ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್ ಅರಮನೆಯ ಫೇರಿಟೇಲ್ ಮದುವೆ

ಹ್ಯಾರಿ– ಮೇಘನ್‌ ಮಾರ್ಕೆಲ್ ಮದುವೆಯ ಕಥೆ
Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಈಗಷ್ಟೇ ಮದುವೆಯೊಂದು ಮುಗಿದಿದೆ. ಚಪ್ಪರ ಕಳಚಿದ್ದಾರೆ. ಪತಾಕೆ, ತೋರಣ ಬಿಡಿಸಿದ್ದಾರೆ. ಬೀದಿ ಗುಡಿಸಿದ್ದಾರೆ. ವಾರದ ಹಿಂದೆ ಮದುವೆ ಮನೆಯಾಗಿದ್ದ ಬ್ರಿಟನ್ನಿನ ಲಂಡನ್, ವಿಂಡ್ಸರ್ ನಗರಗಳು ಇದೀಗ ಎಲ್ಲ ಊರುಗಳಂತೆಯೇ ತಾವು ಕೂಡ, ಎಲ್ಲ ಊರಿನ ಬೀದಿಗಳಂತೆಯೇ ತಮ್ಮೂರಿನ  ಬೀದಿಗಳು ಸಹ ಎಂಬ ಮನವರಿಕೆಯಲ್ಲಿ ಆಕಳಿಸಿ ಮೈಮುರಿದು ಎಚ್ಚರಗೊಳ್ಳುತ್ತಿವೆ. ಪ್ರತಿಬಾರಿ ಇಂತಹ ಮದುವೆಯೊಂದು ಇಲ್ಲಿ ನಡೆದಾಗ ಬ್ರಿಟನ್ನಿನ ಪತ್ರಿಕೆಗಳಲ್ಲಿ ಆ ಮದುವೆಗಳು ವೈಭವೀಕರಿಸಿಕೊಂಡು ಸುದ್ದಿಯಾಗುವುದು, ಬ್ರಿಟಿಷ್ ದೂರದರ್ಶನಗಳಲ್ಲಿ ಮಿಲಿಯನ್‌ಗಟ್ಟಲೆ ಜನ ಮದುವೆ ವೀಕ್ಷಿಸಿ ಹೊಸ ದಾಖಲೆ ನಿರ್ಮಿಸುವುದು ಈ ಮದುವೆಯಲ್ಲೂ ನಡೆಯಿತು.

ಮತ್ತೆ ಮದುವೆಯ ಸಡಗರದ ನಡುವೆಯೇ, ಬಳಕೆಯಾದ ಹೂವಿನ ಖರ್ಚು ಒಂದು ಕೋಟಿ ರೂಪಾಯಿ. ಕೇಕ್‌ಗಳ ಬೆಲೆ ಐವತ್ತು ಲಕ್ಷ ರೂಪಾಯಿ. ಊಟ, ಉಪಚಾರಕ್ಕೆ ಮೂರು ಕೋಟಿ ರೂಪಾಯಿ. ಇವುಗಳ ಜೊತೆ ವಾದ್ಯ, ಮೇಳ, ಭದ್ರತಾ ವ್ಯವಸ್ಥೆಗೆ ಮಾಡಿರುವ ವೆಚ್ಚ ಸೇರಿಸಿದರೆ ಸುಮಾರು ಇನ್ನೂರೋ ಮುನ್ನೂರೋ ಕೋಟಿ ರೂಪಾಯಿಯ ಮದುವೆ ಇದಾಗಿತ್ತು ಎನ್ನುವ ಅಂದಾಜಿನ ಸುದ್ದಿಯೂ ಹರಿದಾಡಿತು.

ಮತ್ತೆ ಈ ವ್ಯಯವನ್ನು ದೇಶದ ಜನಸಾಮಾನ್ಯರ ತೆರಿಗೆ ಹಣದ ಬೊಕ್ಕಸದಿಂದಲೇ ಬಳಸಲಾಗಿದೆ ಎನ್ನಲಾಯಿತು. ಹೀಗೆ ಮುಗಿದ ಮದುವೆ ಬ್ರಿಟನ್ನಿನ ಯುವರಾಜರಲ್ಲೊಬ್ಬ ಹ್ಯಾರಿ ಮತ್ತು ಅಮೆರಿಕ ಮೂಲದ ಹಾಲಿವುಡ್‌ ನಟಿ ಮೇಘನ್‌ ಮಾರ್ಕೆಲ್‌ರದು. ಮದುವೆ ಮನೆಯವರು ಆಯ್ದು ತೂಗಿ ಕರೆದದ್ದಕ್ಕೆ, ವಿಶೇಷ ಹೇಳಿಕೆ ಪತ್ರ ಪಡೆದದ್ದಕ್ಕೆ ಬಂದು ಹೋದ ಅತಿಥಿಗಳೆಲ್ಲ ಈಗ ತಮ್ಮ ತಮ್ಮ ಮನೆ ಸೇರಿದ್ದಾರೆ.

ಜಗತ್ತಿನ ಗಣ್ಯಾತಿಗಣ್ಯರನ್ನು ಆಹ್ವಾನಿಸುವ ಇಂತಹ ವಿವಾಹೋತ್ಸವದ ಕರೆಯೋಲೆ ಭಾರತದ ಪ್ರಸಿದ್ಧರನ್ನೂ ಬರಮಾಡಿಕೊಳ್ಳುತ್ತದೆ. ಸಿಂಹಾಸನಕ್ಕೆ ಎರಡನೆಯ ಸರದಿಯಲ್ಲಿರುವ ಪ್ರಿನ್ಸ್ ವಿಲಿಯಮ್ ಮದುವೆ 2011ರಲ್ಲಿ ನಡೆದಾಗ ಮುಂಬೈಯ ಡಬ್ಬಾವಾಲರಿಗೆ ವಿಶೇಷ ಆಹ್ವಾನವಿತ್ತು ಲಂಡನ್‌ಗೆ ಕರೆಸಲಾಗಿತ್ತು. ಸಿಂಹಾಸನಕ್ಕೆ ತನ್ನ ಅಣ್ಣನಿಗಿಂತ ಹೆಚ್ಚು ದೂರದಲ್ಲಿರುವ ಹ್ಯಾರಿಯ ಮದುವೆಗೆ ಆಹ್ವಾನಿತರ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿತ್ತು. ಹಾಗಾಗಿ, ಈ ಸಲದ ಮದುವೆಗೆ ಹೇಳಿಕೆ ಬರದಿದ್ದರೂ, ತಮಗೂ ಇಂಗ್ಲೆಂಡ್‌ನ ರಾಜಮನೆತನಕ್ಕೂ ಇರುವ ವಿಶೇಷ ಸಂಬಂಧದ ಪ್ರತೀಕವಾಗಿ ಮೇ 19ರ ಶನಿವಾರ ನಡೆದ ಹ್ಯಾರಿ- ಮೇಘನ್ ಮಾರ್ಕೆಲ್‌ರ ಮದುವೆಯ ದಿನ ಮುಂಬೈಯಲ್ಲಿ ಡಬ್ಬಾವಾಲಗಳು ಟಾಟಾ ಮೆಮೊರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ರೋಗಿಗಳಿಗೆ ವಿಶೇಷ ಊಟ, ತಿನಿಸು ನೀಡಿ ದೂರದಿಂದಲೇ ಮದುವೆಯಲ್ಲಿ ಪಾಲ್ಗೊಂಡರು.

ಹ್ಯಾರಿ- ಮೇಘನ್‌ ಮದುವೆ ಈಗ ಮುಗಿದ ಘಟನೆಯಾದರೂ, ರಾಜಮನೆತನದಲ್ಲಿ ಮದುವೆ ನಡೆಯುವಾಗಲೆಲ್ಲ ಹೀಗೊಂದು ಕಥೆ ನೆನಪಾಗುತ್ತದೆ.  ಇಂಗ್ಲೆಂಡ್‌ನ ಮಕ್ಕಳು ಓದುವ ಒಂದು ಜನಪ್ರಿಯ ಕಥೆ- ‘ರಾಜಕುಮಾರಿ ಮತ್ತು ಕಡಲೆಕಾಳು’. ಮದುವೆಗೆ ಹೆಣ್ಣು ಹುಡುಕಿಕೊಂಡು ರಾಜಕುಮಾರನೊಬ್ಬ ಊರು, ದೇಶ ಸುತ್ತುತ್ತಾನೆ. ರಾಜಕುಮಾರನ ತಾಯಿ, ಅಂದರೆ ಮಹಾರಾಣಿ ಅವನಿಗೆ ಹೇಳಿರುತ್ತಾಳೆ ‘ನಿಜವಾದ ರಾಜಕುಮಾರಿ ಎಂದರೆ ಆಕೆ ಸೂಕ್ಷ್ಮ ಮತ್ತು ಕೋಮಲ ಇರಬೇಕು’ ಎಂದು. ಜಗತ್ತೆಲ್ಲ ಹುಡುಕಿದರೂ ರಾಜಕುಮಾರನಿಗೆ ಸರಿಯಾದ ಹೆಣ್ಣು ಸಿಗುವುದಿಲ್ಲ.

ಒಂದು ಬಿರುಗಾಳಿಯ ಮಳೆ ಸುರಿಯುವ ರಾತ್ರಿ. ಒಬ್ಬಳು ಹುಡುಗಿ ರಾಜಕುಮಾರನ ಮನೆಯ ಬಾಗಿಲು ತಟ್ಟುತ್ತಾಳೆ. ರಾಜಕುಮಾರ ಬಾಗಿಲು ತೆರೆದರೆ ಹೊರಗೆ ನಿಂತಿದ್ದಾಳೆ ಸರಳ ಉಡುಪು ತೊಟ್ಟ ಒಬ್ಬ ಸುಂದರ ತರುಣಿ. ‘ನಾನೊಬ್ಬಳು ರಾಜಕುಮಾರಿ. ಆಸರೆ ಕೋರಿ ಬಂದಿದ್ದೇನೆ’ ಎನ್ನುತ್ತಾಳೆ. ಆಕೆಯ ಮುಖದಿಂದ ಮಳೆ ಹನಿಗಳು ತೊಟ್ಟಿಕ್ಕುತ್ತಿವೆ. ಉಟ್ಟ ಸಾಮಾನ್ಯ ಬಟ್ಟೆ ಮಳೆಯಲ್ಲಿ ತೋಯ್ದಿದೆ. ನೋಡಲಂತೂ ಚಂದ ಇರುವ ಹುಡುಗಿಯ ಉಡುಪು. ಪರಿಸ್ಥಿತಿ ನೋಡಿ ಈಕೆ ನಿಜವಾಗಿಯೂ ರಾಜಕುಮಾರಿಯೆ? ಎಂದು ಮಹಾರಾಣಿಗೆ ಮತ್ತು ರಾಜಕುಮಾರನಿಗೆ ಸಂಶಯ ಮೂಡುತ್ತದೆ. ಇರಲಿ ಪರೀಕ್ಷೆ ಮಾಡೋಣ ಎಂದು ಹುಡುಗಿಯನ್ನು ಒಳಗೆ ಬರ ಮಾಡಿಕೊಳ್ಳುತ್ತಾರೆ.

ಹುಡುಗಿ ಮಲಗಬೇಕಾದ ಕೋಣೆಯಲ್ಲಿ ಒಂದರ ಮೇಲೆ ಒಂದರಂತೆ ಇಪ್ಪತ್ತು ಮೆತ್ತನೆಯ ಹಾಸಿಗೆಗಳನ್ನು ಜೋಡಿಸುತ್ತಾರೆ. ತಳದ ಹಾಸಿಗೆಯ ಕೆಳಗೆ ಒಂದು ಕಡಲೆ ಕಾಳು ಇಡುತ್ತಾರೆ. ಏಣಿ ಇಟ್ಟು ಹುಡುಗಿಯನ್ನು ಹಾಸಿಗೆ ಏರಿಸುತ್ತಾರೆ. ರಾತ್ರಿ ಕಳೆದು ಬೆಳಗಾದ ಮೇಲೆ ಮಹಾರಾಣಿ ಹುಡುಗಿಯನ್ನು ಕೇಳುತ್ತಾಳೆ ‘ಸರಿಯಾಗಿ ನಿದ್ರೆ ಬಂತೆ?’ ಎಂದು. ಹುಡುಗಿ ಹೇಳುತ್ತಾಳೆ, ‘ಇಲ್ಲ, ಹಾಸಿಗೆಯ ಕೆಳಗೆ ಎಲ್ಲೋ ಒಂದು ಉರುಟಾದ ಗಟ್ಟಿ ವಸ್ತು ಇತ್ತು. ಹಾಸಿಗೆಯ ಮೇಲೆ ಎತ್ತ ಹೊರಳಿದರೂ ನಿದ್ರೆ ಹತ್ತಲೇ ಇಲ್ಲ’ ಎಂದು. ಮಹಾರಾಣಿಗೆ ಸಂತೋಷ ಆಗುತ್ತದೆ ‘ಇಪ್ಪತ್ತು ಹಾಸಿಗೆಗಳ ಅಟ್ಟಿಯ ಕೆಳಗೆ ಇಟ್ಟ ಸಣ್ಣ ಕಡಲೆ ಕಾಲಿನ ಸ್ಪರ್ಶಕ್ಕೆ ನಿದ್ರೆ ಮಾಡದ ಈಕೆಯೇ ನಿಜವಾದ ರಾಜಕುಮಾರಿ’ ಎನ್ನುತ್ತಾಳೆ.

ಮುಂದೆ ಬಹಳ ಬೇಗ ರಾಜಕುಮಾರ ಮತ್ತು ರಾಜಕುಮಾರಿ ಮದುವೆ ಆಗುತ್ತಾರೆ. ಕಥೆ ಅಲ್ಲಿಗೆ ಮುಗಿಯುತ್ತದೆ. ಕಥೆ ಅಷ್ಟಕ್ಕೇ ಮುಗಿದದ್ದಕ್ಕೊ ಅಥವಾ ಕಥೆ ಬರೆಯುವವರು  ಅಷ್ಟಕ್ಕೇ ನಿಲ್ಲಿಸಿದ್ದಕ್ಕೋ ಮಕ್ಕಳು ಓದುವ ಹೆಚ್ಚಿನ ಕಥೆಗಳಂತೆ ಈ ಕಥೆಯೂ ಸುಖಾಂತ್ಯವಾಗುತ್ತದೆ. ಅಷ್ಟೊತ್ತು ಅರೆನಿದ್ರೆಯಲ್ಲಿ ಕಥೆ ಓದಿದ, ಕೇಳಿಸಿಕೊಂಡ ಮಗು ‘ಫೇರಿಟೇಲ್’ ಪುಸ್ತಕವನ್ನು ದಿಂಬಿನ ಮಗ್ಗುಲಲ್ಲಿ ಮಡಚಿಟ್ಟು ಸುಖ ನಿದ್ರೆಗೆ ಜಾರುತ್ತದೆ.
ಇಂಗ್ಲೆಂಡ್‌ನ ಯುವರಾಜರಲ್ಲೊಬ್ಬನಾದ ಹ್ಯಾರಿಗೆ ಮೊನ್ನೆ ಮದುವೆ ಆದದ್ದು ಅರಸೊತ್ತಿಗೆಯ, ರಾಜಮನೆತನದ ಪರಿಚಯ ಇಲ್ಲದ ಒಬ್ಬ ಚಿತ್ರನಟಿಯ  ಜೊತೆ. ಮಕ್ಕಳ ಕಥೆಯಲ್ಲಿ ಮಹಾರಾಣಿ ಬಯಸುವಂತೆ ಈ ಹುಡುಗಿ ಸೂಕ್ಷ್ಮಮತಿಯೊ ಕೋಮಲಕಾಯಳೊ ಗೊತ್ತಿಲ್ಲ. ಪರೀಕ್ಷೆ ಆಗಿಲ್ಲ. ಆದರೆ, ಅರಮನೆ ಬದುಕಿನ ಪರೀಕ್ಷೆಗಳು, ಸಂಶಯಗಳು, ಪರಂಪರೆಗಳು, ಕಟ್ಟಳೆಗಳು, ಕಿವಿಮಾತುಗಳು, ಗುಸುಗುಸುಗಳು ಇನ್ನೂ ಏನೇನೋ ಈಕೆಯನ್ನೂ ಕಾಯುತ್ತಿವೆ. 

ಹ್ಯಾರಿ, ಅರಮನೆಯ ರೀತಿ ರಿವಾಜುಗಳ ಕೋಟೆಯಲ್ಲಿ ಬೆಳೆದವನಾದರೆ ಮೇಘನ್ ಚಿತ್ರರಂಗದ ಬೆಳಕು ಥಳುಕಿನಲ್ಲಿ ಬೆಳೆದವಳು. ಆತ ಅಟ್ಲಾಂಟಿಕ್ ಸಾಗರದ ಒಂದು ದಡದವನಾದರೆ ಆಕೆ ಅದೇ ಸಾಗರದ ಇನ್ನೊಂದು ತೀರದವಳು. ಅವನು  ಸಂಪ್ರದಾಯಸ್ಥ ರಾಜವಂಶದ ಶುದ್ಧ ಬಿಳಿಯನಾದರೆ ಅವಳು ತಾನು ಅರ್ಧ ಬಿಳಿಯಳು; ಅರ್ಧ ಕರಿಯಳಾದ ಮಿಶ್ರಜನಾಂಗಿ ಎಂದು ತಂದೆ, ತಾಯಂದಿರ ಬೇರೆ ಬೇರೆ ಮೂಲದ ಮೂಲಕವೇ ಪರಿಚಯಿಸಿಕೊಳ್ಳುವವಳು. ಇವರಿಬ್ಬರೂ ಮದುವೆ ಆಗುತ್ತೇವೆಂದು ನಿರ್ಧರಿಸಿದ್ದು ಪ್ರವಾಸವೊಂದರಲ್ಲಿ ಬಯಲಲ್ಲಿ ಡೇರೆ ಹಾಕಿಕೊಂಡು ದಿನ– ರಾತ್ರಿ ಕಳೆಯುತ್ತಿದ್ದಾಗ.

ಒಂದು ಪ್ರೇಮಕಥೆಗೆ ಇರಬೇಕಾದ ಕಚಗುಳಿ, ರೋಚಕತೆಗಳೆಲ್ಲ ಇವರಿಬ್ಬರ ಮದುವೆಯ ಹಿಂದಿನ ಕಥೆಯಲ್ಲಿ ಇದೆ. ಇಲ್ಲಿನ ಅರಸೊತ್ತಿಗೆಯ ಬಗ್ಗೆ ಗೌರವ, ಪ್ರೀತಿ ಇರಿಸಿಕೊಂಡವರು, ಪ್ರೇಮ–ಪ್ರಣಯದ ಕಥೆಗಳನ್ನು ಇಷ್ಟಪಡುವವರು, ಫೇರಿಟೇಲ್ ಕಥೆ ಓದುತ್ತ ಚಂದದ ಕನಸನ್ನು ಕಾಣುತ್ತ ನಿದ್ದೆ ಹೋಗುವ ಮಕ್ಕಳಂತೆಯೇ ಇವರ ಮದುವೆಯ ಹಿಂದು ಮುಂದಿನ ವರ್ಣರಂಜಿತ ಕಥೆಯಲ್ಲಿ ಇದೀಗ ತೇಲಿಹೋಗಿದ್ದಾರೆ.
ಮದುವೆಯ ದಿನ ಮೇಘನ್‌ಳ ಸಣ್ಣ ಸಣ್ಣ ಹೆಜ್ಜೆಯಲ್ಲೂ ಕಿರುನಗೆಯಲ್ಲೂ ವಿಶೇಷ ಅರ್ಥವನ್ನು ಕಂಡು, ಹ್ಯಾರಿಯ ಮುಖದ ಚಿಕ್ಕ ಚಿಕ್ಕ ಭಾವಕ್ಕೂ ಕಲ್ಪನೆ– ಕಾವ್ಯ ಆರೋಪಿಸಿ ಮದುವೆಗೆ ಬಂದವರು, ಮದುವೆ ನೋಡಿದವರು, ಮದುವೆ ಅಂದರೆ ಹೀಗಿರಬೇಕು, ಜೋಡಿ ಎಂದರೆ ಇವರಂತಿರಬೇಕು, ಪ್ರೇಮಕಥೆಯೆಂದರೆ ಹೀಗೆ ನಡೆಯಬೇಕು ಎಂದು ಒಂದು ತರಹದ ಉನ್ಮಾದದಲ್ಲಿ ಮಾತಾಡುತ್ತಿದ್ದರೆ. ಕಥೆ ಕೇಳುವವರು ನಿದ್ರೆಗೆ ಜಾರಿದ ಮೇಲೆ ಅದೆಷ್ಟೋ ಕಥೆಗಳು ಮುಂದುವರಿದು ನಿಜಜೀವನದ ಹಾದಿಯಲ್ಲಿ ಎಲ್ಲೆಲ್ಲೋ ಸಾಗುವುದು ಹೇಗೇಗೋ ಅಂತ್ಯ ಕಾಣುವುದು ಇದೆಯಲ್ಲ! ಪರಂಪರೆ, ಸಂಪ್ರದಾಯ, ಮಡಿವಂತಿಕೆಗಳ ಭಾರದಲ್ಲಿ ನಲುಗುವ ರಾಜಮನೆತನ, ಈ ಮದುವೆಯ ಮೂಲಕ ವೈರುಧ್ಯಪೂರ್ಣ ವ್ಯಕ್ತಿತ್ವಗಳ, ಭಿನ್ನ ಸಂಸ್ಕೃತಿಗಳ ಕೂಡುವಿಕೆಗೆ ಉದಾಹರಣೆ ಆದದ್ದಂತೂ ಹೌದು.
ಮತ್ತೆ ಇಂಗ್ಲೆಂಡ್ ಅರಮನೆಯ ಮದುವೆಗಳು ಎಷ್ಟು ವೈಭವದಿಂದ ನಡೆದರೂ ಎಷ್ಟು ಸುದ್ದಿ ಮಾಡಿದರೂ, ಆ ರಾಜಕುಮಾರ– ಕುಮಾರಿಯರ ಮದುವೆಯ ನಂತರದ ಬದುಕು ಸಮಸ್ಯೆಗಳು ಸುಳಿಗಳಲ್ಲಿ ಸುತ್ತಿದ, ಎಲ್ಲ ಜನಸಾಮಾನ್ಯರ ಬದುಕಿನಂತೆಯೇ ಕಂಡ ನಿದರ್ಶನಗಳಿರುವುದೂ ಸತ್ಯ.

ಇನ್ನು ಕೆಲವು ಸಾರಿ ರಾಜಮನೆತನದವರ ಬಾಳಿನ ಏಳುಬೀಳುಗಳು ಸಾಮಾನ್ಯರ ಬದುಕಿಗಿಂತ ಭೀಕರವಾದ ದೃಷ್ಟಾಂತಗಳೂ ಇವೆ. ಬ್ರಿಟನ್ನಿನಲ್ಲಿ ಅತ್ಯಂತ ಹೆಚ್ಚು ಜನಾನುರಾಗಿ, ಜನಪ್ರಿಯತೆ ಪಡೆದಿದ್ದ ಹ್ಯಾರಿಯ ತಾಯಿ ಡಯಾನಾಳ ಬದುಕು ಪ್ರಕ್ಷುಬ್ಧವಾಗಿತ್ತು. ಪತ್ರಕರ್ತರ, ಛಾಯಾಗ್ರಾಹಕರ ಆಕರ್ಷಣೆಯ ಕೇಂದ್ರವಾಗಿ ಹೋದಲ್ಲಿ ಬಂದಲ್ಲಿ ನಿಂತಲ್ಲಿ ಕುಳಿತಲ್ಲಿ ಅಷ್ಟೇ ಯಾಕೆ ಜಗತ್ತಲ್ಲೇ ಅತ್ಯಂತ ಹೆಚ್ಚು ಫೋಟೊ ಕ್ಲಿಕ್ಕಿಸಿಕೊಂಡ ಮಹಿಳೆ ಎಂಬ ಹೆಮ್ಮೆ ಪಡೆದಿದ್ದ  ಡಯಾನಾಳ ಬಾಳು ಡೋಲಾಯಮಾನವಾಗಿತ್ತು. ಬ್ರಿಟನ್ನಿನ ಅರಮನೆಗೆ ಇವೆಲ್ಲವೂ ಪರಿಚಿತ ಬಿಡಿ. ಅರಮನೆಯ ಗೋಡೆಗಳು ಹಿಂದೆ ಸಂಭವಿಸಿದ, ಮುಂದೆ ಘಟಿಸಲಿರುವ ವಿಚ್ಛೇದನ, ಪ್ರಣಯವಂಚನೆ, ಅಸೂಯೆ, ಆಷಾಢಭೂತಿತನ ಇತ್ಯಾದಿ ಕಥೆಗಳನ್ನೇ ಪ್ರತಿಧ್ವನಿಸುತ್ತ ತಮ್ಮೊಳಗೆ ಮಾತಾಡುತ್ತಿರುತ್ತವೆ.

ಇನ್ನು ಅರಮನೆಯ ಗೋಡೆಗಳ ಹೊರಗೆ, ಮದುವೆಗೆ ಸರ್ಕಾರ ನೀಡಿರುವ ಪ್ರಚಾರ ಮತ್ತು ಖರ್ಚಾದ ಹಣ, ಬ್ರೆಕ್ಸಿಟ್ ಅನಿಶ್ಚಿತತೆಯಲ್ಲಿರುವ ಅರ್ಥ ವ್ಯವಸ್ಥೆ,  ಸಕಾಲಕ್ಕೆ ಮಳೆ ಸುರಿಯದೆ ಕಳವಳದಲ್ಲಿರುವ ಇಂಗ್ಲೆಂಡ್‌ ರೈತರು, ಉನ್ನತ ಶಿಕ್ಷಣಕ್ಕೆ ಶುಲ್ಕ ಹೆಚ್ಚಿಸಿದ್ದಕ್ಕೆ ಬೇಸತ್ತ ವಿದ್ಯಾರ್ಥಿಗಳು... ಹೀಗೆ ಸಮಸ್ಯೆಗಳ ಪಟ್ಟಿಯನ್ನು ಮುಂದಿಟ್ಟು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದೆ ಒಂದು ವರ್ಗ. ‘ರಾಯಲ್ ವೆಡ್ಡಿಂಗ್’ ನೆಪದಲ್ಲಿ ಅಂಗಡಿ, ಮಾರುಕಟ್ಟೆಗಳಲ್ಲಿ ನೆನಪಿನ ಕಾಣಿಕೆಗಳು, ಉಡುಗೊರೆಗಳು, ತಿನಿಸಿನ ಡಬ್ಬಗಳು, ವಸ್ತ್ರ, ಆಭರಣಗಳು ತುಂಬಿಕೊಂಡದ್ದು ಜನರಿಗೆ ಹಣ ಖರ್ಚು ಮಾಡುವ ಅವಕಾಶ ಕಲ್ಪಿಸಿ, ಪ್ರವಾಸಿಗರನ್ನು ಆಕರ್ಷಿಸಿ ದೇಶದ ಬೊಕ್ಕಸವನ್ನು ತುಂಬಿಸುವ ಜಾಣ ತಂತ್ರವಾಗಿ ಕಂಡಿದೆ.

ಇಲ್ಲಿನ ಪತ್ರಿಕೆಗಳು ಈ ಮದುವೆಗೆ ಇಷ್ಟು ಸಂಭ್ರಮ ಬೇಕೇ ಬೇಡವೇ ಎಂದು ಪ್ರತಿಬಾರಿ ಇಂತಹ ರಾಜಮದುವೆಯೊಂದು ಅರಮನೆಯಲ್ಲಿ ನಡೆದಾಗ ಚರ್ಚಿಸಿದಂತೆಯೇ ಈ ಬಾರಿಯೂ ಪುಟಗಟ್ಟಲೆ ಬರೆದಿವೆ. ಯುವಜನರ ನಡುವೆ ಗೌರವ ಕಳೆದುಕೊಳ್ಳುತ್ತಿರುವ ಅರಮನೆ ಮತ್ತು ಸಂಬಂಧಿಸಿದ ಪಾರಂಪರಿಕ ಮೌಲ್ಯಗಳನ್ನು ಚಿಕ್ಕ ಮಕ್ಕಳಲ್ಲೂ ತುಂಬುವ ಯತ್ನವಾಗಿಯೂ ಈ ಮದುವೆ ಕೆಲವರಿಗೆ ತೋರುತ್ತದೆ. ಅರ್ಥಶಾಸ್ತ್ರಜ್ಞರು ಇಂತಹದೊಂದು ಮದುವೆ ದೇಶದ ಬೊಕ್ಕಸಕ್ಕೆ ಎಷ್ಟು ಮಿಲಿಯನ್ ಪೌಂಡುಗಳ ಕನ್ನ ಹಾಕಿದೆ ಎಂದು ಲೆಕ್ಕ ಮಾಡಿ ಹೇಳಿದ್ದಾರೆ.

ಇಲ್ಲಿನ ಸ್ತ್ರೀವಾದಿ ಗುಂಪುಗಳು, ಅಮೆರಿಕದ ಚಿತ್ರರಂಗದ ತಾರೆ ಮೇಘನ್ ಮದುವೆಯ ನಂತರ ತನ್ನ ವೃತ್ತಿಜೀವನ ಬಿಡಲೇಬಾರದು; ಮದುವೆಯ ನಂತರವೂ ತನ್ನ ವೃತ್ತಿ ಮುಂದುವರಿಸಲಿ ಎಂದು ವಾದಿಸಿವೆ. ಇನ್ನು ಇಂಗ್ಲೆಂಡ್ ಅರಮನೆಯಲ್ಲಿ  ಸಾಮಾನ್ಯವಾದ ಸರಸ– ವಿರಸಗಳ, ಮಿಲನ– ವಿಚ್ಛೇದನಗಳ ವರ್ಣರಂಜಿತ ಕಥೆಗಳನ್ನು ತಿಳಿದವರು ಈ ಮದುವೆ ಬಗ್ಗೆ ತಾತ್ಸಾರ ತಳೆದಿದ್ದಾರೆ ಹಾಗೂ ನಿರ್ಲಕ್ಷ್ಯದಲ್ಲಿ ಇದ್ದಾರೆ. ನನ್ನ ಕಚೇರಿಯ ಮಹಿಳಾ ಸಹೋದ್ಯೋಗಿಗಳು, ನಮಗೆ ಇದಾವುದೂ ಗೊತ್ತಿಲ್ಲ, ರಾಜಕುಮಾರಿ ಯಾವ ಉಡುಪು ತೊಡುತ್ತಾಳೆ ಎನ್ನುವುದನ್ನಷ್ಟೇ ನಮಗೆ ನೋಡಬೇಕಾಗಿತ್ತು ಎಂದಿದ್ದರು.

ಈ ರಾಯಲ್ ವೆಡ್ಡಿಂಗ್ ಸಮಯದ ತರತರಹದ ಮಾತುಗಳು, ನಗೆಗಳು, ಹೆಣ್ಣು– ಗಂಡಿನ ಕಡೆಯವರ, ಊಟಕ್ಕೆ ಬಂದವರ, ಹೇಳಿಕೆ ಸಿಗದವರ, ದೂರ ನಿಂತೇ ನೋಡುವವರ ತಕರಾರುಗಳು, ಕಥೆಗಳು, ಸುದ್ದಿಗಳು ಇವೆಲ್ಲವೂ ಮುಗಿದು  ಮದುವೆ ಮನೆ ತಣ್ಣಗೆ ನಿಜಸ್ವರೂಪಕ್ಕೆ ಮರಳುತ್ತಿದೆ. ಹೀಗಿರುವಾಗ ಮದುವೆ ಹಾಗೂ ಸಂಸಾರ ಇವೆರಡರಿಂದಲೂ ದೂರ ಇರುವ ವಿರಾಗಿಯೊಬ್ಬ ಬಿ.ಬಿ.ಸಿ ರೇಡಿಯೊದ ಬೆಳಗಿನ ಚಿಂತನಾ ಕಾರ್ಯಕ್ರಮದಲ್ಲಿ ನೂತನ ವಧು–ವರರಿಗೆ ಕಿವಿಮಾತು ಹೇಳಿದ್ದಾನೆ.

‘ಮದುವೆ ಎಂಬ ಸಂಬಂಧದಲ್ಲಿ ಪ್ರತಿ ಗಂಡ– ಹೆಂಡಿರ ಜೋಡಿಯೂ ರಾಜ–ರಾಣಿಯರಂತೆಯೇ’ ಎಂದು ತತ್ವಜ್ಞಾನಿಯಂತೆ ಮಾತಾಡಿದ್ದಾನೆ. ಗಂಡಿನ ಕೈ ಹಿಡಿಯುವ ಹೆಣ್ಣೊಬ್ಬಳು ರಾಣಿಯೇ. ಮತ್ತೆ ಆ ಹೆಣ್ಣನ್ನು ಪ್ರೀತಿ– ಗೌರವದಿಂದ ಕಾಣುವ ಪ್ರತಿ ಗಂಡೂ ರಾಜನೇ ಎಂದು ಅಧ್ಯಾತ್ಮದ ವರಸೆಯಲ್ಲಿ ಉಸುರಿದ್ದಾನೆ.

ಮತ್ತೆ ಸಾಂಸಾರಿಕ ಗುಟ್ಟಿನ ಬಗೆಗಿನ ತನ್ನ ಈ ಸರಳ  ಹಿತವಚನ ಎಲ್ಲ ಹೊಸ ಮದುಮಕ್ಕಳಿಗೂ, ಹಳೆ ಕೌಟುಂಬಿಕರಿಗೂ, ಅರಮನೆಯ ಒಳಗೂ ಹೊರಗೂ, ಪ್ರೇಮಿಸುವವರಿಗೂ, ಮದುವೆ ಆಗುವವರಿಗೂ ಎಲ್ಲರಿಗೂ ಮುಟ್ಟಲಿ ಎಂದೂ ಹಾರೈಸಿದ್ದಾನೆ.

ಮದುವೆ ಈಗ ಮುಗಿದಿದೆ. ಮದುವೆ ಮನೆಯಾಗಿದ್ದ ಲಂಡನ್ ಹಾಗೂ ವಿಂಡ್ಸರ್ ನಗರ ಇದೀಗ ಎಲ್ಲ ಊರುಗಳಂತೆಯೇ ತಾವು ಕೂಡ, ಎಲ್ಲ ಊರಿನ ಬೀದಿಗಳಂತೆಯೇ ತಮ್ಮೂರಿನ ಬೀದಿಗಳೂ ಎಂಬ ಮನವರಿಕೆಯಲ್ಲಿ ಮೈಮುರಿದು ಎಚ್ಚರಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT