮಾತ್ರ ಸಂಗ್ರಹಿಸಿಡಲಾಗಿತ್ತು. ನಂತರ ಸಂಗ್ರಹಾಲಯದ ಸ್ವರೂಪ ಬದಲಾಯಿತು. 4 ಗ್ಯಾಲರಿಗಳಿರುವ ವಸ್ತುಸಂಗ್ರಹಾಲಯವು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವ್ಯಾಪ್ತಿಯಲ್ಲಿದೆ. ಇಲ್ಲಿನ ವಸ್ತುಗಳ ಪ್ರದರ್ಶನಕ್ಕೆ ಈಗ ಕಲಾತ್ಮಕತೆ ಮೆರಗು ನೀಡಲಾಗಿದೆ.

ಏನಿವೆ ಇಲ್ಲಿ: ಕಿತ್ತೂರು ಸಂಸ್ಥಾನ ಕಾಲದ ವಸ್ತುಗಳ ಜೊತೆಗೆ ಪ್ರಾಚೀನ ಚಾಲುಕ್ಯರಿಂದ (ಕ್ರಿ.ಶ. 500-753) ಹಿಡಿದು ವಿಜಯನಗರೋತ್ತರ (1561ರ ನಂತರ) ಕಾಲದ ವರೆಗಿನ ವಿವಿಧ ಶೈಲಿಯ ಧಾರ್ಮಿಕ, ಲೌಕಿಕ ಶಿಲ್ಪಗಳು ಮತ್ತು ಶಾಸನಗಳು ಇಲ್ಲಿವೆ.

ದೇಸಾಯಿ ಮನೆತನದ ವಸ್ತುವಿಶೇಷಗಳು: 1585ರಿಂದ 1824 ವರೆಗೆ ಆಳ್ವಿಕೆ ಮಾಡಿದ ದೇಸಾಯಿ ಅರಸರು ಕಾಲದ ವಿವಿಧ ಮಾದರಿಗಳ ಕತ್ತಿಗಳು, ಭರ್ಚಿಗಳು, ಗುರಾಣಿಗಳು, ಮಹಾದಂಡನಾಯಕ ಬಳಸುತ್ತಿದ್ದ ಚಿಲಕತ್ತು, ರಾಜ–ರಾಣಿಯರ ಹಾಗೂ ಸೈನಿಕರ ಉಡುಪುಗಳು, ಫಿರಂಗಿ ಗುಂಡುಗಳು ಇಲ್ಲಿ ಪ್ರದರ್ಶನಕ್ಕಿವೆ. ಬ್ರಿಟಿಷರು ಉದ್ದೇಶ ಪೂರ್ವಕವಾಗಿ ನಾಶಮಾಡಿದ ಭವ್ಯ ತೇಗದ ಮರದಿಂದ ನಿರ್ಮಿಸಿರುವ ಅರಮನೆಯ ಉತ್ಕೃಷ್ಟ ಕೆತ್ತನೆಯುಳ್ಳ ವಿವಿಧ ವಿನ್ಯಾಸಗಳ ಬಾಗಿಲು, ಕಿಟಕಿಗಳು ಮುಂತಾದ ವಾಸ್ತು ರಚನೆಗಳು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ ಎಂದು ಕ್ಯೂರೇಟರ್ ಎನ್.ರಾಘವೇಂದ್ರ ಮಾಹಿತಿ ನೀಡಿದರು.

11 ಮತ್ತು 12ನೇ ಶತಮಾನದ ಕನ್ನಡ ಶಿಲಾಶಾಸನಗಳು ಹಾಗೂ ತಾಮ್ರ ಫಲಕಗಳ ಮೇಲೆ ಕೆತ್ತಲಾದ ಶಾಸನಗಳು ಈ ಭಾಗದ ಸಾಂಸ್ಕೃತಿಕ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿರುವ ಒಂದು ಶಾಸನದಲ್ಲಿ ಕಿತ್ತೂರಿನ ಉಲ್ಲೇಖವಿದ್ದು ಸಾವಿರ ವರ್ಷಗಳಿಂದ ಇದೇ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದಿತ್ತು ಎಂಬ ಪ್ರಮುಖ ಅಂಶವನ್ನು ತಿಳಿಸುತ್ತದೆ ಎಂದು ಅವರು ಹೇಳುತ್ತಾರೆ.

ಆಧುನಿಕ ವರ್ಣಚಿತ್ರಗಳು: ಈ ಭಾಗದ ಕಲಾಕಾರರು ರಚಿಸಿದ ವೈವಿಧ್ಯಮಯವಾದ ವಿವಿಧ ಶೈಲಿಗಳ ಹಾಗೂ ವಿಷಯಗಳ ಸೃಜನಾತ್ಮಕ ಮತ್ತು ನೈಜವಾದ ಆಧುನಿಕ ವರ್ಣಚಿತ್ರಗಳನ್ನೂ ಇಲ್ಲಿವೆ. ರಾಣಿ ಚನ್ನಮ್ಮನ ಇತಿಹಾಸಕ್ಕೆ ಸಂಬಂಧಿಸಿದ ವರ್ಣಚಿತ್ರಗಳು, ಕಲ್ಮಠದ ಶ್ರೀಗಳ ವ್ಯಾಖ್ಯಾನ, ರಾಣಿ ಚನ್ನಮ್ಮ ಹಾಗೂ ಮಲ್ಲಸರ್ಜ ದೊರೆ ಪ್ರಥಮ ಭೇಟಿ ದೃಶ್ಯ, ಯುದ್ಧಕ್ಕೆ ಹೊರಟ ರಾಣಿ ಚನ್ನಮ್ಮಳ ಜತೆಗೆ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರಿನ ಬಾಳಪ್ಪನ ವರ್ಣಚಿತ್ರ, ಕಿತ್ತೂರು ಸಂಸ್ಥಾನದ ಮಹಾದಂಡನಾಯಕನಾಗಿದ್ದ ಸರದಾರ ಗುರುಸಿದ್ದಪ್ಪನೊಂದಿಗೆ ರಾಣಿ ಚನ್ನಮ್ಮ ದೃಶ್ಯ, ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾಗಿರುವ ದೃಶ್ಯ, ಬ್ರಿಟಿಷ್ ಸೈನಿಕರನ್ನು ಬಂಧಿಸಿ ಕರೆದೊಯ್ಯತ್ತಿರುವ ದೃಶ್ಯ, ಬ್ರಿಟಿಷ್ ಮಕ್ಕಳೊಂದಿಗೆ ಅರಮನೆಯಲ್ಲಿ ಆಟವಾಡುತ್ತಿರುವ ರಾಣಿ ಚೆನ್ನಮ್ಮನ ದೃಶ್ಯಗಳು ಮನಮೋಹಕವಾಗಿ ಚಿತ್ರೀಸಲ್ಪಟ್ಟಿವೆ.

650 ಪ್ರಾಚ್ಯವಸ್ತುಗಳು ಲಭ್ಯ
ಐತಿಹಾಸಿಕ ಸ್ಥಳವಾಗಿರುವ ಕಿತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಪ್ರಾಚ್ಯವಸ್ತುಗಳು ಸಿಗುತ್ತವೆ. ಕಳೆದ 5 ದಶಕದಿಂದಲೂ ಇಂತಹ ವಿಶೇಷ ವಸ್ತುಗಳ ಸಂಗ್ರಹಣೆ ಮಾಡಲಾಗುತ್ತಿದೆ. ಸದ್ಯ 650ಕ್ಕೂ ಹೆಚ್ಚು ಪ್ರಾಚ್ಯ ಅವಶೇಷಗಳನ್ನು ಸಂಗ್ರಹಿಸಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ತೆರೆದಿಟ್ಟಿದ್ದೇವೆ.
ಎನ್. ರಾಘವೇಂದ್ರ, ಕ್ಯೂರೇಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT